‘ದಸರ’ ಸಿನಿಮಾ; ಸೆನ್ಸಾರ್ ಮಂಡಳಿಯಿಂದ 36 ಕಟ್!

masthmagaa.com:

ನಾನಿ, ಕೀರ್ತಿ ಸುರೇಶ್ ನಟನೆಯ ದಸರ ಸಿನಿಮಾ ಮಾರ್ಚ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಸಮಯದಲ್ಲಿ ದೊಡ್ಡ ಆಘಾತವೊಂದು ಚಿತ್ರತಂಡಕ್ಕೆ ಎದುರಾಗಿದ್ದು, ಸೆನ್ಸಾರ್ ಮಂಡಳಿಯು ಬರೋಬ್ಬರಿ 36 ಕಟ್​ಗಳನ್ನು ಸೂಚಿಸಿದೆ. ಮಾತ್ರವಲ್ಲದೆ ಕೆಲವು ಮುಖ್ಯ ಸೂಚನೆಗಳನ್ನು ಸಹ ಚಿತ್ರತಂಡಕ್ಕೆ ನೀಡಿದೆ. ಇಷ್ಟು ದೊಡ್ಡ ಸಂಖ್ಯೆಯ ಕಟ್​ಗಳನ್ನು ತೆಲುಗಿನ ಇನ್ಯಾವುದೇ ಸಿನಿಮಾಕ್ಕೆ ಈವರೆಗೆ ನೀಡಿಲ್ಲ. ಸೆನ್ಸಾರ್​ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದು ಅಪಖ್ಯಾತಿಗೆ ದಸರ ಗುರಿಯಾಗಿದೆ.

ದಸರ ಸಿನಿಮಾವು ಹಳ್ಳಿಯ ಒರಟು ಯುವಕನೊಬ್ಬನ ಕತೆಯಾಗಿದ್ದು, ಸಿನಿಮಾದಲ್ಲಿ ನಾಯಕನದ್ದು ವಿಪರೀತ ಕುಡಿಯುವ ಚಟ. ಬಹಳ ಒರಟು ಸ್ವಭಾವದ ನಾಯಕನ ಪಾತ್ರ ವಿಪರೀತ ವೈಯಲೆನ್ಸ್‌ನಿಂದ ಕೂಡಿತ್ತು . ಹಾಗಾಗಿಯೇ ಸೆನ್ಸಾರ್ ಮಂಡಳಿಯು ಇಷ್ಟೋಂದು ಕಟ್​ಗಳನ್ನು ಸೂಚಿಸಿದೆ ಎನ್ನಲಾಗಿದೆ. ಅದರಲ್ಲಿಯೂ ಕುಡಿತವನ್ನು ವೈಭವೀಕರಿಸುವ ಹಲವು ದೃಶ್ಯಗಳಿಗೆ ಹಾಗೂ ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳಿಗೆ ಹಲವು ಕಟ್​ಗಳನ್ನು ಸೂಚಿಸಿದೆ. ಒರಟು ಭಾಷೆ ಬಳಸಿದ ಕಡೆಯೂ ಕಟ್​ ಹಾಗೂ ಮ್ಯೂಟ್​ಗಳನ್ನು ಸೂಚಿಸಲಾಗಿದೆ. ಸಿನಿಮಾಕ್ಕೆ ಅಂತಿಮವಾಗಿ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. ಇದೆಲ್ಲೆದರ ಜೊತೆಗೆ ಕುಡಿತದ ದೃಶ್ಯಗಳುಳ್ಳ ಕಡೆಗೆ ಮದ್ಯಪಾನ ವಿರೋಧಿ ಸಂದೇಶವನ್ನು ದೊಡ್ಡ ಫಾಂಟ್​ನಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿರುವ ಜೊತೆಗೆ, ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ಸೂಚಿಸಲಾಗಿದೆ ಹಾಗೂ ಸಂಭಾಷಣೆಗಳ ಸಬ್​ಟೈಟಲ್ ಅನ್ನು ಸಹ ತೆಗೆಯುವಂತೆ ಸೂಚಿಸಿದೆ ಸೆನ್ಸಾರ್ ಮಂಡಳಿ.

ತೆಲಂಗಾಣದ ಸಿಂಗಾರೆನಿ ಎಂಬಲ್ಲಿನ ಕಲ್ಲಿದ್ದಲು ಗಣಿ, ಅಲ್ಲಿನ ಕಾರ್ಮಿಕರು ಅವರ ಬದುಕುಗಳನ್ನು ದಸರ ಸಿನಿಮಾದ ಕತೆ ಒಳಗೊಂಡಿದೆ. ಗಣಿಯ ಕಾರ್ಮಿಕನ ಪಾತ್ರದಲ್ಲಿ ನಾನಿ ನಟಿಸಿದ್ದಾರೆ. ಕೀರ್ತಿ ಸುರೇಶ್ ವೆನ್ನೆಲ ಹೆಸರಿನ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಶ್ರೀಕಾಂತ್ ಒಡೆಲ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಸಿನಿಮಾವನ್ನು ಸುಧಾಕರ್ ಚೆರುಕುರಿ ನಿರ್ಮಾಣ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

-masthmagaa.com

Contact Us for Advertisement

Leave a Reply