ಇಮ್ರಾನ್​ ಖಾನ್​ ಫ್ರೆಂಡ್​ ಸಿಧು ಪಂಜಾಬ್ ಸಿಎಂ ಆದ್ರೆ ಕಥೆ ಏನು?

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಪಂಜಾಬ್​​ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್​ನಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಅಮರಿಂದರ್ ಸಿಂಗ್ ರಾಜೀನಾಮೆ ಕೊಟ್ಟಿದ್ದಾರೆ. ರಾಜ್ಯಪಾಲರಾದ ಬನ್ವಾರಿಲಾಲ್​ ಪುರೋಹಿತ್​ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಅಮರಿಂದರ್ ಸಿಂಗ್​ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ರು. ಇವತ್ತು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕಾಲ್ ಮಾಡಿ ನಾನು ರಾಜೀನಾಮೆ ನೀಡ್ತಿದ್ದೀನಿ ಅಂತ ಹೇಳಿದ್ದೆ. ಕಳೆದ ಎರಡು ತಿಂಗಳಲ್ಲಿ ನಮ್ಮ ಶಾಸಕರನ್ನ ದೆಹಲಿಗೆ ಕರೆಸಿ ​ಮೂರುಸಲ ಮಾತುಕತೆ ನಡೆಸಿದ್ದೀರಿ. ಇದು ನನ್ನ ಮೇಲೆ ಅವರಿಗೆ ಅನುಮಾನವಿದೆ ಅಂತ ತೋರಿಸುತ್ತೆ. ಇದರಿಂದ ನನಗೆ ತುಂಬಾ ಅವಮಾನವಾಗಿದೆ. ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಿದ್ದೀನಿ ಅಂತ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್​​ಗೆ ಯಾರು ಇಷ್ಟ ಆಗ್ತಾರೋ ಅವರನ್ನ ಸಿಎಂ ಮಾಡಲಿ. ನಾನಿನ್ನೂ ಕಾಂಗ್ರೆಸ್ ಪಕ್ಷದಲ್ಲಿದ್ದೀನಿ. ನನ್ನ ಬೆಂಬಲಿಗರನ್ನ ಭೇಟಿಯಾಗಿ ಮುಂದೇನು ಮಾಡ್ಬೇಕು ಅಂತ ನಿರ್ಧರಿಸ್ತೀನಿ ಎಂದಿದ್ದಾರೆ. ಮುಂದಿನ ಪಂಜಾಬ್ ಸಿಎಂ ರೇಸ್​​ನಲ್ಲಿ ಸುನಿಲ್ ಜಾಖರ್, ಸುಖ್​ಜಿಂದರ್ ಸಿಂಗ್​ ರಾಂಧವ​ ಮುಂಚೂಣಿಯಲ್ಲಿದ್ದಾರೆ ಮೂಲಗಳು ತಿಳಿಸಿವೆ.

ಇನ್ನು ಪಂಜಾಬ್ ಕಾಂಗ್ರೆಸ್ ಚೀಫ್​ ಆಗಿರೋ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕೂಡ ಸಿಎಂ ರೇಸ್​​ನಲ್ಲಿದ್ದಾರೆ. ಸಿಧು ಸಿಎಂ ಆದ್ರೆ ಹೇಗೆ ಅಂತ ಕೇಳಿದ ಪ್ರಶ್ನೆಗೆ ಅಮರಿಂದರ್ ಸಿಂಗ್​, ನವಜೋತ್​ ಸಿಂಗ್ ಸಿಧುಗೆ ಪಾಕಿಸ್ತಾನದ ಜೊತೆ ಲಿಂಕ್​ ಇದೆ. ಪಾಕ್​ ಪ್ರಧಾನಿ ಇಮ್ರಾನ್ ಖಾನ್​ ಸಿಧು ಅವರ ಫ್ರೆಂಡ್​. ಜೊತೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್​ ಖಮರ್ ಜಾವೆದ್​ ಬಜ್ವಾ ಜೊತೆಯೂ ಸಂಬಂಧ ಇದೆ. ಹೀಗಾಗಿ ಸಿಧು ಏನಾದ್ರೂ ಸಿಎಂ ಆದ್ರೆ ಅದು ದೇಶದ ಭದ್ರತೆಗೆ ಬೆದರಿಕೆ ಆಗುತ್ತೆ. ಹೀಗಾಗಿ ನನ್ನ ದೇಶದ ದೃಷ್ಟಿಯಿಂದ ಸಿಧು ಸಿಎಂ ಆಗೋದನ್ನ ನಾನು ವಿರೋಧಿಸ್ತೀನಿ ಅಂತ ಅಮರಿಂದರ್ ಸಿಂಗ್ ಹೇಳಿದ್ದಾರೆ. ಸಿಧುರನ್ನ ಸಿಎಂ ಮಾಡಿದ್ರೆ ಅದು ದೊಡ್ಡ ದುರಂತವಾಗುತ್ತೆ ಅಂತಾನೂ ಹೇಳಿದ್ದಾರೆ. ಅಂದ್ಹಾಗೆ  ಪಾಕಿಸ್ತಾನದ ಜೊತೆ ಪಂಜಾಬ್​ ಗಡಿ ಹಂಚಿಕೊಳ್ಳುತ್ತೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಅಂದ್ಹಾಗೆ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಬಣಗಳ ನಡುವೆ ಕಳೆದ ಕೆಲ ದಿನಗಳಿಂದ ಸಂಘರ್ಷ ನಡೀತಾನೇ ಇತ್ತು. ಜೊತೆಗೆ ಚುನಾವಣೆಗೂ ಮೊದಲು ಸಿಎಂ ಬದಲಾಗಬೇಕು ಅನ್ನೋ ಕೂಗು ಕೆಲ ಶಾಸಕರಲ್ಲಿತ್ತು. ಇದೀಗ ಕೊನೆಗೂ 79 ವರ್ಷ ವಯಸ್ಸಿನ ಕ್ಯಾಪ್ಟನ್​ ಅಮರಿಂದರ್ ಸಿಂಗ್ ರಾಜೀನಾಮೆ ನೀಡುವಂತಾಗಿದೆ. ಇವರು ಸದ್ಯ ದೇಶದಲ್ಲಿ ಅಧಿಕಾರದಲ್ಲಿದ್ದ ಅತ್ಯಂತ ಹಿರಿಯ ಸಿಎಂ ಎನಿಸಿಕೊಂಡಿದ್ರು. ಈ ಹಿಂದೆ ಕೂಡ 2002ರಿಂದ 2007ರವರೆಗೆ ಪಂಜಾಬ್​ ಸಿಎಂ ಆಗಿದ್ರು. 1963ರಿಂದ 66ರವರೆಗೆ ಭಾರತೀಯ ಸೇನೆಯಲ್ಲಿದ್ದ ಇವರು, 1965ರ ಭಾರತ-ಚೀನಾ ಯುದ್ಧದಲ್ಲಿ ಭಾಗವಹಿಸಿದ್ರು. ನಂತ್ರ 1980ರಲ್ಲಿ ಮೊದಲ ಬಾರಿ ಕಾಂಗ್ರೆಸ್​ನಿಂದ ಲೋಕಸಭೆಗೆ ಗೆದ್ದು ಬಂದಿದ್ರು. ಆದ್ರೆ 1984ರಲ್ಲಿ ಆಪರೇಷನ್​ ಬ್ಲೂ ಸ್ಟಾರ್ ವಿರೋಧಿಸಿ ಕಾಂಗ್ರೆಸ್​​ನಿಂದ ಹೊರಬಂದ್ರು. ಶಿರೋಮಣಿ ಅಕಾಲಿ ದಳವನ್ನ ಸೇರಿದ್ರು. ನಂತ್ರ 1992ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನ ಸೇರಿದ್ರು.

-masthmagaa.com

Contact Us for Advertisement

Leave a Reply