ಕೇಂದ್ರದಲ್ಲಿರೋ ಸರ್ಕಾರ – ಕೇಂದ್ರ ಸರ್ಕಾರವೋ? ಒಕ್ಕೂಟ ಸರ್ಕಾರವೋ?

masthmagaa.com:

ಸ್ನೇಹಿತರೆ ಇದೊಂದು ಸುದ್ದಿ ಸ್ವಲ್ಪ ಡೀಟೇಲಾಗಿ ನಿಮಗೆ ಹೇಳಲೇಬೇಕು. ಪೂರ್ತಿ ಗಮನಕೊಟ್ಟು ನೋಡ್ತಾಹೋಗಿ.
ನಮ್ಮ ದೇಶ ಭಾರತ. ಇದು ಒಂದೇ ಯುನಿಟ್ಟಾ? ಅಥವಾ ಹಲವು ಯುನಿಟ್​ಗಳು ಸೇರಿ ಆಗಿರೋ ಯೂನಿಯನ್ನಾ? ಈ ದೇಶದ ಸರ್ಕಾರವನ್ನ ಕೇಂದ್ರ ಸರ್ಕಾರ ಅಂತ ಕರೀಬೇಕಾ? ಅಥವಾ ಒಕ್ಕೂಟ ಸರ್ಕಾರ ಅಂತ ಕರಿಬೇಕಾ? ಈ ಪ್ರಶ್ನೆ ಆಗಾಗ ಚರ್ಚೆ ಆಗ್ತಿರುತ್ತೆ. ಆದ್ರೆ ಈಗ ಇದು ಜಾಸ್ತಿ ಆಗ್ತಿರೋದು, ವಿವಾದ ಆಗ್ತಿರೋದು ತಮಿಳುನಾಡಿನಲ್ಲಿ. ಇತ್ತೀಚೆಗೆ ಡಿಎಂಕೆ ಅಧಿಕಾರಕ್ಕೆ ಬಂದ ಮೇಲೆ ತಮಿಳುನಾಡು ರಾಜ್ಯ ಸರ್ಕಾರ, ಭಾರತ ಸರ್ಕಾರವನ್ನ ಸೆಂಟ್ರಲ್ ಗವರ್ನಮೆಂಟ್ ಅನ್ನೋದರ ಬದಲು ಯೂನಿಯನ್ ಗವರ್ನ್ಮೆಂಟ್ ಅಂತ ಕರಿಯೋಕೆ ಶುರು ಮಾಡಿದೆ. ಇದನ್ನ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್​ಗೆ ಮೊರೆ ಹೋಗಲಾಗಿತ್ತು. ಆದ್ರೆ ಮದ್ರಾಸ್ ಹೈಕೋರ್ಟ್ ಈ ಅರ್ಜಿಯನ್ನ ವಜಾ ಮಾಡಿದೆ.

ಯೂನಿಯನ್ ಗವರ್ನ್ಮೆಂಟ್, ಸೆಂಟ್ರಲ್ ಗವರ್ನ್ಮೆಂಟ್, ಭಾರತ ಸರ್ಕಾರ, ನ್ಯೂ ಡೆಲ್ಲಿ ಅಂತೆಲ್ಲ ಕೇಂದ್ರ ಸರ್ಕಾರವನ್ನ ಒಂದೊಂದ್ಸಲ ಒಂದೊಂದು ಥರ, ಆ ಕ್ಷಣಕ್ಕೆ ಏನ್ ತೋಚುತ್ತೋ ಆ ಥರ ಎಲ್ಲ ಕಡೆ ಕರೀತಾರೆ. ಆದ್ರೆ ತಮಿಳುನಾಡಿನಲ್ಲಿ ಈ ವಿಚಾರ ದೊಡ್ಡ ವಿವಾದ ಆಗಿದೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಯೂನಿಯನ್ ಅಂತ ಕರಿಯೋಕೆ ಶುರು ಮಾಡಿರೋದನ್ನ ಬಿಜೆಪಿ ಪ್ರಶ್ನಿಸಿದೆ. ಇದಕ್ಕೆ ಸದನದಲ್ಲೇ ಉತ್ತರ ಕೊಟ್ಟ ಸ್ಟಾಲಿನ್, ಯೂನಿಯನ್ ಅನ್ನೋ ಪದ ಕೇಳಿ ಯಾರೂ ಗಾಬರಿಯಾಗೋ ಅಗತ್ಯ ಇಲ್ಲ. ಈ ಪದ ನಮ್ಮ ಒಕ್ಕೂಟ ವ್ಯವಸ್ಥೆಯನ್ನ ಸರಿಯಾದ ಅರ್ಥದಲ್ಲಿ ಪ್ರತಿನಿಧಿಸುತ್ತೆ. ಹೀಗಾಗಿ ಮುಂದೇನೂ ಹೀಗೇ ಕರೀತೀವಿ ಅಂತ ಹೇಳಿದ್ದಾರೆ.

ಅಂದಹಾಗೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಈ ರೀತಿಯ ಪ್ರಾದೇಶಿಕವಾದ ಇದೇ ಮೊದಲೇನಲ್ಲ. ಮೊದಲು ತಮಿಳುನಾಡು ವಿಧಾನಸಭೆಯನ್ನ ‘ಸತ್ತಾ ಸಭಾ’ ಅಂತ ಕರೀತಿದ್ರು. ಅದರಲ್ಲಿ ಸಭಾ ಪದ ಸಂಸ್ಕೃತ ಹಾಗೂ ಹಿಂದಿಯದ್ದು ಅನ್ನೋ ಕಾರಣಕ್ಕೆ ಅದನ್ನ ‘ಸತ್ತಾ ಪೇರವೈ’ ಅಂತ ಮಾಡಿದ್ರು. ವಿಧಾನ ಪರಿಷತ್ತನ್ನ ‘ಸತ್ತಾಮಂದ್ರಾ ಮೇಲವೈ’ ಅಂತ ಮಾಡಿದ್ರು. ರಾಜ್ಯಸಭೆಯನ್ನ ‘ಮಾನಿಲಂಗಾಲವೈ’ ಅಂತ ಹಾಗೂ ಲೋಕಸಭೆಯನ್ನ ‘ಮಕ್ಕಳವೈ’ ಅಂತ ಕರೀತಿದಾರೆ. ರಾಷ್ಟ್ರಪತಿಯನ್ನ ‘ಜನಾಧಿಪತಿ’ ಅಂತ ಕರೀತಿದ್ರು. ಅದನ್ನೂ ಚೇಂಜ್ ಮಾಡಿ ಈಗ ‘ಕುದಿಯರಸು ತಲೈವರ್’ ಅಂತ ಮಾಡ್ಕೊಂಡಿದಾರೆ. ಗವರ್ನರ್ ಪದಕ್ಕೆ ತುಂಬಾ ಟೈಮ್ ಯಾವುದೇ ತಮಿಳು ಪದ ಇರಲಿಲ್ಲ. ಈಗ ಅದನ್ನ ತಮಿಳಿಗೆ ಯತಾವತ್ ಟ್ರಾನ್ಸ್ಲೇಶನ್ ಮಾಡಿ ‘ಆಳುವರ್’ ಅಂತ ಮಾಡ್ಕೊಂಡಿದ್ದಾರೆ. ಎಲ್ಲ ಬಿಡಿ ಯಾವ ಮಟ್ಟಿಗೆ ಅಂದ್ರೆ ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ತನ್ನ ರಾಜ್ಯ ಘಟಕಗಳನ್ನ ಪಿಸಿಸಿಗಳು ಅಂತ ಗುರುತಿಸುತ್ತೆ. ಅಂದ್ರೆ ಪ್ರದೇಶ ಕಾಂಗ್ರೆಸ್ ಸಮಿತಿ ಅಂತ. ಕರ್ನಾಟಕದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಂತ ಇದೆಯಲ್ಲ ಹಾಗೆ. ಆದ್ರೆ ತಮಿಳುನಾಡಿನಲ್ಲಿ ಹೀಗಿಲ್ಲ. ಇದರಲ್ಲಿರೋ ಪ್ರದೇಶ ಪದ ಸಂಸ್ಕೃತ-ಹಿಂದಿ ಮೂಲದ್ದು ಅನ್ನೋ ಕಾರಣಕ್ಕೆ ಬರೀ TNCC ಅಂತ ಇಡಲಾಗಿದೆ. ಅಂದ್ರೆ ತಮಿಳುನಾಡು ಕಾಂಗ್ರೆಸ್ ಸಮಿತಿ ಅಂತ. ಪ್ರದೇಶವನ್ನ ಎತ್ತಂಗಡಿ ಮಾಡಲಾಗಿದೆ.

ಸ್ನೇಹಿತರೆ ಭಾರತದ ಸಂವಿಧಾನದ 1ನೇ ವಿಧಿಯಲ್ಲಿ, ‘India, that is Bharat, shall be a Union of States’ ಅಂತ ಆರಂಭದಲ್ಲೇ ಉಲ್ಲೇಖ ಇದೆ. ಆದ್ರೆ ತಜ್ಞರು, ನಮ್ಮ ದೇಶದ ವ್ಯವಸ್ಥೆ ಮೇಲ್ನೋಟಕ್ಕೆ ಮಾತ್ರ ಒಕ್ಕೂಟ ವ್ಯವಸ್ಥೆ. ಆದ್ರೆ ಹೆಚ್ಚಿನ ಶಕ್ತಿ ಕೇಂದ್ರ ಸರ್ಕಾರದಲ್ಲಿದೆ ಅಂತ ಅಭಿಪ್ರಾಯಪಡ್ತಾರೆ.

ಈ ಯೂನಿಯನ್ ಅನ್ನೋ ಪದವನ್ನ ಸಂವಿಧಾನದಲ್ಲಿ ಯಾಕೆ ಹೇಳಿದ್ದಾರೆ ಹಾಗಾದ್ರೆ? ಅಲ್ಲಿ ಯಾಕೆ ಸೆಂಟ್ರಲ್ ಅಂತ ಬಳಸಿಲ್ಲ ಅನ್ನೋ ಪ್ರಶ್ನೆ ಬರಬಹುದು. ಆರಂಭದಲ್ಲಿ ಕೆಲವೇ ಕೆಲವು ಸೀಮಿತ ಜವಾಬ್ದಾರಿಗಳ ಕೇಂದ್ರ ಸರ್ಕಾರ ಹಾಗೂ ಪ್ರಬಲ ರಾಜ್ಯ ಸರ್ಕಾರಗಳನ್ನ ಹೊಂದೋ ರೀತಿ ಸಂವಿಧಾನ ಕರಡು ರಚನಾ ಸಮಿತಿಯ ಉದ್ದೇಶವಾಗಿತ್ತು. ಆದ್ರೆ ಸ್ವಾತಂತ್ರ್ಯದ ವೇಳೆ ದೇಶದ ವಿಭಜನೆ ಆದ ರೀತಿ, ಭಾರತವನ್ನ ಒಗ್ಗೂಡಿಸೋಕೆ ಆಗ ಪಟ್ಟ ಕಷ್ಟ, ಕಾಶ್ಮೀರದಲ್ಲಿ ಆದ ಹಿಂಸಾಚಾರ ಸಂವಿಧಾನ ರಚನಾ ಸಮಿತಿ ಮೇಲೆ ಪರಿಣಾಮ ಬೀರ್ತು. ಹೀಗಾಗಿ ನಿಲುವು ಬದಲಾಯಿಸಿ, ಪ್ರಬಲ ಕೇಂದ್ರ ಸರ್ಕಾರ ನೇತೃತ್ವದಲ್ಲಿ, ಎಂದಿಗೂ ಒಡೆಯಲಾಗದ ಒಕ್ಕೂಟವನ್ನ ರಚಿಸೋ ನಿರ್ಧಾರಕ್ಕೆ ಬಂದ್ರು. ಸಂವಿಧಾನ ಕರಡು ರಚನಾ ಸಮಿತಿಯ ಚೇರ್ಮನ್ ಆಗಿದ್ದ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವ್ರು ಈ ರೀತಿ ಹೇಳಿದ್ರು,

‘ಯಾವುದೇ ರಾಜ್ಯ ದೇಶದಿಂದ ಪ್ರತ್ಯೇಕವಾಗೋಕೆ ಅವಕಾಶವೇ ಇರಬಾರದು ಅಂತ ‘ಈ ದೇಶ ರಾಜ್ಯಗಳ ಒಕ್ಕೂಟವಾಗಿರಲಿದೆ’ ಅಂತ ಬರೆದಿದ್ದೇವೆ. ಹಾಗಂತ ಭಾರತ ಒಂದು ಒಕ್ಕೂಟ ಆಗಿರೋದು ರಾಜ್ಯಗಳೊಂದಿಗೆ ಅಗ್ರೀಮೆಂಟ್ ಮಾಡ್ಕೊಂಡು ಅಲ್ಲ. ಹೀಗಾಗಿ ಯಾವುದೇ ರಾಜ್ಯಕ್ಕೂ ದೇಶದಿಂದ ಹೊರಹೋಗಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಈ ದೇಶ ಒಂದು ಒಕ್ಕೂಟ ಯಾಕೆ ಅಂದ್ರೆ ಇದನ್ನ ಒಡೆಯಲು ಸಾಧ್ಯವೇ ಇಲ್ಲ. ಆ ಕಾರಣಕ್ಕೆ.’
– ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನ ಶಿಲ್ಪಿ

ಅಂದಹಾಗೆ ನಮಗೆ ಇದೆಲ್ಲ ನೋಡ್ತಾ ಒಂದು ಗೀತೆ ನೆನಪಾಗುತ್ತೆ. ಅದು ನಮ್ಮ ನಾಡಗೀತೆ. ’ಜೈ ಭಾರತ ಜನನಿಯ ತನುಜಾತೆ, ಜೈ ಕರ್ನಾಟಕ ಮಾತೆ’ ಅಂತ. ಭಾರತ ಮಾತೆಯ ಮಗಳಾದ ಕರ್ನಾಟಕ ಮಾತೆಗೆ ಜಯವಾಗಲಿ ಅಂತ ರಾಷ್ಟ್ರಕವಿ ಕುವೆಂಪು ಅವರು ಬರೆದ ನಮ್ಮ ನಾಡಗೀತೆ.

-masthmagaa.com

Contact Us for Advertisement

Leave a Reply