ಬೇರೆ ದೇಶಗಳಲ್ಲಿ ಚೀನಾ ಆಕ್ರಮಣಕಾರಿ, ತನ್ನ ದೇಶದಲ್ಲಿ ದಮನಕಾರಿ!

masthmagaa.com:

ವಿದೇಶಗಳಲ್ಲಿ ಚೀನಾ ತುಂಬಾ ಅಗ್ರೆಸ್ಸಿವ್ ಆಗಿ ವರ್ತಿಸುತ್ತಿದೆ ಅಂತ ಅಮೆರಿಕದ ಸ್ಟೇಟ್​ ಸೆಕ್ರೆಟರಿ ಆಂಟೋನಿ ಬ್ಲಿಂಕನ್ ಹೇಳಿದ್ದಾರೆ. ಚೀನಾ ಜೊತೆ ಅಮೆರಿಕ ಸೇನಾ ಮುಖಾಮುಖಿಯಾಗುವತ್ತ ಸಾಗುತ್ತಿದೆಯಾ ಅಂತ ಕೇಳಿದ ಪ್ರಶ್ನೆಗೆ, ಸೇನಾ ಮುಖಾಮುಖಿ ಅನ್ನೋದು ಎರಡೂ ದೇಶಗಳ ಇಂಟರೆಸ್ಟ್​ಗೆ ವಿರುದ್ಧವಾಗಿದೆ. ಆದ್ರೆ ಕಳೆದ ಕೆಲ ವರ್ಷಗಳಿಂದ ಚೀನಾ ವಿದೇಶಗಳಲ್ಲಿ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಆದ್ರೆ ತನ್ನ ದೇಶದಲ್ಲಿ ಹೆಚ್ಚು ದಮನಕಾರಿ ನೀತಿಯನ್ನ ಅನುಸರಿಸುತ್ತಿದೆ. ಇದೇ ನಿಜವಾದ ಸಂಗತಿ ಅಂತ ಆಂಟೋನಿ ಬ್ಲಿಂಕನ್ ಹೇಳಿದ್ದಾರೆ. ಅಮೆರಿಕದ ಸ್ಟೇಟ್​ ಸೆಕ್ರೆಟರಿ ಅಂದ್ರೆ ನಮ್ಮ ದೇಶದ ವಿದೇಶಾಂಗ ಸಚಿವರಿಗೆ ಸಮ. ಲಂಡನ್​ನಲ್ಲಿ ಜಿ7 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೀತಿದೆ. ಈ ಹಿನ್ನೆಲೆ ಬ್ಲಿಂಕನ್​ ಲಂಡನ್​ಗೆ ಆಗಮಿಸಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಕೂಡ ಲಂಡನ್​ಗೆ ಹೋಗಿದ್ದಾರೆ. ಜಿ7 ಅಂದ್ರೆ ಗ್ರೂಪ್ ಆಫ್ ಸೆವೆನ್ ಅಂತ. ಅಮೆರಿಕ, ಬ್ರಿಟನ್, ಫ್ರಾನ್ಸ್​, ಜರ್ಮನಿ, ಇಟಲಿ, ಜಪಾನ್ ಮತ್ತು ಕೆನಡಾ – ಈ ಏಳು ರಾಷ್ಟ್ರಗಳ ಮೈತ್ರಿಕೂಟ ಇದಾಗಿದೆ. ಈ ವರ್ಷದ ಜೂನ್​ನಲ್ಲಿ ಬ್ರಿಟನ್​ನಲ್ಲಿ ಜಿ7 ಶೃಂಗಸಭೆ ನಡೆಯಲಿದೆ. ಅದರಲ್ಲಿ 7 ರಾಷ್ಟ್ರಗಳ ಮುಖ್ಯಸ್ಥರು, ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳು ಮತ್ತು ಅತಿಥಿ ದೇಶಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಈ ಸಲ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಮತ್ತು ಬ್ರುನೈ ದೇಶಗಳಿಗೆ ಅತಿಥಿಗಳಾಗಿ ಆಹ್ವಾನ ಕೊಟ್ಟಿದೆ ಬ್ರಿಟನ್​. ಈ ಸಭೆಯಲ್ಲಿ ಕೊರೋನಾ, ಆರ್ಥಿಕ ಚೇತರಿಕೆ, ಹವಾಮಾನ ಬದಲಾವಣೆ, ಮಾನವ ಹಕ್ಕು, ಆಹಾರ ಭದ್ರತೆ ಸೇರಿದಂತೆ ಚೀನಾ ವಿಚಾರ ಕೂಡ ಚರ್ಚೆಗೆ ಬರುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply