ಭಾರತಕ್ಕೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಭೇಟಿ, ಏನ್‌ ಹೇಳಿದ್ರು ನೋಡಿ?

masthmagaa.com:

ತವರಿನಲ್ಲಿ ವಿಪರೀತ ವಿರೋಧ ಎದುರಿಸ್ತಾ ಇರೋ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಇವತ್ತು ಗುಜರಾತ್‌ಗೆ ಬಂದಿಳಿದಿದ್ದಾರೆ. ಎರಡು ದಿನದ ಭಾರತ ಪ್ರವಾಸ ಕೈಗೊಂಡಿರೋ ಅವ್ರನ್ನ ಗುಜರಾತ್‌ ಸಿಎಂ ಭೂಪೆಂದ್ರ ಪಟೇಲ್‌ ಅಹ್ಮದಾಬಾದ್‌ ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ್ರು. ನಂತ್ರ ಬೋರಿಸ್‌ ಜಾನ್ಸ್‌ನ್‌ ಗಾಂಧೀಜಿಯವ್ರ ಸಾಬರಮತಿ ಆಶ್ರಮಕ್ಕೆ ಭೇಟಿ ಕೊಟ್ರು. ರೂಢಿಯಂತೆ ಅಲ್ಲಿ ಚರಕ ತಿರುಗಿಸಿದ ಅವ್ರು, ವಿಸಿಟರ್ಸ್‌ ಪುಸ್ತಕದಲ್ಲಿ “ಇಂತಹ ಅದ್ಭುತ ವ್ಯಕ್ತಿಯ ‌ಈ ಸ್ಥಳಕ್ಕೆ ಬಂದಿದ್ದು ನನ್ನ ಸೌಭಾಗ್ಯ” ಅಂತ ಬರೆದಿದ್ದಾರೆ. ಇನ್ನು ಸಾಬರಮತಿ ಆಶ್ರಮದಲ್ಲಿ ಅವ್ರಿಗೆ ಮಹಾತ್ಮಗಾಂಧಿ ಬರೆದ ಆದ್ರೆ ಪ್ರಕಟಣೆ ಆಗದ ʼಗೈಡ್‌ ಟು ಲಂಡನ್‌ʼ ಅನ್ನೋ ಪುಸ್ತಕವನ್ನ ಕೊಡುಗೆ ನೀಡಲಾಯ್ತು. ಬ್ರಿಟನ್‌ ಪ್ರಧಾನಿಯ ಈ ಎರಡು ದಿನದ ಪ್ರವಾಸ ಇಂಡೋ-ಫೆಸಿಫಿಕ್‌ ಭಾಗದಲ್ಲಿ ಉಭಯ ದೇಶಗಳ ನಡುವೆ ಸಹಕಾರವನ್ನ ಹೆಚ್ಚಿಸಲಿಕ್ಕೆ ಮತ್ತು ಫ್ರೀ ಟ್ರೇಡ್‌ ಅಗ್ರಿಮೆಂಟ್‌(FTA) ಅಂದ್ರೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮೊದಲ ಹೆಜ್ಜೆಯಾಗಲಿದೆ ಅಂತ ಹೇಳಲಾಗಿದೆ. ಜೊತೆಗೆ ಈ ಸಮಯದಲ್ಲಿ ಎರಡು ದೇಶಗಳ ಉದ್ಯಮಗಳು ಸಾಫ್ಟ್‌ವೇರ್‌ ಇಂಜನೀಯರಿಂಗ್‌ನಿಂದ ಹಿಡಿದು ವೈದ್ಯಕೀಯ ಕ್ಷೇತ್ರದವರೆಗೆ ಸುಮಾರು ಒಂದು ಬಿಲಿಯನ್‌ ಪೌಂಡ್‌ ಅಂದ್ರೆ ಹತ್ತತ್ರ ಒಂದು ಲಕ್ಷ ಕೋಟಿ ರುಪಾಯಿಯ ಹೂಡಿಕೆ ಮತ್ತು ರಫ್ತು ಒಪ್ಪಂದಗಳಿಗೆ ಅಂಕಿತ ಬೀಳಲಿದೆ ಅಂತ ಹೇಳಲಾಗ್ತಿದೆ. ಬೋರಿಸ್‌ ಜಾನ್ಸನ್‌ ತಮ್ಮ ಭೇಟಿಯನ್ನ ಗುಜರಾತ್‌ನಿಂದ ಶುರು ಮಾಡಿದ್ದು, ಇಲ್ಲಿ ಅವ್ರು ಗೌತಮ್‌ ಅದಾನಿ ಮತ್ತು ಇನ್ನಿತರೇ ಉದ್ಯಮಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ನಂತ್ರ ಸಂಜೆ ದಿಲ್ಲಿಗೆ ಹೋಗಿ ನಾಳೆ ಪ್ರಧಾನಿ ಮೋದಿ ಅವ್ರನ್ನ ಭೇಟಿ ಮಾಡಲಿದ್ದಾರೆ.
ಇನ್ನು ಇಲ್ಲಿಗೆ ಬರೋವಾಗ ವಿಮಾನದಲ್ಲಿ ಮಾತಾಡಿದ ಅವ್ರು, ಪ್ರತಿಭಾವಂತ ವ್ಯಕ್ತಿಗಳು ತಮ್ಮ ದೇಶಕ್ಕೆ ಬರ್ಬೇಕು ಹಾಗಾಗಿ ಭಾರತೀಯರಿಗೆ ಹೆಚ್ಚಿನ ವೀಸಾ ನೀಡ್ತೇವೆ ಅಂತ ಭರವಸೆ ನೀಡಿದ್ರು. ಇನ್ನು ಇದೇ ಸಮಯದಲ್ಲಿ ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್‌ ಮಾತಾಡಿ, ಯುಕ್ರೇನ್‌ ವಿಚಾರದಲ್ಲಿ ನಾವು ಭಾರತಕ್ಕೆ ಲೆಕ್ಚರ್‌ ಅಂದ್ರೆ ಪಾಠ ಮಾಡೋದಿಲ್ಲ. ನಾವು ಬರೀ ನಮ್ಮ ಅಭಿಪ್ರಾಯಗಳನ್ನ ಇಡ್ತೀವಿ. ಬೋರಿಸ್‌ ಜಾನ್ಸನ್‌ ಕೂಡ ಭಾರತದಲ್ಲಿ ಅದೇ ನಿಲುವು ತಗೋತಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply