ಬಿಜೆಪಿ ವಿರುದ್ದ ರೇಟ್‌ ಕಾರ್ಡ್‌, ಡಿಕೆಶಿ ಚುನಾವಣಾ ಆಯೋಗದಿಂದ ನೋಟಿಸ್!

masthmagaa.com:

ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಕಾಂಗ್ರೆಸ್‌ ನೀಡಿರುವ ರೇಟ್‌ ಕಾರ್ಡ್‌ ಜಾಹೀರಾತು ವಿವಾದಕ್ಕೊಳಗಾಗಿದೆ. ಕಾಂಗ್ರೆಸ್‌ ಪಕ್ಷದ ಜಾಹೀರಾತನ್ನ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಜೊತೆಗೆ ನೀತಿ ಸಂಹಿತೆ ಉಲ್ಲಂಘನೆ ದೂರಿನ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವ್ರಿಗೆ ನೋಟಿಸ್‌ ಜಾರಿಗೊಳಿಸಿದೆ. ಕಾಂಗ್ರೆಸ್‌ ತಾನು ಮಾಡಿರುವ ನಿರ್ದಿಷ್ಟ ಆರೋಪಗಳ ಕುರಿತು ಸಾಕ್ಷ್ಯಾಧಾರ ಹಾಜರುಪಡಿಸುವಂತೆ ಚುನಾವಣಾ ಆಯೋಗ ತಾಕೀತು ಮಾಡಿದೆ. ಇತ್ತ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೊ ಡಿಕೆಶಿ, ರೇಟ್‌ ಕಾರ್ಡ್‌ ಕೊಟ್ಟಿದ್ದು ನಾನಲ್ಲ, ಬಿಜೆಪಿಯವರೇ ಕೊಟ್ಟದ್ದು. ಯತ್ನಾಳ್‌, ಗೂಳಿಹಟ್ಟಿ ಶೇಖರ್‌ ಹಾಗೂ ಹೆಚ್‌ ವಿಶ್ವನಾಥ್‌ ರೇಟ್‌ ಕಾರ್ಡ್‌ ಕೊಟ್ಟಿದ್ದಾರೆ. ಸಿಎಂ ಸ್ಥಾನಕ್ಕೆ ರೇಟ್‌ ಎಷ್ಟು, ಮಂತ್ರಿ ಸ್ಥಾನಕ್ಕೆ ಎಷ್ಟು ರೇಟ್‌, ಮಠಗಳ ಸ್ವಾಮೀಜಿಗಳಿಂದ ಎಷ್ಟು ರೇಟ್‌ ಅನ್ನೊದನ್ನ ಬಿಜೆಪಿಯವರೇ ಹೇಳಿದ್ದಾರೆ. ಅದನ್ನ ನಾವು ನೀಡಿದ್ದೇವೆ ಅಷ್ಟೇ ಎಂದಿದ್ದಾರೆ. ಅಂದ್ಹಾಗೆ ಬಿಜೆಪಿ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ರಿಲೀಸ್‌ ಮಾಡಿದ್ದ ಕಾಂಗ್ರೆಸ್‌ ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ಕಮಿಷನ್​, ಮಂತ್ರಿ ಹುದ್ದೆಗೆ 500 ಕೋಟಿ, ವರ್ಗಾವಣೆಗೆ 5 ರಿಂದ 15 ಕೋಟಿ, ಇಂಜಿನಿಯರ್​ ಹುದ್ದೆಗೆ 1 ರಿಂದ 5 ಕೋಟಿ ನೀಡಬೇಕು ಅಂತ ಬಿಜೆಪಿ ವಿರುದ್ಧ ಆರೋಪಿಸಿತ್ತು.

-masthmagaa.com

Contact Us for Advertisement

Leave a Reply