ತೈವಾನ್​ ವಿಚಾರವಾಗಿ ಅಮೆರಿಕಗೆ ಯದ್ಧ ಆಹ್ವಾನ ಕೊಟ್ಟ ಚೀನಾ

masthmagaa.com:

ತೈವಾನ್ ವಿಚಾರವಾಗಿ ಚೀನಾ ಮತ್ತು ಅಮೆರಿಕ ನಡುವೆ ನಡೆಯುತ್ತಿರೋ ಸಂಘರ್ಷ ಮತ್ತಷ್ಟು ಜೋರಾಗಿದೆ. ತೈವಾನ್ ಸಮೀಪ ಚೀನಾ ನಡೆಸುತ್ತಿರುವ ಸೇನಾ ತಾಲೀಮನ್ನ ಚೀನಾ ‘ಯುದ್ಧ ಕಸರತ್ತು’ ಅಂತಾನೇ ಕರೆದಿದೆ. ಈ ಮೂಲಕ ತೈವಾನ್ ಬೆಂಬಲಿಸುತ್ತಿರುವ ಅಮೆರಿಕಕ್ಕೆ ಯುದ್ಧದ ಎಚ್ಚರಿಕೆಯನ್ನ ಕೊಟ್ಟಿದೆ ಡ್ರಾಗನ್ ದೇಶ ಚೀನಾ. ಅಂದ್ಹಾಗೆ ಸೋಮವಾರವಷ್ಟೇ ಚೀನಾ ವಾಯುಪಡೆಯ 25 ವಿಮಾನಗಳು ತೈವಾನ್ ವಾಯುಗಡಿ ಪ್ರವೇಶಿಸಿದ್ದವು. ಇದರಲ್ಲಿ ಯುದ್ಧ ವಿಮಾನ ಮತ್ತು ಪರಮಾಣು ಸಾಮರ್ಥ್ಯದ ಬಾಂಬರ್​ಗಳು ಸೇರಿದ್ದವು. ಈ ಪ್ರಮಾಣದಲ್ಲಿ ಚೀನಾ ತನ್ನ ಯುದ್ಧ ವಿಮಾನಗಳನ್ನ ತೈವಾನ್ ವಾಯುಗಡಿ ಪ್ರವೇಶಿಸಿದ್ದು ಈ ವರ್ಷದಲ್ಲಿ ಇದೇ ಮೊದಲು. ಇದರ ಬೆನ್ನಲ್ಲೇ ತೈವಾನ್ ಬಳಿ ನಾವು ನಡೆಸುತ್ತಿರೋದು ಯುದ್ಧ ಸನ್ನದ್ಧತೆ ಅಂತ ಚೀನಾ ಹೇಳಿದೆ. ಇದೊಂಥರ ತೈವಾನ್ ಬೆಂಬಲಿಸುತ್ತಿರುವ ಅಮೆರಿಕವನ್ನ ಯುದ್ಧಕ್ಕೆ ಆಹ್ವಾನಿಸಿದಂತೆ ಕಾಣ್ತಿದೆ. ಅಂದ್ಹಾಗೆ ತೈವಾನ್​ ತನಗೇ ಸೇರಬೇಕು ಅಂತ ಚೀನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಒನ್ ಚೈನಾ ಪಾಲಿಸಿ’ಯನ್ನ ಮುಂದಿಡ್ತಾ ಬರ್ತಿದೆ. ಆದ್ರೆ ತೈವಾನ್ ಇದನ್ನ ಒಪ್ಪಿಕೊಳ್ತಿಲ್ಲ. ಅಮೆರಿಕ ಕೂಡ ತೈವಾನ್ ಪರವಾಗಿ ನಿಂತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬುಧವಾರ ಅಮೆರಿಕದ ಮಾಜಿ ಸೆನೆಟರ್, ಮಾಜಿ ಡೆಪ್ಯುಟಿ ಸೆಕ್ರೆಟರಿಗಳು ತೈವಾನ್​ಗೆ ಬಂದಿಳಿದಿದ್ದಾರೆ. ಇದು ಚೀನಾಗೆ ಕೊಡ್ತಿರೋ ‘ಪರ್ಸನಲ್ ಸಿಗ್ನಲ್’ ಅಂತಾನೇ ಅಮೆರಿಕ ಬಣ್ಣಿಸಿದೆ.

-masthmagaa.com

Contact Us for Advertisement

Leave a Reply