ಚೀನಾದ ಹಡಗಿನ ಪ್ರವೇಶಕ್ಕೆ ಒಪ್ಪಿಗೆ ಕೊಟ್ಟ ಶ್ರೀಲಂಕಾ..! ಎಲ್ಲರ ಚಿತ್ತ ಭಾರತದತ್ತ!

masthmagaa.com:

ಭಾರತದ ತೀವ್ರ ಆಕ್ಷೇಪಣೆಯ ನಡುವೆಯೂ ಚೀನಾದ ಸ್ಪೈ ಅಥವಾ ಬಾಹ್ಯಾಕಾಶ ಪತ್ತೆದಾರಿ ಹಡಗಿನ ಪ್ರವೇಶಕ್ಕೆ ಶ್ರೀಲಂಕಾ ಸರ್ಕಾರ ಅನುಮತಿ ನೀಡಿದೆ. ಅಂದ್ಹಾಗೆ ಆಗಸ್ಟ್‌ 11 ರಂದೇ ಯುವಾನ್‌ ವಾಂಗ್‌ 5 ಅನ್ನೋ ಈ ಹಡಗು ಶ್ರೀಲಂಕಾದಿಂದ ಚೀನಾ ಅಡ ಇಟ್ಕೊಂಡಿರೋ ಹಂಬಂತೋಟ ಬಂದರಿಗೆ ಬರಬೇಕಿತ್ತು. ಆದ್ರೆ ಇದಕ್ಕೆ ಭಾರತ ಭಾರಿ ಪ್ರತಿರೋಧ ಒಡ್ಡಿತ್ತು. ಚೈನಾದ ಹಡಗು ಬರದಂತೆ ತಡೀಬೇಕು ಅಂತ ಲಂಕಾ ಸರ್ಕಾರಕ್ಕೆ ಭಾರತ ಒತ್ತಾಯ ಮಾಡಿತ್ತು. ಇದರ ಬೆನ್ನಲ್ಲೇ ಒಂದಷ್ಟು ದಿನ ನಾವು ಹೇಳೋವರೆಗೂ ನೀವು ಇಲ್ಲಿಗೆ ಬರೋದು ಬೇಡ ಅಂತ ಲಂಕಾ ಸರ್ಕಾರ ಚೀನಾಗೆ ಮನವಿ ಮಾಡಿತ್ತು. ಅದರ ಬೆನ್ನಲ್ಲೇ ಚೀನಾ ಹಾಗೂ ಲಂಕಾ ಅಧಿಕಾರಿಗಳು ತುರ್ತಾಗಿ ಮಾತುಕತೆ ನಡೆಸಿದ್ರು. ಚೀನಾದ ಕುತಂತ್ರಿ ಬುದ್ದಿ ವರ್ಕೌಟ್‌ ಆಗಿದ್ದುಅದು ಫಲ ನೀಡಿರೋ ರೀತಿ ಕಾಣಿಸ್ತಿದೆ. ಇದೀಗ ಭಾರತದ ಭಾರಿ ಒತ್ತಾಯದ ಮಧ್ಯೆದಲ್ಲಿಯೂ ಚೀನಾದ ಈ ವಿವಾದಿತ ಹಡಗು ಬರೋಕೆ ಲಂಕಾ ಸರ್ಕಾರ ಸೈ ಅಂದಿದೆ. ಅಂದ್ಹಾಗೆ ಚೀನಾದ ಈ ಹಡಗು ಅತ್ಯಂತ ಆಧುನಿಕ ಟೆಕ್ನಾಲಜಿ ಹೊಂದಿದ್ದು ಜುಲೈ 13ನೇ ತಾರೀಖು ಚೀನಾದ ಜಿಯಾಂಗ್‍ ಬಂದರಿನಿಂದ ಶ್ರೀಲಂಕಾದ ಪೋರ್ಟ್‌ಗೆ ಬರುತ್ತೆ. ಈ ಹಡಗು ಅತ್ಯಾಧುನಿಕ ಟೆಕ್ನಾಲಜಿ ಹೊಂದಿದ್ದು ಬಾಹ್ಯಾಕಾಶ, ಸೈಬರ್‌ ಮಾಹಿತಿ, ಎಲೆಕ್ಟ್ರಾನಿಕ್, ಸಂವಹನ ಮತ್ತು ಸೈಕಾಲಾಜಿಕಲ್‌ ಯುದ್ಧ ಕಾರ್ಯಾಚರಣೆಗಳಲ್ಲಿ ಚೀನಾ ಸೇನೆಗೆ ಸಹಾಯ ಮಾಡುತ್ತೆ ಅಂತ ಹೇಳಲಾಗ್ತಿದೆ. ಇಂತಹ ಹಡಗು ಭಾರತದ ಹತ್ತಿರಕ್ಕೆ ಬರೋದ್ರಿಂದ ನಮ್ಮ ಸೂಕ್ಷ್ಮ ಸ್ಥಳಗಳ ಮೇಲೆ ಕಣ್ಣಿಡೋಕೆ ದುರಪಯೋಗ ಆಗ್ಬೋದು ಅಂತ ಹೇಳಿ ಶ್ರೀಲಂಕಾಗೆ ತೀವ್ರ ಒತ್ತಡ ಹೇರಿತ್ತು ಭಾರತ. ಯಾಕಂದ್ರೆ ಈ ಹಡಗು ದಕ್ಷಿಣ ಭಾರತದ ಪ್ರಮುಖ ಮಿಲಿಟರಿ ಮತ್ತು ಪರಮಾಣು ನೆಲೆಗಳಾಗಿರೋ ಕಲ್ಪಾಕ್ಕಂ, ಕೂಡಂಕುಳಂಗಳಲ್ಲಿ ಆಗುವ ಬೆಳವಣಿಗೆಗಳನ್ನ ಕೂಡ ಇದರಿಂದ ಮಾನಿಟರ್‌ ಮಾಡ್ಬೋದು ಅಂತ ಹೇಳಲಾಗುತ್ತೆ. ಅಲ್ದೇ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಹಲವು ಬಂದರುಗಳನ್ನ ಕೂಡ ಈ ಹಡಗಿನ ರಾಡರ್‌ಗಳು ಪತ್ತೆಹಚ್ಚಬಲ್ಲವು ಅಂತ ಕೆಲ ಸಂಶೋಧಕರು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಹಾಗಾಗಿಯೇ ಭಾರತ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆರಂಭದಲ್ಲಿ ಲಂಕಾ ಕೂಡ ಇದಕ್ಕೆ ತಲೆಯಾಡಿಸಿತ್ತು. ಈಗ ಚೀನಾದ ಮಾತುಕೇಳಿ ಮತ್ತೆ ಆಯ್ತು ಬನ್ನಿ ಅಂತ ಹೇಳಿದೆ.ಲಂಕಾ ಸರ್ಕಾರದ ಮೂಲಗಳ ಪ್ರಕಾರ ಇದು ಆಗಸ್ಟ್‌ 16ಕ್ಕೆ ಬರಬೋದು ಅಂತ ಹೇಳಲಾಗ್ತಿದೆ. ಭಾರತ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತೋ ಕಾದು ನೋಡ್ಬೇಕು.

-masthmagaa.com

Contact Us for Advertisement

Leave a Reply