ಪಶ್ಚಿಮ ಬಂಗಾಳದಲ್ಲಿ ನಿಲ್ಲದ ಕೋಮು ಗಲಭೆ! ಉದ್ರಿಕ್ತರನ್ನ ಚದುರಿಸಲು ಟಿಯರ್‌ ಗ್ಯಾಸ್‌ ಬಳಸಿದ ಪೊಲೀಸರು!

masthmagaa.com:

ರಾಮ ನವಮಿ ಆಚರಣೆಯಂದು ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ನಡೆದಿವೆ. ಅದ್ರಲ್ಲೂ ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಮನವಮಿ ಮೆರವಣಿಗೆ ವೇಳೆ ಉಂಟಾಗಿದ್ದ ಹಿಂಸಾತ್ಮಕ ಗಲಭೆ ಇಂದೂ ಕೂಡ ತೀವ್ರಗೊಂಡಿದೆ. ನೆನ್ನೆ ನಡೆದ ಹಿಂಸಾಚರದ ಹಿನ್ನೆಲೆಯಲ್ಲಿ ಹೌರಾದಲ್ಲಿ ಸಾಕಷ್ಟು ಪೊಲೀಸರನ್ನ ನಿಯೋಜನೆಗೊಳಿಸಲಾಗಿತ್ತು. ಹಾಗಿದ್ರೂ ಕೂಡ ಇಂದು ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಗಲಭೆಕೋರರನ್ನ ಚದುರಿಸಲು ಟಿಯರ್‌ ಗ್ಯಾಸ್‌ ಬಳಸಿದ್ದಾರೆ. ಘಟನೆಯಲ್ಲಿ 10 ಜನ ಗಾಯಗೊಂಡಿದ್ದು, ಕನಿಷ್ಠ 36 ಜನರನ್ನ ಬಂಧಿಸಲಾಗಿದೆ. ಇನ್ನು ಈ ಗಲಾಟೆಗೆ ಬಿಜೆಪಿಯೇ ಕಾರಣ ಅಂತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ರೀತಿ ಕೋಮುಗಲಭೆ ಸೃಷ್ಟಿಸಲು ಈ ಗೂಂಡಾಗಳನ್ನ ಬಿಜೆಪಿ ನೇಮಿಸಿಕೊಂಡಿದೆ. ಹೌರಾ ನಗರವನ್ನ ಮೊದಲಿನಿಂದಲೂ ಬಿಜೆಪಿ ಟಾರ್ಗೆಟ್‌ ಮಾಡ್ತಿದೆ ಅಂತ ಆರೋಪಿಸಿದ್ದಾರೆ. ಜೊತೆಗೆ ಹಿಂಸಾಚಾರದಲ್ಲಿ ಭಾಗಿಯಾದವ್ರನ್ನ ಬಿಡುವುದಿಲ್ಲ, ನಾನು ಗಲಭೆಕೋರರನ್ನು ಬೆಂಬಲಿಸೋದಿಲ್ಲ ಅವ್ರನ್ನ ದೇಶದ ಶತ್ರು ಎಂದು ಪರಿಗಣಿಸುತ್ತೇವೆ ಅಂತ ಮಮತಾ ಹೇಳಿದ್ದಾರೆ. ಇತ್ತ ದೀದಿಯ ಆರೋಪವನ್ನ ನಿರಾಕರಿಸಿರುವ ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ, ಹಿಂಸಾಚಾರಕ್ಕೆ ಸಿಎಂ ಮತ್ತು ಅಲ್ಲಿನ ರಾಜ್ಯ ಆಡಳಿತವೇ ಹೊಣೆ ಅಂತ ತಿರುಗೇಟು ನೀಡಿದ್ದಾರೆ. ಇನ್ನು ಗೃಹ ಸಚಿವ ಅಮಿತ್‌ ಶಾ ಅವ್ರು ಬಂಗಾಳದ ಗವರ್ನರ್‌ಗೆ ಫೋನ್‌ ಮಾಡಿ ಮಾತಾಡಿದ್ದು, ಅಲ್ಲಿನ ಪರಿಸ್ಥಿತಿ ಕುರಿತು ವಿಚಾರಿಸಿದ್ದಾರೆ. ಇನ್ನೊಂದ್‌ ಕಡೆ ಗುಜರಾತ್‌ನಲ್ಲೂ ರಾಮ ನವಮಿ ಉತ್ಸವದ ವೇಳೆ ಹಿಂಸಾಚಾರ ನಡೆದಿದೆ. ಅಲ್ಲಿನ ಫತೇಹ್‌ಪುರ್‌ನಲ್ಲಿ ನಡೆಯುತ್ತಿದ್ದ ಶೋಭಾಯಾತ್ರೆ ಮೇಲೆ ಕಲ್ಲುಗಳನ್ನ ತೂರಿ ಗಲಾಟೆ ಮಾಡಲಾಗಿದೆ. ಕೇಸ್‌ಗೆ ಸಂಬಂಧಿಸಿದಂತೆ 24 ಅರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಎಫ್‌ಐಆರ್‌ ದಾಖಲಾದ ಬಳಿಕ ಎಲ್ಲರನ್ನೂ ಅಧಿಕೃತವಾಗಿ ಬಂಧಿಸಲಾಗುವುದು. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಅಂದ್ಹಾಗೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿಯೂ ರಾಮ ನವಮಿ ವೇಳೆ ಕಲ್ಲು ತೂರಾಟ, ಹಿಂಸಾಚಾರ ನಡೆದಿತ್ತು. ಗಲಭೆಕೋರರು ಕನಿಷ್ಟ 9 ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿದ್ರು. ಇತ್ತ ರಾಜ್ಯದಲ್ಲೂ ರಾಮ ನವಮಿ ವೇಳೆ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದೆ. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಸಂಘರ್ಷ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply