BJPಗೆ ‘ಕ್ಯಾಪಿಟಲ್’ ಶಾಕ್! ದಿಲ್ಲಿ ಯಾರ ‘ಕಂಟ್ರೋಲ್’? ಗೆದ್ರು ಕೇಜ್ರಿವಾಲ್!

masthmagaa.com:

ದೆಹಲಿಯ ಚುನಾಯಿತ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿ ಲೆಫ್ಟಿನೆಂಟ್‌ ಗವರ್ನರ್‌ ನಡುವಿನ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಇಂದು ಮಹತ್ವದ ತೀರ್ಪು ನೀಡಿದೆ. ಪೊಲೀಸ್, ಕಾನೂನು-ಸುವ್ಯವಸ್ಥೆ, ಭೂಮಿಯ ಮೇಲಿನ ಅಧಿಕಾರ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳ ಮೇಲೆ ದೆಹಲಿಯ ಚುನಾಯಿತ ಸರ್ಕಾರಕ್ಕೆ ಅಧಿಕಾರ ಇದೆ ಅಂತ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತೃತ್ವದ ಸಾಂವಿಧಾನಿಕ ಪೀಠ ಹೇಳಿದೆ. ಈ ಮೂಲಕ ಅರವಿಂದ್‌ ಕೇಜ್ರಿವಾಲ್‌ ಸರ್ಕಾರಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಯಾಕಂದ್ರೆ ದೆಹಲಿಯ ಆಡಳಿತದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ಕೇಂದ್ರ ಸರ್ಕಾರ ಅತಿಕ್ರಮಣ ಮಾಡ್ತಿದೆ. ನಮ್ಮ ಆಡಳಿತ ವ್ಯಾಪ್ತಿಯಲ್ಲೂ ನಮಗೆ ಅಧಿಕಾರ ಮಾಡೋಕೆ ಬಿಡ್ತಿಲ್ಲ ಅಂತ ಕೇಜ್ರಿವಾಲ್‌ ತುಂಬಾ ಹಿಂದಿನಿಂದಲೂ ದೂರುತ್ತಾ ಬಂದಿದ್ರು. ಈ ಪ್ರಕರಣ ಸುಪ್ರೀಂ ಕೋರ್ಟ್‌ಗೂ ಹೋಗಿತ್ತು. ಆದ್ರೆ ಈಗ ಕೋರ್ಟ್‌ ದೆಹಲಿಯ ಚುನಾಯಿತ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಇದೆ ಅಂತ ಹೇಳಿದೆ. ಅಲ್ದೇ ದಿಲ್ಲಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್ ಅವರು, ದಿಲ್ಲಿಯ ಚುನಾಯಿತ ಸರ್ಕಾರದ ನಿರ್ಧಾರಗಳಿಗೆ ಬದ್ಧರಾಗಿರಬೇಕು. ರಾಷ್ಟ್ರಪತಿ ರೀತಿಯಲ್ಲೇ ಲೆಫ್ಟಿನೆಂಟ್ ಗವರ್ನರ್‌ಗೂ ಅಧಿಕಾರಗಳಿವೆ. ಆದರೆ ಅದರ ಅರ್ಥ ಇಡೀ ದಿಲ್ಲಿ ಸರ್ಕಾರವನ್ನು ತಾವೇ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಅಂತ ಅಲ್ಲ. ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಇದೆ. ಒಂದು ವೇಳೆ ಕೇಂದ್ರ ಸರ್ಕಾರ, ಲೆಫ್ಟಿನೆಂಟ್‌ ಗವರ್ನರ್‌ಗಳೇ ಎಲ್ಲಾ ಅಧಿಕಾರ ಮಾಡಿದ್ರೆ ದಿಲ್ಲಿಯಲ್ಲಿ ಪ್ರತ್ಯೇಕ ಸರ್ಕಾರ ಹೊಂದುವ ಅವಶ್ಯಕತೆಯಾದ್ರೂ ಏನಿದೆ ಅಂತ ಸಾಂವಿಧಾನಿಕ ಪೀಠ ಪ್ರಶ್ನೆ ಮಾಡಿದೆ. ಈ ಮೂಲಕ ಹಲವು ವರ್ಷಗಳಿಂದ ನಡೆಯುತ್ತಿರೋ ಜಂಗೀಕುಸ್ತಿಗೆ ತೆರೆ ಬಿದ್ದಂತೆ ಆಗಿದೆ. ಯಾಕಂದ್ರೆ ದಿಲ್ಲಿಯಲ್ಲಿ 2013ರಲ್ಲಿ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ವಿವಾದ ಬೀದಿಗೆ ಬಂದಿತ್ತು. ದಿಲ್ಲಿಯ ಆಡಳಿತ ಕೇಂದ್ರ ಸರ್ಕಾರ ನೇಮಿಸುವ ಲೆಫ್ಟಿನೆಂಟ್‌ ಗವರ್ನರ್‌ ಅವರಿಗಾ? ಅಥವಾ ದಿಲ್ಲಿಯಲ್ಲಿ ಜನರಿಂದ ಆಯ್ಕೆಯಾಗಿರೋ ಸರ್ಕಾರಕ್ಕಾ ಅಂತ ಪ್ರಶ್ನೆ ಎದ್ದಿತ್ತು. ಅಧಿಕಾರಿಗಳನ್ನ ನೇಮಿಸೋ ವಿಚಾರದಿಂದ ಹಿಡಿದು ವರ್ಗಾವಣೆ ವಿಷಯಗಳ ತನಕ ಅನೇಕ ಆಡಳಿತಾತ್ಮಕ ವಿಚಾರಗಳಲ್ಲಿ ಇಬ್ರ ನಡುವೆ ಸಂಘರ್ಷ ಇತ್ತು. ದಿಲ್ಲಿಯ ಕೇಜ್ರಿವಾಲ್‌ ಸರ್ಕಾರ ಯಾವುದಾದ್ರೂ ಮುಖ್ಯ ಹುದ್ದೆಗೆ ನೇಮಕಾತಿ ಮಾಡಿದ್ರೆ ಅದನ್ನ ಲೆಫ್ಟಿನೆಂಟ್ ಗವರ್ನರ್‌ ತೆಗೆದುಹಾಕ್ತಿದ್ರು. ಇದು ಹೀಗೆ ನಡೀತಾ ಇತ್ತು. ಅಷ್ಟಕ್ಕೂ ಇಲ್ಲಿ ವಿವಾದ ಯಾಕ್‌ ಉಂಟಾಗಿತ್ತು ಅಂದ್ರೆ ಎಲ್ಲರಿಗೂ ಗೊತ್ತಿರೋ ಹಾಗೇ ದೆಹಲಿ ಎಲ್ಲಾ ರಾಜ್ಯಗಳ ರೀತಿ ಪೂರ್ಣ ಪ್ರಮಾಣದ ರಾಜ್ಯವೂ ಅಲ್ಲ. ಅಥವಾ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಂತೆ ಅದು ಕೇಂದ್ರ ಸರ್ಕಾರದ ಅಧೀನದಲ್ಲೂ ಇಲ್ಲ. ದೆಹಲಿಗೆ ಅರೆ ರಾಜ್ಯದ ಸ್ಥಾನ ಮಾನ ಇದೆ. ಹೇಗಂದ್ರೆ ಎಲ್ರಿಗೂ ಗೊತ್ತಿರೋ ಹಾಗೇ ಆರ್ಟಿಕಲ್‌ 239ರ ಅನ್ವಯ ಕೇಂದ್ರಾಡಳಿತ ಪ್ರದೇಶಗಳನ್ನ ರಾಷ್ಟ್ರಪತಿ ನೇಮಕ ಮಾಡುವ ಲೆಫ್ಟಿನೆಂಟ್‌ ಗವರ್ನರ್‌ ನಿಯಂತ್ರಣ ಮಾಡಬೋದು. ಆದ್ರೆ ದೆಹಲಿಗೆ ಇದು ಪೂರ್ಣಪ್ರಮಾಣದಲ್ಲಿ ಅನ್ವಯ ಆಗಲ್ಲ. ಅದಕ್ಕೆ ಕಾರಣ ಆರ್ಟಿಕಲ್‌ 239ಕ್ಕೆ 1992ರಲ್ಲಿ ತಿದ್ದುಪಡಿ ತಂದು 239AA ಅಂತ ಸೇರಿಸಿ ದೆಹಲಿಗೆ ಶಾಸಕಾಂಗ ಅಥವಾ ವಿಧಾನಸಭೆ ರಚಿಸಿಕೊಳ್ಳುವ ಅಧಿಕಾರ ಕೊಡಲಾಗಿದೆ. ಶಾಸಕಾಂಗ ರಚಿಸುವ ಅಧಿಕಾರ ಅಂದ್ರೆ ಅಲ್ಲಿ ಶಾಸನಗಳನ್ನ ರಚನೆ ಮಾಡುವ ಅಧಿಕಾರ. ದೆಹಲಿಗೆ, ಅಲ್ಲಿನ ಜನರ ಆಡಳಿತಕ್ಕೆ ಏನ್‌ ಬೇಕೋ ಅದಕ್ಕೆ ತಕ್ಕಂತೆ ಕಾನೂನು ಕಾಯ್ದೆ ರೂಪಿಸುವ ಅಧಿಕಾರ ದೆಹಲಿಗೆ ಕೊಡಲಾಗಿದೆ. ಅಂದ್ರೆ ಇಲ್ಲಿ ದೆಹಲಿ, ಕೇಂದ್ರಾಡಳಿತ ಪ್ರದೇಶವೂ ಹೌದು. ಜೊತೆಗೆ ಅವರಿಗೆ ಶಾಸನ ರಚಿಸುವ ಅಧಿಕಾರ ಕೂಡ ಇದೆ. ಹೀಗಾಗಿ ಇಲ್ಲಿ ಕೇಂದ್ರ ಹಾಗೂ ಚುನಾಯಿತ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಎದ್ದಿತ್ತು. ಕೇಂದ್ರಾಡಳಿತ ಪ್ರದೇಶ ಆದ್ಮೇಲೆ ಅಲ್ಲಿ ನಮ್ಮ ಆಡಳಿತ ಇರಬೇಕು ಅಂತ ಕೇಂದ್ರ ಸರ್ಕಾರ ಹೇಳಿದ್ರೆ, ಇಲ್ಲಿ ನಾವು ಆಡಳಿತ ಮಾಡಬೇಕು ಅಂತ ದೆಹಲಿ ಸರ್ಕಾರ ಹೇಳ್ತಾ ಇತ್ತು. ಇನ್ನು ಈ ವಿವಾದ ದೊಡ್ಡದಾಗಿದ್ದು 2015ರಲ್ಲಿ. ಚೀಫ್‌ ಸೆಕ್ರಟ್ರಿಯನ್ನ ನೇಮಕ ಮಾಡೋದರಲ್ಲಿ. ಆಗ ಲೆಫ್ಟಿನೆಂಟ್‌ ಗವರ್ನರ್‌ ಆಗಿದ್ದ ನಾಜೀಬ್ ಜಂಗ್‌ ಅವರು ಹಾಗೂ ದೆಹಲಿ ಸಿಎಂ ಕೇಜ್ರಿವಾಲ್‌ ನಡುವೆ ಜಗಳ ಆಗಿತ್ತು. ದೆಹಲಿ ಸರ್ಕಾರವನ್ನ ಕೇಳದೇನೇ ನಾಜೀಬ್‌ ಜಂಗ್‌ ಅವರು ಚೀಫ್‌ ಸೆಕ್ರಟ್ರಿಯನ್ನ ನೇಮಿಸಿದ್ದಾರೆ ಅಂತ ಕೇಜ್ರಿವಾಲ್‌ ಸರ್ಕಾರ ಪ್ರತಿಭಟನೆ ಮಾಡಿತ್ತು. ಭಾರಿ ಹೈಡ್ರಾಮ ನಡೆದಿತ್ತು. ಈ ಪ್ರಕರಣ ಕೊನೆಗೆ ದೆಹಲಿ ಹೈ ಕೋರ್ಟ್‌ ಅಂಗಳಕ್ಕೆ ಹೋಗಿತ್ತು. ದೆಹಲಿ ಹೈ ಕೋರ್ಟ್‌ ಕೇಜ್ರಿವಾಲ್‌ ಸರ್ಕಾರದ ವಿರುದ್ದ ಅಂದ್ರೆ ಲೆಫ್ಟಿನೆಂಟ್‌ ಅವರು ನೇಮಕ ಮಾಡಬೋದು ಅಂತ ತೀರ್ಪು ಕೊಟ್ಟಿತ್ತು. ಇದರ ವಿರುದ್ದ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ಗೆ ಹೋಗಿದ್ರು. 2018 ಇದರ ತೀರ್ಪು ಬಂತು. ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಮುಖ್ಯಮಂತ್ರಿಯವರೇ ಎಕ್ಸುಕ್ಯೂಟಿವ್ ಹೆಡ್‌ ಆಫ್‌ ದೆಹಲಿ ಅಂತ ಹೇಳ್ತು. ಚುನಾಯಿತ ಸರ್ಕಾರದ ಮಂತ್ರಿ ಮಂಡಲ ಕೊಡುವ ಸಲಹೆಗೆ ಲೆಫ್ಟಿನೆಂಟ್‌ ಗವರ್ನರ್‌ ಬದ್ದವಾಗಿರಬೇಕು. ಅವರೇ ಎಲ್ಲ ನಿರ್ಧಾರ ತೆಗೆದುಕೊಳ್ಳೋಕೆ ಆಗಲ್ಲ ಅಂತ ಹೇಳಿತ್ತು. ಈ ಚೀಫ್‌ ಸೆಕ್ರಟ್ರಿ ವಿಚಾರ ಬಗೆಹರೀತು. ಆದ್ರೆ ಇನ್ನುಳಿದ ವಿಚಾರ ಬಗೆಹರಿದಿರಲಿಲ್ಲ. ಅಧಿಕಾರ ಹಂಚಿಕೆ ಇನ್ನೂ ಗೊಂದಲದಲ್ಲೇ ಇದ್ದಿದ್ದರಿಂದ ಇದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸೋದಕ್ಕೆ ಇಬ್ರು ಜಡ್ಜ್‌ಗಳನ್ನ ಸುಪ್ರೀಂ ಕೋರ್ಟ್ ನೇಮಕ ಮಾಡಿತ್ತು. ಇದರ ಹೊಣೆ ಹೊತ್ತುಕೊಂಡ ಜಸ್ಟೀಸ್ ಎಕೆ ಸಿಕ್ರಿ ಹಾಗೂ ಜಸ್ಟೀಸ್‌ ಅಶೋಕ್ ಭೂಷಣ್‌ ಅವರಿದ್ದ ದ್ವಿಸದಸ್ಯ ಪೀಠ‌ 2019ರಲ್ಲಿ ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳನ್ನು ಯಾರು ನಿಯಂತ್ರಿಸುತ್ತಾರೆ? ಯಾರಿಗೆ ಯಾವುದು ಸೇರಬೇಕು ಅನ್ನೋ ಅಂಶದ ಮೇಲೆ ವಿಭಿನ್ನ ತೀರ್ಪು ಕೊಡ್ತು.‌ ಸಿಕ್ರಿಯವರು ಚುನಾಯಿತ ಸರ್ಕಾರಕ್ಕೆ ಶಕ್ತಿ ಇರಬೇಕು ಅಂದ್ರು. ಆದ್ರೆ ಅಶೋಕ್‌ ಭೂಷಣ್‌ ಅವರು ಆಡಳಿತಾತ್ಮಕ ಸೇವೆ ಕೈಗೊಳ್ಳೋಕೆ ಸಿಟಿ ಗವರ್ನಮೆಂಟ್‌ಗೆ ಯಾವುದೇ ಪವರ್‌ ಇಲ್ಲ ಅಂತ ಹೇಳಿದ್ರು. ಹೀಗಾಗಿ ಇಲ್ಲಿ ಮತ್ತೆ ಗೊಂದಲ ಬಂತು. ಹೀಗಾಗಿ ಸಾಂವಿಧಾನಿಕ ಪೀಠ ರಚನೆ ಆಯ್ತು. ಈಗ ಅದರ ತೀರ್ಪು ಬಂದಿದೆ. ಪೊಲೀಸ್, ಕಾನೂನು-ಸುವ್ಯವಸ್ಥೆ, ಭೂಮಿಯ ಮೇಲಿನ ಅಧಿಕಾರ ಬಿಟ್ಟು ಉಳಿದ ಅಧಿಕಾರ ದೆಹಲಿ ಸರ್ಕಾರಕ್ಕೆ ಇದೆ ಅಂತ ಕೋರ್ಟ್ ಸರ್ವಾನುಮತದಿಂದ ಹೇಳಿದೆ. ಇನ್ನು ದಿಲ್ಲಿ ಸರ್ಕಾರದ ಪರ ತೀರ್ಪು ಬರ್ತಿದ್ದಂತೆ ಕೇಜ್ರಿವಾಲ್‌ ಬಳಗ ಸಂಭ್ರಮ ಮಾಡಿದೆ. ಇದು ದಿಲ್ಲಿ ಜನರಿಗೆ ಸಂದಿರೋ ಜಯ. ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ಕಠಿಣ ಸಂದೇಶ ಹೋಗಿದೆ, ದೆಹಲಿಯಲ್ಲಿರೋ ಭ್ರಷ್ಟ ಅಧಿಕಾರಿಗಳನ್ನೆಲ್ಲಾ ಕಿತ್ತು ಹಾಕ್ತೀವಿ. ನಮ್ಮ ಸರ್ಕಾರ 10 ಪಟ್ಟು ವೇಗವಾಗಿ ಓಡುತ್ತೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ ಈ ತೀರ್ಪು ಹೊರ ಬಂದ ಕೆಲವೇ ಗಂಟೆಗಳಲ್ಲಿ ದೆಹಲಿ ಸರ್ವೀಸ್‌ ಸೆಕ್ರೆಟ್ರಿ ಅಶೀಶ್‌ ಮೋರೆಯನ್ನ ಹುದ್ದೆಯಿಂದ ತೆಗೆದು ಹಾಕಿದ್ದಾರೆ ಕೇಜ್ರಿವಾಲ್. ಈ ಕಡೆ ಆಪ್‌ ಕಾರ್ಯಕರ್ತರೆಲ್ಲಾ ತೀರ್ಪು ಬಂದಿದ್ದಕ್ಕೆ ಹೋಳಿ ಆಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಹಬ್ಬದ ಸಂಭ್ರಮ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply