ಸುರ್ಜೇವಾಲ ನಡೆಸಿದ ಸಭೆ ಅಧಿಕೃತವಲ್ಲ ಎಂದು ಸ್ಪಷ್ಟನೆ ನೀಡಿದ ಕಾಂಗ್ರೆಸ್‌ ಸರ್ಕಾರ!

masthmagaa.com:

ಬೆಂಗಳೂರಿನ ಖಾಸಗಿ ಹೋಟೆಲ್‌ ಒಂದ್ರಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಹಾಗೂ BBMP ಅಧಿಕಾರಿಗಳ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವ್ರು ಭಾಗವಹಿಸಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್‌ ಸರ್ಕಾರದ ಮೇಲೆ ಮುಗಿಬಿದ್ದಿರೋ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು, ಸರ್ಕಾರದಲ್ಲಿ ಸುರ್ಜೇವಾಲ ಮೂಗು ತೂರಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ATM ಸರ್ಕಾರದ ಗೌಪ್ಯ ಸಭೆಯ ರಹಸ್ಯವೇನು? ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಂದಿಗೆ ಏನು ಕೆಲಸ. ಇದು 85% ಡೀಲ್‌ ಫಿಕ್ಸಿಂಗ್‌ ಸಭೆಯೇ? ಸಿಎಂ ಸಿದ್ದರಾಮಯ್ಯನವರೇ, ಡಿಸಿಎಂ ಡಿ.ಕೆ.ಶಿವಕುಮಾರ್‌ರವರೇ ಉತ್ತರಿಸಿ ಅಂತ ಬಿಜೆಪಿ ಆಗ್ರಹಿಸಿದೆ. ಜೊತೆಗೆ ಅಧಿಕಾರದಲ್ಲಿ ಇರದಿದ್ದರೂ ಕಾಂಗ್ರೆಸ್ ಉಸ್ತುವಾರಿ ಸರ್ಕಾರದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿರೋ ವಿಚಾರವಾಗಿ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಅಂತ ಬಿಜೆಪಿ ಹೇಳಿದೆ. ಇತ್ತ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ರಾಜ್ಯದಲ್ಲಿರುವುದು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವೋ ಅಥವಾ ಹೊಸದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರ್ಕಾರಕ್ಕೋ? ಅಥವಾ ಕೈಗೊಂಬೆ ಸರಕಾರಕ್ಕೋ? ಜನರ ಓಟು ಹಂಗಿನ ಸರ್ಕಾರದ ಪಾಲಾಗಿದ್ದು, ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ ಅಂತ ಕುಟುಕಿದ್ದಾರೆ. ಇನ್ನೊಂದ್‌ ಕಡೆ ವಿಪಕ್ಷಗಳ ಟೀಕೆಗೆ ಉತ್ತರಿಸಿರೋ ಸಿದ್ದರಾಮಯ್ಯ, ಅಧಿಕೃತವಾಗಿ ಅಧಿಕಾರಿಗಳ ಜೊತೆಗೆ ಸುರ್ಜೆವಾಲಾ ಸಭೆ ನಡೆಸಿಲ್ಲ. BBMP ಚುನಾವಣೆ ಬಗ್ಗೆ ಚರ್ಚೆ ನಡೆಸಲು ಶಾಸಕರನ್ನು ಕರೆದಿದ್ದರು. ಬೆಂಗಳೂರು ನಗರ ಸಂಬಂಧ ಸಭೆ ಕರೆಯಲಾಗಿತ್ತು ಅಷ್ಟೇ. ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಡುವುದಾದರೆ ಕೊಡಲಿ ಅಂತ ಹೇಳಿದ್ದಾರೆ. ಇತ್ತ ಡಿಸಿಎಂ ಡಿಕೆ ಶಿವಕುಮಾರ್‌ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಖಾಸಗಿ ಹೋಟೆಲ್‌ನಲ್ಲಿ ಸುರ್ಜೇವಾಲ ಅವರೊಟ್ಟಿಗೆ ಮಾತುಕತೆ ನಡೆಸುತ್ತಿದ್ದೆ. ಆ ಸ್ಥಳಕ್ಕೆ BBMP ಮತ್ತು BDA ಅಧಿಕಾರಿಗಳು ಆಗಮಿಸಿದ್ದು, ಸರ್ಕಾರದ ಅಧಿಕೃತ ಸಭೆಗೆ ನನ್ನನ್ನು ಕರೆದುಕೊಂಡು ಹೋದರು. ಆದ್ರೆ ಈ ವಿಪಕ್ಷಗಳು ಸುಳ್ಳು ಆರೋಪ ಮಾಡ್ತಿವೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply