ಭಾರತಕ್ಕೆ ನ್ಯಾಟೋ ಬಾಗಿಲು ಒಪನ್‌ ಇದೆ, ಆದ್ರೆ..! ನ್ಯಾಟೋ ರಾಯಭಾರಿ ಹೇಳಿದ್ದೇನು?

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತಕ್ಕೆ ನ್ಯಾಟೋ ಬಾಗಿಲು ಓಪನ್‌ ಇದೆ ಅಂತ ನ್ಯಾಟೋ ಹೇಳಿದೆ. ಭಾರತಕ್ಕೆ ನ್ಯಾಟೋ ಕುರಿತು ಇಂಟರೆಸ್ಟ್‌ ಇದ್ರೆ, ಮಾತುಕತೆ ನಡೆಸಲು ನಾವು ರೆಡಿ ಇದೀವಿ, ಭಾರತದೊಂದಿಗೆ ಹೆಚ್ಚು ತೊಡಗಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಅಂತ ನ್ಯಾಟೋದ ಅಮೆರಿಕದ ರಾಯಭಾರಿ ಜುಲಿಯನ್ನಾ ಸ್ಮಿತ್‌ ಹೇಳಿದ್ದಾರೆ. ಆದ್ರೆ ಇದೇ ವೇಳೆ ನ್ಯಾಟೋ ಬಾರ್ಡರ್‌ನ್ನ ವಿಸ್ತರಿಸೋ ಪ್ಲ್ಯಾನ್‌ ಇಲ್ಲ ಅಂತಾನೂ ಹೇಳಿದ್ದಾರೆ. ಪ್ರಸ್ತುತ ನ್ಯಾಟೋ ಜಗತ್ತಿನಾದ್ಯಂತ 40 ವಿವಿಧ ಪಾರ್ಟ್ನರ್‌ಗಳನ್ನ ಹೊಂದಿದೆ. ಪ್ರತಿಯೊಬ್ಬರ ಜೊತೆಗಿನ ಸಂಬಂಧ ಬೇರೆಯಾಗಿದೆ. ಹಲವಾರು ದೇಶಗಳು ಹಲವಾರು ವಿಧದಲ್ಲಿ ಸಂಬಂಧಗಳನ್ನ ಬೆಳೆಸಲು ನ್ಯಾಟೋ ಬಾಗಿಲನ್ನ ತಟ್ಟುತ್ತವೆ. ಸದ್ಯಕ್ಕೆ ನ್ಯಾಟೋವನ್ನ ಜಾಗತಿಕ ಮಿಲಿಟರಿ ಮೈತ್ರಿಕೂಟವನ್ನಾಗಿ ವಿಸ್ತರಿಸುವ ಯಾವುದೇ ಯೋಜನೆ ನಮ್ಮ ಮುಂದಿಲ್ಲ. ಅಂದ್ರೆ ಅದನ್ನ ಯುರೋಪ್ ಹಾಗೂ ಅಟ್ಲಾಂಟಿಕ್ ಬಿಟ್ಟು ಇಂಡೋ-ಪೆಸಿಫಿಕ್ ಅಥವಾ ಏಷ್ಯಾ-ಪೆಸಿಫಿಕ್‌ವರೆಗೆ ವಿಸ್ತರಿಸುವ ಯೋಜನೆಗಳಿಲ್ಲ ಅಂತ ಹೇಳಿದ್ದಾರೆ. ಆದ್ರೆ, ನ್ಯಾಟೋ ಮೈತ್ರಿಕೂಟ, ಭಾರತದ ಜೊತೆ ಹೆಚ್ಚು ತೊಡಗಿಸಿಕೊಳ್ಳಲು ಅಂದ್ರೆ ಅದರ ಜೊತೆ ಸಂಬಂಧ ಬೆಳೆಸಲು ಓಪನ್‌ ಇದೆ. ಈ ಕುರಿತು ಭಾರತವೇ ಆಸಕ್ತಿ ತೋರಿಸಬೇಕು ಅಂತ ಸ್ಮಿತ್‌ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಸ್ಮಿತ್, ನ್ಯಾಟೋಗೆ ಚೀನಾ ಪ್ರಬಲ ಪ್ರತಿಸ್ಪರ್ಧಿ ಅನ್ನೊದು ಸತ್ಯ. ಹೀಗಾಗಿ ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ನಾವು ನಮ್ಮ ಪಾಲುದಾರರೊಂದಿಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಿದ್ದೇವೆ. ಚೀನಾದ ಮಿಲಿಟರಿ ಶಕ್ತಿಯನ್ನು ಎದುರಿಸೋಕೆ ಸಾಧ್ಯವಾದ ಎಲ್ಲಾ ಕ್ರಮಗಳನ್ನ ನಾವು ಅನುಸರಿಸುತ್ತೇವೆ. ಚೀನಾದ ವಿಚಾರ ಸಂಬಂಧಿಸಿದಂತೆ ನ್ಯಾಟೋದೊಂದಿಗಿನ ಸಂಬಂಧ ಭಾರತಕ್ಕೆ ಕೂಡ ಹೆಚ್ಚು ಅನುಕೂಲವಾಗಲಿದೆ ಅಂತ ಕೂಡ ಸ್ಮಿತ್‌ ಹೇಳಿದ್ದಾರೆ. ಅಂದ್ರೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ಭಾರತವನ್ನ ನ್ಯಾಟೋ ಸೇರಿ ಅಂತ ಓಪನ್‌ ಆಗೇ ಆಫರ್‌ ಮಾಡಿದೆ ಅಮೆರಿಕ. ಇನ್ನು ನ್ಯಾಟೋ ಒಕ್ಕೂಟದ ವಿದೇಶಾಂಗ ಸಚಿವರ ಸಭೆ ಏಪ್ರಿಲ್‌ 4 ಹಾಗೂ 5 ರಂದು ಬ್ರುಸೆಲ್ಸ್‌ನಲ್ಲಿರೊ ನ್ಯಾಟೋದ ಹೆಡ್‌ಕ್ವಾರ್ಟರ್ಸ್‌ನಲ್ಲಿ ನಡೆಯಲಿದೆ. ನ್ಯಾಟೋ ಮೈತ್ರಿಕೂಟದ ಬಗ್ಗೆ ಭಾರತದ ಆಸಕ್ತಿ ಬಗ್ಗೆ ನಮಗೆ ಖಚಿತ ಮಾಹಿತಿ ಬೇಕು. ಹೀಗಾಗಿ ಈ ಸಭೆಗೆ ನಾವು ಭಾರತವನ್ನ ಇನ್ವೈಟ್‌ ಮಾಡಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ಜಗತ್ತಿನ ಅತ್ಯಂತ ಬಲಿಷ್ಠ ಮೈತ್ರಿ ಕೂಟ ನ್ಯಾಟೋಕ್ಕೆ ಭಾರತ ಸೇರ್ಬೋದಾ ಅನ್ನೊ ಪ್ರಶ್ನೆ ತುಂಬಾ ದಿನದಿಂದ ಓಡಾಡ್ತಿತ್ತು. ಇದೀಗ ನ್ಯಾಟೋದ ಅಮೆರಿಕ ರಾಯಭಾರಿಯೇ ನಾವು ಮಾತುಕತೆಗೆ ರೆಡಿ ಇದೀವಿ ಅಂತ ಹೇಳಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply