ಮಯನ್ಮಾರ್​ನಲ್ಲಿ ಅಂತರ್​ಯುದ್ಧ.. ಸೂ ಕಿ ವಿಚಾರಣೆ ಮತ್ತೆ ಮುಂದೂಡಿಕೆ!

masthmagaa.com:

ಮಯನ್ಮಾರ್​ನಲ್ಲಿ ಕ್ಷಿಪ್ರಕ್ರಾಂತಿ ನಡೆಸಿ ಎಲ್ಲವನ್ನ ತನ್ನ ಕಂಟ್ರೋಲ್​ಗೆ ತೆಗೆದುಕೊಂಡಿರೋ ಮಯನ್ಮಾರ್ ಸೇನೆ ಮತ್ತು ಪ್ರಜಾಪ್ರಭುತ್ವವಾದಿ ಪ್ರತಿಭಟನಾಕಾರರ ನಡುವಿನ ಸಂಘರ್ಷ ಮುಂದುವರಿದಿದೆ. ಮಯನ್ಮಾರ್​ನಲ್ಲಿ ವಾಸಿಸೋ ಕರೆನ್ ಜನಾಂಗದ ಸೇನೆ ಮತ್ತು ಮಯನ್ಮಾರ್​ ಸೇನೆ ನಡುವೆ ಮಯನ್ಮಾರ್​​ ಪೂರ್ವಭಾಗದ ಥೈಲ್ಯಾಂಡ್​ ಗಡಿಯಲ್ಲಿ ಭಾರಿ ಸಂಘರ್ಷ ನಡೆದಿದೆ. ನಾವು ಮಯನ್ಮಾರ್​ ಸೇನೆಯ ಔಟ್​ಪೋಸ್ಟ್​ವೊಂದರ ಮೇಲೆ ನಿಯಂತ್ರಣ ಸಾಧಿಸಿದ್ದೇವೆ ಅಂತ ಕರೆನ್ ನ್ಯಾಷನಲ್ ಯೂನಿಯನ್-KNU ಹೇಳಿದೆ. ಫೆಬ್ರವರಿ 1ರ ಸೇನಾ ಕ್ಷಿಪ್ರಕ್ರಾತಿ ಬಳಿಕ ನಡೆದ ಅತ್ಯಂತ ತೀವ್ರ ಸಂಘರ್ಷಗಳಲ್ಲಿ ಇದು ಕೂಡ ಒಂದು ಅಂತ ಪರಿಗಣಿಸಲಾಗ್ತಿದೆ. ಜೊತೆಗೆ ಮಯನ್ಮಾರ್​​ನಲ್ಲಿ ಸಂಘರ್ಷವನ್ನ ಅಂತ್ಯಗೊಳಿಸುವ ಸಂಬಂಧ ಮಯನ್ಮಾರ್​ ಸೇನೆ ಜೊತೆ ಒಪ್ಪಂದಕ್ಕೆ ಬಂದಿದ್ದೇವೆ ಅಂತ ಆಸಿಯಾನ್​ ಸದಸ್ಯ ರಾಷ್ಟ್ರಗಳು ಹೇಳಿದ ಬೆನ್ನಲ್ಲೇ ಈ ಸಂಘರ್ಷ ನಡೆದಿದೆ. ಸಾಲ್ವೀನ್​ ನದಿ ತಟದ ಥೈಲ್ಯಾಂಡ್​ ಗ್ರಾಮಸ್ಥರು ಕೂಡ ಸೂರ್ಯೋದಯಕ್ಕೂ ಮೊದಲು ಭಾರಿ ಗುಂಡಿನ ಸದ್ದು ಕೇಳಿಸಿತು ಅಂತ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕಾಡಿನಿಂದ ಬೆಂಕಿ ಮತ್ತು ಹೊಗೆ ಏಳುತ್ತಿರೋ ವಿಡಿಯೋಗಳನ್ನ ಪೋಸ್ಟ್​ ಮಾಡಲಾಗಿದೆ. ಕರೆನ್​ ಗುಂಫು ಹೇಳೋ ಪ್ರಕಾರ ಮಯನ್ಮಾರ್​ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ ಕಳೆದ ಕೆಲ ವಾರಗಳಲ್ಲಿ 24 ಸಾವಿರ ಜನ ನಿರಾಶ್ರಿತರಾಗಿ ಕಾಡುಗಳಲ್ಲಿ ವಾಸವಿದ್ದಾರಂತೆ. ಇದರಿಂದ ಸಿಟ್ಟಿಗೆದ್ದಿರೋ ಕರೆನ್ ಸೇನೆ ಮಯನ್ಮಾರ್​ ಸೇನೆ ವಿರುದ್ಧ ದೇಶದ ಹಲವೆಡೆ ಸಂಘರ್ಷ ನಡೆಸ್ತಾನೆ ಇದೆ. ಇನ್ನು ಪ್ರಜಾಪ್ರಭುತ್ವ ಪರ ಹೋರಾಟಗಾರರು ತಮ್ಮ ಪ್ರತಿಭಟನೆಯನ್ನ ತೀವ್ರಗೊಳಿಸಿದ್ದು, ಕರೆಂಟ್​ ಬಿಲ್​ ಕಟ್ಬೇಡಿ, ಕೃಷಿ ಸಾಲವನ್ನ ಮರುಪಾವತಿ ಮಾಡ್ಬೇಡಿ, ಮಕ್ಕಳನ್ನ ಶಾಲೆಗೆ ಕಳಿಸಬೇಡಿ ಅಂತೆಲ್ಲಾ ಕರೆ ಕೊಟ್ಟಿದ್ದಾರೆ. ಈ ಮೂಲಕ ಮಯನ್ಮಾರ್​ ಸೇನೆ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಕಳೆದ ವಾರಂತ್ಯದಲ್ಲಿ ನಡೆದ ಇಂಡೋನೇಷ್ಯಾ ರಾಜಧಾನಿ ಜಕಾರ್ತದಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಮಯನ್ಮಾರ್​ ಪರವಾಗಿ ಸೇನಾ ಮುಖ್ಯಸ್ಥ ಮಿನ್ ಆಂಗ್ ಲೈಂಗ್ ಭಾಗವಹಿಸಿದ್ರು. ಜೊತೆಗೆ ಮಯನ್ಮಾರ್​ನಲ್ಲಿ ತಲೆದೋರಿರೋ ಬಿಕ್ಕಟ್ಟನ್ನ ಅಂತ್ಯಗೊಳಿಸಲು ಆಸಿಯಾನ್ ರಾಷ್ಟ್ರಗಳು ನೀಡಿದ ಸಲಹೆಗಳನ್ನ ಪಾಸಿಟಿವ್ ಆಗಿ ಪರಿಗಣಿಸಲಾಗುವುದು ಅಂತನೂ ಮಯನ್ಮಾರ್ ಸೇನೆ ಹೇಳಿತ್ತು.

ಮತ್ತೊಂದುಕಡೆ ಮಯನ್ಮಾರ್ ಸೇನೆ ಗೃಹ ಬಂಧನದಲ್ಲಿಟ್ಟಿರೋ ನೋಬೆಲ್​ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ವಿರುದ್ಧದ ವಿಚಾರಣೆಯನ್ನ ಮಯನ್ಮಾರ್ ಸೇನೆ ಮತ್ತೊಮ್ಮೆ ಪೋಸ್ಟ್​ಪೋನ್ ಮಾಡಿದೆ. ಹೀಗಂತ ಅವರ ಪರ ವಕೀಲರು ಹೇಳಿದ್ದಾರೆ. ಜೊತೆಗೆ ಟಿವಿ ನೋಡಲು ಕೂಡ ಆಕೆಗೆ ಅವಕಾಶ ಕೊಟ್ಟಿಲ್ಲ. ಹೀಗಾಗಿ ದೇಶದಲ್ಲಿ ಏನಾಗ್ತಿದೆ ಅನ್ನೋದು ಕೂಡ ಬಹುಶಃ ಅವರಿಗೆ ಗೊತ್ತಿರಕ್ಕಿಲ್ಲ ಅಂತ ವಕೀಲರು ಹೇಳಿದ್ದಾರೆ. ಫೆಬ್ರವರಿ 1ರಿಂದಲೂ ಆಂಗ್ ಸಾನ್ ಸೂಕಿಯನ್ನ ಮುಖಾಮುಖಿ ಭೇಟಿಯಾಗಲು ಆಕೆಯ ಪರ ವಕೀಲರು ಪ್ರಯತ್ನ ಪಡ್ತಾನೇ ಇದ್ದಾರೆ. ಸೂಕಿ ವಿರುದ್ಧ ಸೇನೆ 6 ಕೇಸ್​​ಗಳನ್ನ ಹಾಕಿದೆ. ಅದರಲ್ಲಿ ದೇಶದ್ರೋಹ ಮತ್ತು ಲೈಸೆನ್ಸ್ ಇಲ್ಲದ ವಾಕಿ-ಟಾಕಿಗಳನ್ನ ಹೊಂದಿದ ಆರೋಪಗಳು ಕೂಡ ಸೇರಿವೆ.

-masthmagaa.com

Contact Us for Advertisement

Leave a Reply