ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ: ವಿಪಕ್ಷಗಳಿಗೆ ಹಾಗೂ ರೈತರಿಗೆ ಡಿಕೆಶಿ ಮನವಿ

masthmagaa.com:

ತಮಿಳುನಾಡಿಗೆ ನೀರು ಬಿಡ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಳೆ ಅಭಾವದಿಂದ ಜಲಾಶಯಗಳು ತುಂಬಿಲ್ಲ. ರೈತರ ಬೆಳೆಗೆ ನೀರಿಲ್ಲ, ಬೆಂಗಳೂರಿನಲ್ಲೂ ಕುಡಿಯುವ ನೀರಿಗೆ ಕೊರತೆ ಉಂಟಾಗಿದೆ. ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಸರ್ಕಾರ ಹೊರಟಿದೆ. ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ನೀರು ಹರಿಸುವ ಮೂಲಕ ತಮಿಳುನಾಡು ಜೊತೆ ರಾಜಕೀಯ ಚೌಕಾಬಾರ ಆಡುತ್ತಿದೆ. ಇದೇನು ಇನ್ನೊಂದು ಗ್ಯಾರಂಟಿನಾ? ಅಂತ ಪ್ರಶ್ನಿಸಿದ್ದಾರೆ. ಇತ್ತ ಕಾವೇರಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯದ ಕೆಆರ್‌ಎಸ್ ಅಣೆಕಟ್ಟೆ ಬಳಿ ಹಲವು ರೈತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಪುಟ್ಟಣ್ಣಯ್ಯ ಕೂಡ ಭಾಗವಹಿಸಿದ್ರು. ಇದರ ಬೆನ್ನಲ್ಲೇ ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಅಂತ ಬಿಜೆಪಿ ನಾಯಕರು ಹಾಗೂ ರೈತರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ತಮಿಳುನಾಡು 27 ಟಿಎಂಸಿ ನೀರು ಕೇಳಿದೆ. ಈ ಕುರಿತು ನಮ್ಮ ಇಚ್ಛೆಯಂತೆ ನಿರ್ಧರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕಾನೂನು ತಜ್ಞರ ಸಲಹೆಯನ್ನ ಪಾಲಿಸಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನ ಎದುರಿಸಬೇಕಾಗುತ್ತದೆ ಅಂತ ತಮ್ಮ ಕ್ರಮವನ್ನ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಮುಂಗಾರು ದುರ್ಬಲಗೊಂಡಿರೋದರಿಂದ ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳ ಒಳಹರಿವು ಕಡಿಮೆಯಾಗಿದೆ. ಇಂತಹ ಸಂಕಷ್ಟದಲ್ಲಿ ನಾವು ರೈತರೊಂದಿಗೆ ಇದ್ದೇವೆ. ಕಾನೂನನ್ನ ಗೌರವಿಸಬೇಕು ಅನ್ನೊ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಅಂತ ತಿಳಿಸಿದ್ದಾರೆ. ಇನ್ನು ರೈತರು ಪ್ರತಿಭಟನೆ ನಡೆಸಲು ಮುಂದಾದರೆ, ಅದು ಅವರ ಹಕ್ಕು ಹಾಗೂ ಅವರು ನ್ಯಾಯಾಲಯದ ಮೊರೆ ಹೋಗಬಹುದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply