CCL 2023: ಚೆನ್ನೈನ ಬಗ್ಗುಬಡಿದ ಕಿಚ್ಚನ ಪಡೆ, ಮಿಂಚಿದ ಬಚ್ಚನ್‌

masthmagaa.com:

CCL ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನಲ್ಲಿ ತನ್ನ ಗೆಲುವಿನ ನಾಗಾಲೋಟವನ್ನ ಮುಂದುವರೆಸಿರುವ ಕಿಚ್ಚನ ಪಡೆ ಹೈವೋಲ್ಟೇಜ್‌ ಪಂದ್ಯದಲ್ಲಿ ಚೆನ್ನೈ ರೈನೋಸ್‌ ತಂಡವನ್ನ ಬಗ್ಗುಬಡಿದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಸತತ ಮೂರನೇ ಗೆಲುವನ್ನ ದಾಖಲಿಸಿದೆ. ಅಂದ್ಹಾಗೆ ಈ ಸೀಸನ್‌ನ CCLನ ಟೆಸ್ಟ್‌ ಕ್ರಿಕೆಟ್‌ ಫಾರ್ಮಟ್‌ನಲ್ಲಿ ಆಡಲಾಗ್ತಿದೆ. ಅಂದ್ರೆ 20 ಓವರ್‌ಗಳನ್ನ 10 ಓವರ್‌ಗಳ ಒಂದು ಇನ್ನಿಂಗ್ಸ್‌ ಆಗಿ ಕನ್ವರ್ಟ್‌ ಮಾಡಲಾಗಿದೆ. ಮೊದಲು ಒಂದು ತಂಡ 10 ಓವರ್‌ ಬ್ಯಾಟ್‌ ಮಾಡಿದ ನಂತ್ರ ಎದುರಾಳಿ ತಂಡ 10 ಓವರ್‌ಗಳಲ್ಲಿ ಆ ಸ್ಕೋರ್‌ಗಿಂತ ಜಾಸ್ತಿ ಹೊಡೆಯಲು ಪ್ರಯತ್ನಿಸುತ್ತೆ. ನಂತ್ರ ಮೂರನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿದ ತಂಡವೇ ಬ್ಯಾಟಿಂಗ್‌ ಮಾಡುತ್ತೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಮತ್ತೆ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿದ ತಂಡವೇ ಬ್ಯಾಟಿಂಗ್‌ ಮಾಡುತ್ತೆ. ಈ ರೀತಿ ನೆನ್ನೆ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ ಚೆನ್ನೈ ರೈನೋಸ್‌ ತಂಡ ಫಸ್ಟ್‌ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 84 ರನ್‌ ಗಳಿಸ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್‌ ನಡೆಸಿದ ಬುಲ್ಡೋಜರ್ಸ್‌ ತಂಡ, ʻಡಾರ್ಲಿಂಗ್‌ ಕೃಷ್ಣʼ ಮತ್ತು ಪ್ರದೀಪ್‌ ಅವರ ಅಜೇಯ ಬ್ಯಾಟಿಂಗ್‌ ಪ್ರದರ್ಶನದಿಂದ 10 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 109 ರನ್‌ ಗಳಿಸ್ತು. ಹೀಗಾಗಿ 24 ರನ್‌ಗಳ ಮುನ್ನಡೆ ಪಡೆಯಿತು. ಡಾರ್ಲಿಂಗ್‌ ಕೃಷ್ಣ 33 ಬಾಲ್‌ಗಳಲ್ಲಿ 62 ಗಳಿಸಿದ್ರೆ, ಪ್ರದೀಪ್‌ 27 ಎಸೆತಗಳಲ್ಲಿ 46 ರನ್‌ ಗಳಿಸಿದ್ರು. ಇನ್ನು ಎರಡನೇ ಬಾರಿಗೆ ಬ್ಯಾಟಿಂಗ್‌ಗೆ ಇಳಿದ ಚೆನ್ನೈ ತಂಡ, ಈ ಬಾರಿ ಸ್ಪೋಟಕ ಪ್ರದರ್ಶನ ನೀಡಿ 10 ಓವರ್‌ಗಳಲ್ಲಿ 125 ರನ್‌ ಕಲೆ ಹಾಕ್ತು. ವಿಷ್ಣು ವಿಶಾಲ್‌ 19 ಬಾಲ್‌ಗಳಲ್ಲಿ 32 ರನ್‌ ಗಳಿಸಿದ್ರೆ, ವಿಕ್ರಾಂತ್‌ 7 ಬಾಲ್‌ಗಳಲ್ಲಿ 21 ರನ್‌ ಚಚ್ಚಿದ್ರು. ಆದ್ರೆ ಮೊದಲ ಇನ್ನಿಂಗ್ಸ್‌ನಲ್ಲಿ 24 ರನ್‌ ಮುನ್ನಡೆಯಲ್ಲಿದ್ದದರಿಂದ ಕರ್ನಾಟಕ ಬುಲ್ಡೋಜರ್ಸ್‌ ತಂಡ ಗೆಲ್ಲಲು 100 ರನ್‌ ಗಳಿಸಬೇಕಾಯ್ತು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ ಹಿನ್ನಡೆ ಅನುಭವಿಸಿತು. ಅಲ್ಲದೆ ರಾಜೀವ್, ಕಿಚ್ಚ ಸುದೀಪ್ ಬೇಗ ತಮ್ಮ ವಿಕೆಟ್ ಕಳೆದುಕೊಂಡರು. ಆದರೆ ಅರುಣ್ ಬಚ್ಚನ್ ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಲು ಆರಂಭಿಸಿದರು. ಬಳಿಕ ಜಯರಾಮ್ ಕಾರ್ತಿಕ್ ಕೂಡ ಸ್ಪೋಟಕ ಪ್ರದರ್ಶನ ನೀಡಲು ಶುರುಮಾಡಿದರು. ಅರುಣ್ ಬಚ್ಚನ್ ಈ ಪಂದ್ಯದಲ್ಲಿ ಕೇವಲ 18 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಭರ್ಜರಿ 57 ರನ್ ಬಾರಿಸಿದರು. ಅವರಿಗೆ ಅದ್ಭುತವಾಗಿ ಸಾಥ್ ನಿಡಿದ ಜಯರಾಮ್ ಕಾರ್ತಿಕ್ 23 ಎಸೆತಗಳಲ್ಲಿ 34 ರನ್ ಸಿಡಿಸಿದರು. ಹೀಗಾಗಿ ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ ಕರ್ನಾಟಕ ಬುಲ್ಡೋಜರ್ಸ್ ತಂಡ 6 ವಿಕೆಟ್‌ಗಲ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಈ ಗೆಲುವಿನೊಂದಿಗೆ ಕರ್ನಾಟಕ ಬುಲ್ಡೋಜರ್ಸ್‌ ಅಂಕಪಟ್ಟಿಯಲ್ಲೂ ಅಗ್ರಸ್ಥಾನ ಪಡೆದುಕೊಂಡಿದೆ. ಕರ್ನಾಟಕ ವಿರುದ್ದ ಸೋಲು ಅನುಭವಿಸಿದ ಚೆನ್ನೈ ತಂಡ ನಾಲ್ಕನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply