ಆರೋಪಿ ಚೈತ್ರ ಕುಂದಾಪುರ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಪೊಲೀಸರು! ಎಷ್ಟಿತ್ತು ಗೊತ್ತಾ ಆಸ್ತಿ?

masthmagaa.com:

ಬಿಜೆಪಿ ಟಿಕೆಟ್‌ ಕೊಡಿಸೋದಾಗಿ ವಂಚನೆ ಕೇಸ್‌ನಲ್ಲಿ ಬಂಧಿಸಲಾಗಿರುವ ಚೈತ್ರ ಮನೆಯಲ್ಲಿ 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಸಂಬಂಧಿಕರ ಹೆಸರಿನಲ್ಲಿ ಕೋಟಿ ರೂಪಾಯಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.
ಚೈತ್ರಾಗೆ ಸೇರಿದ 1.8 ಕೋಟಿ ರೂಪಾಯಿ Fixed Depositನ್ನ ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನೂ ಜಪ್ತಿ ಮಾಡಲಾಗಿದೆ. ಉಡುಪಿ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಪ್ಪೂರು ಕೋ ಆಪರೇಟಿವ್ ಸೊಸೈಟಿಯಲ್ಲಿನ ಜಂಟಿ ಖಾತೆಯೊಂದರಲ್ಲಿ ಇರಿಸಲಾಗಿದ್ದ 40 ಲಕ್ಷ ರೂಪಾಯಿಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಈ ಸೊಸೈಟಿಯಲ್ಲಿ ಚೈತ್ರಾ – ಶ್ರೀಕಾಂತ್ ಅನ್ನೊ ಹೆಸರುಗಳಲ್ಲಿ ಈ ಜಂಟಿ ಖಾತೆ ತೆರೆಯಲಾಗಿತ್ತು. ಒಟ್ಟು ಎಲ್ಲಾ ಸೇರಿಸಿ ಸುಮಾರು 4 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಪೊಲೀಸರು ಜಪ್ತಿ ಮಾಡಿದ್ದಾರೆ. ಜೊತೆಗೆ ಬಾಗಲಕೋಟೆ ಜಿಲ್ಲೆ ಮುಧೋಳದ ಹಿಂದೂ ಕಾರ್ಯಕರ್ತ ಎನ್ನಲಾದ ಕಿರಣ್ ಗಣಪ್ಪಗೋಳ ಅನ್ನೋರ ಮನೆಯಲ್ಲಿ ಚೈತ್ರ ಕುಂದಾಪುರಗೆ ಸೇರಿದ ಕಿಯಾ ಕಾರು ಸಿಕ್ಕಿದ್ದು, ಆತನನ್ನ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಚೈತ್ರ ಅಂಡ್‌ ಗ್ಯಾಂಗ್‌ನ ಫೋನ್‌ ಕರೆಗಳನ್ನ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾರ್ಕಳ ಬಿಜೆಪಿ ಶಾಸಕ, ಮಾಜಿ ಸಚಿವ ಸುನೀಲ್‌ ಕುಮಾರ್‌ ಅವರ ಹೆಸರು ಒಂದು ಕಡೆ ಪ್ರಸ್ತಾಪವಾಗಿದೆ ಅನ್ನೋ ಸುದ್ದಿ ಹರಿದಾಡ್ತಿದೆ. ಮತ್ತೊಂದ್‌ ಕಡೆ ಚೈತ್ರಾ ಅವರು ಪೊಲೀಸ್‌ ಬಲೆಗೆ ಬೀಳ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದ ಜನರು ಸಂಭ್ರಮಿಸಿದ್ದಾರೆ. ಜೊತೆಗೆ ಚೈತ್ರಾ ಓಡಾಡಿದ್ದ ಜಾಗವನ್ನು ಗ್ರಾಮಸ್ಥರು ಸೇರಿ ತೀರ್ಥ ಹಾಕಿ ಶುದ್ಧ ಮಾಡಿದ್ದಾರೆ. ಅಂದ್ಹಾಗೆ ಕಳೆದ ವರ್ಷ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಒಂದ್ರಲ್ಲಿ ಭಾಗಿಯಾಗಿದ್ದ ಚೈತ್ರಾ ಅವರು ಚಿಕ್ಕ ವಿಷಯವನ್ನ ದೊಡ್ಡದು ಮಾಡಿ ಭಾಷಣ ಮಾಡುವ ಮೂಲಕ ಗ್ರಾಮದಲ್ಲಿ ಎರಡು ಬಣಗಳ ನಡುವೆ ಗಲಾಟೆ ತಂದಿಟ್ಟಿದ್ದರಂತೆ. ಹೀಗಾಗಿ ಗ್ರಾಮ ದೇವರಿಗೆ ಚೈತ್ರಾ ವಿರುದ್ಧ ಪ್ರಾರ್ಥನೆ ಮಾಡಿ, ಒಂದು ವರ್ಷದೊಳಗೆ ಶಿಕ್ಷೆ ನೋಡುವಂತೆ ಗ್ರಾಮಸ್ಥರು ಪ್ರಾರ್ಥನೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಹರಿಕೆ ತೀರಿಸಿ ಸಂಭ್ರಮಪಟ್ಟಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply