ದಕ್ಷಿಣ ಆಫ್ರಿಕಾದಲ್ಲಿ ಹಿಂಸಾಚಾರ, ಅಂಗಡಿಗಳ ಸಾಮೂಹಿಕ ಲೂಟಿ

masthmagaa.com:

ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ಜಾಕೊಬ್​ ಝೂಮಾಗೆ ಅಲ್ಲಿನ ಸುಪ್ರೀಂಕೋರ್ಟ್ 15 ತಿಂಗಳು ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಹಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಜನ ಅಂಗಡಿಗಳಿಗೆ ನುಗ್ಗಿ ತಮಗೆ ಬೇಕಾದ್ದದ್ದನ್ನ ಲೂಟಿ ಮಾಡ್ಕೊಂಡು ತಗೊಂಡೋಗ್ತಿದ್ದಾರೆ. ಇದರ ಬೆನ್ನಲ್ಲೇ ಪರಿಸ್ಥಿತಿ ನಿಯಂತ್ರಿಸಲು ಸೇನೆಗೆ ಬುಲಾವ್ ನೀಡಿದ್ದಾರೆ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ. ಹಿಂಸಾಚಾರದಲ್ಲಿ ಕನಿಷ್ಠ 10 ಜನ ಮೃತಪಟ್ಟಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. 489 ಜನರನ್ನ ಅರೆಸ್ಟ್ ಮಾಡಲಾಗಿದೆ. ಹಿಂಸಾಚಾರ ಹೆಚ್ಚಾಗಿರೋ ಗೌಟೆಂಗ್ ಮತ್ತು ಕ್ವಾಝುಲು-ನಟಾಲ್​ ಪ್ರಾಂತ್ಯಕ್ಕೆ ಎರಡೂವರೆ ಸಾವಿರಕ್ಕೂ ಹೆಚ್ಚು ಯೋಧರನ್ನ ಕಳಿಸಲಾಗಿದೆ. ಗೌಟೆಂಗ್​ ಪ್ರಾಂತ್ಯದಲ್ಲಿ ಸೌತ್ ಆಫ್ರಿಕಾದ ಅತಿದೊಡ್ಡ ನಗರವಾದ ಜೋಹಾನ್ಸ್​ಬರ್ಗ್ ಬರುತ್ತೆ. ಕ್ವಾಝುಲು-ನಟಾಲ್​ ಜಾಕೊಬ್​ ಝೂಮಾ ಅವರ ತವರು ಪ್ರಾಂತ್ಯವಾಗಿದೆ. ಅಂದ್ಹಾಗೆ 2009ರಿಂದ 2018ರವರೆಗೆ ಜಾಕೊಬ್ ಜೂಮಾ ಆಫ್ರಿಕಾ ಅಧ್ಯಕ್ಷರಾಗಿದ್ರು. ಅವರ ಅವಧಿಯಲ್ಲಿ ಭಾರಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಝೂಮಾ ಅವರನ್ನ ಕೆಳಗಿಳಿಸಿ ಸಿರಿಲ್ ರಾಮಫೋಸಾರನ್ನ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಮತ್ತೊಂದುಕಡೆ ತಮ್ಮ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ಸಾಕ್ಷ್ಯಗಳನ್ನ ನೀಡುವಂತೆ ಜಾಕೋಬ್ ಝೂಮಾಗೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಆದ್ರೆ ಕೋರ್ಟ್ ಆದೇಶಕ್ಕೆ ಬೆಲೆ ಕೊಡದ ಹಿನ್ನೆಲೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮೊನ್ನೆ ಜೂನ್​ 29ಕ್ಕೆ ಝೂಮಾಗೆ 15 ತಿಂಗಳ ಜೈಲು ಶಿಕ್ಷೆ ಪ್ರಕಟಿಸಲಾಗಿತ್ತು. JZ ಅಂತಾನೇ ಪ್ರಸಿದ್ಧಿ ಪಡೆದಿರೋ ಝೂಮಾಗೆ ಸರ್ಕಾರಿ ಮಟ್ಟದಲ್ಲಿ ಒಳ್ಳೇ ನೆಟ್ವರ್ಕ್ ಇದೆ. ಸಾಕಷ್ಟು ಅಧಿಕಾರಿಗಳು ಝೂಮಾಗೆ ನಿಷ್ಠರಾಗಿದ್ದಾರೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ವರ್ಣಭೇದ ನೀತಿ ವಿರುದ್ಧ ಹೋರಾಡಿದ್ದ 79 ವರ್ಷ ವಯಸ್ಸಿನ ಝೂಮಾ ದಕ್ಷಿಣ ಆಫ್ರಿಕಾದಲ್ಲಿನ ಬಡವರ ನೆಚ್ಚಿನ ನಾಯಕರಾಗಿದ್ದಾರೆ. ಹೀಗಾಗಿ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೀತಿರೋ ಹಿಂಸಾಚಾರ ಮತ್ತಷ್ಟು ಹೆಚ್ಚಾಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply