ಚೀನೀ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಿಮ್ ಜಾಂಗ್ ಉನ್!

masthmagaa.com:

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್​​ಗೆ ಚೀನಾ ಅಂದ್ರೆ ಒಂಥರಾ ಪ್ರೀತಿ.. ಚೀನಾ ಜೊತೆಗೆ ಒಳ್ಳೆ ಸಂಬಂಧವನ್ನೇ ಹೊಂದಿದ್ದಾರೆ. ಅದೇ ರೀತಿ ಈಗ ಚೀನಾದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಲ್ಲಿನ ರಾಜಧಾನಿ ಪ್ಯೊಂಗ್ಯಾಂಗ್​​​​​ನಲ್ಲಿ 1950-53ರ ಕೊರಿಯಾ ಯುದ್ಧದಲ್ಲಿ ಮಡಿದ ಚೀನೀ ಯೋಧರಿಗೆ ಗೌರವ ಅರ್ಪಿಸಲು ಫ್ರೆಂಡ್ಶಿಪ್ ಟವರ್ ಅನ್ನೋ ಒಂದು ಮೆಮೋರಿಯಲ್ ನಿರ್ಮಿಸಲಾಗಿದೆ. ಕಿಮ್ ಜಾಂಗ್ ಉನ್ ಪ್ರತಿವರ್ಷ ಇಲ್ಲಿಗೆ ಹೋಗಿ ಶ್ರದ್ಧಾಂಜಲಿ ಸಲ್ಲಿಸಲ್ಲ. 2011ರಲ್ಲಿ ಅವರು ಅಧಿಕಾರಕ್ಕೇರಿದ ಬಳಿಕ ಈವರೆಗೆ 3 ಸಲ ಹೋಗಿದ್ದಾರೆ ಅಷ್ಟೆ.. ಮೊನ್ನೆಯಷ್ಟೇ ಕೊರಿಯನ್ ಯುದ್ಧ ಅಂತ್ಯಗೊಂಡ 68ನೇ ವರ್ಷವನ್ನು ಆಚರಿಸಲಾಯ್ತು. ಅದರ ಮರುದಿನವೇ ಕಿಮ್ ಈ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಕಿಮ್ ಜಾಂಗ್ ಉನ್ ಮಾತನಾಡಿ, ಕೊರಿಯಾ ಜನರ ಐತಿಹಾಸಿಕ ಹೋರಾಟದಲ್ಲಿ ಸಹಾಯ ಮಾಡಿದ ಚೀನಾದ ಯೋಧರ ಉದಾತ್ತ ಆತ್ಮಗಳು ಅಮರವಾಗಿ ಉಳಿಯುತ್ತವೆ. ಚೀನಾದ ಜೊತೆಗಿನ ಸಂಬಂಧವನ್ನು ಪೀಳಿಗೆಯಿಂದ ಪೀಳಿಗೆಗೆ ದೃಢವಾಗಿ ಮುನ್ನಡೆಸಲಾಗುತ್ತೆ ಅಂತ ಹೇಳಿದ್ದಾರೆ ಅಂತ ಸರ್ಕಾರಿ ಮಾಧ್ಯಮ ಕೆಸಿಎನ್​ಎ ವರದಿ ಮಾಡಿದೆ. ಅಂದಹಾಗೆ ಕೊರಿಯಾ ಯುದ್ಧದಲ್ಲಿ ಚೀನಾ ಉತ್ತರ ಕೊರಿಯಾ ಪರವಾಗಿ ದಕ್ಷಿಣ ಕೊರಿಯಾ ಮತ್ತು ಅಮೆರಿಕ ವಿರುದ್ಧ ಹೋರಾಟ ನಡೆಸಿತ್ತು. ಅದ್ರೂ ಕೂಡ ಈ ಯುದ್ಧ ಕದನವಿರಾಮದೊಂದಿಗೆ ಅಂತ್ಯವಾಗಿತ್ತು. ಯಾರೂ ಗೆಲ್ಲೋಕೆ ಸಾಧ್ಯವಾಗಿರಲಿಲ್ಲ. ಯಾವುದೇ ಶಾಂತಿ ಒಪ್ಪಂದ ಕೂಡ ಆಗಿರಲಿಲ್ಲ. ಇದೇ ಕಾರಣಕ್ಕೆ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವೆ ಇಂದಿಗೂ ತಾಂತ್ರಿಕವಾಗಿ ಯುದ್ಧ ನಡೀತಾನೇ ಇದೆ.

-masthmagaa.com

Contact Us for Advertisement

Leave a Reply