ಅಮೆರಿಕದಲ್ಲಿ ವಲಸಿಗ ಕ್ಯಾಂಪ್​.. ಮಕ್ಕಳಿಗೆ ನರಕಯಾತನೆ!

masthmagaa.com:

ಇಡೀ ವಿಶ್ವಕ್ಕೆ ಉಪದೇಶ ಮಾಡೋ ಅಮೆರಿಕ ಈಗ ವಿಶ್ವದ ಮುಂದೆ ತಲೆ ತಗ್ಗಿಸುವಂತಹ ಸಮಯ ಬಂದಿದೆ. ಅಮೆರಿಕದ ಅಂಥದ್ದೊಂದು ಕೃತ್ಯ ಈಗ ಜಗಜ್ಜಾಹೀರಾಗಿದೆ. ಚೀನಾದ ಶಿಂಜಿಯಾಂಗ್​ನಲ್ಲಿ ಉಘರ್ ಮುಸ್ಲಿಮರ ಮೇಲೆ ನಡೀತಿರೋ ಹಿಂಸಾಚಾರದ ಬಗ್ಗೆ ಮಾತನಾಡೋ ಅಮೆರಿಕ ತನ್ನ ದೇಶದಲ್ಲಿರೋ ವಲಸಿಗರ ಕ್ಯಾಂಪ್​​ನಲ್ಲಿ ಮಾಡ್ತಿರೋದು ಏನು ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡುತ್ತೆ ಈ ಸ್ಟೋರಿ.. ಸೆಂಟ್ರಲ್ ಅಮೆರಿಕದಿಂದ ಅಮೆರಿಕಾಗೆ ಬರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಸೆಂಟ್ರಲ್ ಅಮೆರಿಕದ ಕೆಲ ದೇಶಗಳಲ್ಲಿನ ಹಿಂಸಾಚಾರ, ನೈಸರ್ಗಿಕ ವಿಕೋಪ ಮತ್ತು ಸಾಂಕ್ರಾಮಿಕ ಕಾಯಿಲೆ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಜನ ಅಮೆರಿಕಾ ಕಡೆಗೆ ವಲಸೆ ಬರ್ತಿದ್ದಾರೆ. ಈ ಹಿಂದೆ ಟ್ರಂಪ್ ಕಾಲದಲ್ಲಿ ಮೆಕ್ಸಿಕೋ ಗಡಿಯಿಂದ ವಲಸಿಗರನ್ನು ತಡೆಯೋಕೆ ಗಡಿಯುದ್ದಕ್ಕೂ ಗೋಡೆ ಕಟ್ಟಕ್ಕೆ ಮುಂದಾಗಿದ್ರು. ಆದ್ರೆ ಬೈಡೆನ್ ಬರುತ್ತಲೇ ಗೋಡೆ ನಿರ್ಮಾಣ ಕಾರ್ಯಕ್ಕೆ ಬ್ರೇಕ್ ಹಾಕಿದ್ರು. ಇದ್ರಿಂದ ಅಮೆರಿಕಾಗೆ ವಲಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಯ್ತು. ಹಾಗಾದ್ರೆ ಬೈಡೆನ್ ವಲಸಿಗರ ವಿಚಾರದಲ್ಲಿ ಸಾಫ್ಟ್ ಕಾರ್ನರ್ ಹೊಂದಿದ್ದಾರಾ… ಖಂಡಿತ ಇಲ್ಲ ಅನ್ನುತ್ತೆ ಬಿಬಿಸಿ ನಡೆಸಿರುವ ತನಿಖಾ ವರದಿ.. ಹೌದು.. ಮೆಕ್ಸಿಕೋ ಗಡಿಗೆ ಅಂಟಿಕೊಂಡಿರೋ ಅಮೆರಿಕದ ಟೆಕ್ಸಾಸ್​​ನ ಎಲ್​ಪಾಸೋದಲ್ಲಿರೋ ಫೋರ್ಟ್​ ಬ್ಲಿಸ್​ ಮಿಲಿಟರಿ ಬೇಸ್​ನಲ್ಲಿ 12 ಟೆಂಟ್ ಕ್ಯಾಂಪ್​​​ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಸೆಂಟ್ರಲ್ ಅಮೆರಿಕದ ದೇಶಗಳಿಂದ ಗಡಿ ದಾಟಿ ಬಂದ 2 ಸಾವಿರಕ್ಕೂ ಹೆಚ್ಚು ಹದಿಹರೆಯದ ಮಕ್ಕಳನ್ನು ಇರಿಸಲಾಗಿದೆ. ಇವರೆಲ್ಲರೂ ಏಕಾಂಗಿಯಾಗಿ ಗಡಿ ದಾಟಿದ್ದು, ಈಗಾಗಲೇ ಗಡಿ ದಾಟಿ ಅಮೆರಿಕಕ್ಕೆ ಬಂದಿರೋ ತಮ್ಮ ಸಮುದಾಯವರನ್ನು ಸೇರೋಕೆ ಕಾಯ್ತಿದ್ದಾರೆ. ಆದ್ರೆ ಅಮೆರಿಕದವರು ಮಾತ್ರ ಇವ್ರನ್ನ ಕ್ಯಾಂಪ್​​ಗಳನ್ನು ಕೂಡಾಕಿ ರುಬ್ತಿದ್ದಾರೆ. ಮೊದಲು 40 ದಿನಗಳ ಕಾಲ ಈ ಕ್ಯಾಂಪ್​​ನಲ್ಲಿರಿಸಿ ನಂತರ ಮಕ್ಕಳನ್ನು ಬಿಡುಗಡೆ ಮಾಡಲಾಗ್ತಿತ್ತು. ಆದ್ರೀಗ ಆ ಸಂಖ್ಯೆಯನ್ನು 30 ದಿನಕ್ಕೆ ಇಳಿಸಲಾಗಿದೆ. ಆದ್ರೂ ಕೂಡ ಕ್ಯಾಂಪ್​ನಲ್ಲಿ ಮಕ್ಕಳನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ತಿಲ್ಲ ಅನ್ನೋದು ಬಿಬಿಸಿಯ ರಹಸ್ಯ ಕಾರ್ಯಾಚರಣೆಯಲ್ಲಿ ಗೊತ್ತಾಗಿದೆ. ಈ ಕ್ಯಾಂಪ್​​ಗೆ ಭೇಟಿ ನೀಡಿ ವರದಿ ಮಾಡಲು ಮಾಧ್ಯಮಗಳಿಗೆ ಅವಕಾಶ ನೀಡಿಲ್ಲ. ಆದ್ರೂ ಕೂಡ ಬಿಬಿಸಿ ಮಾಧ್ಯಮ ಕ್ಯಾಂಪ್​ ಸಿಬ್ಬಂದಿ ಜೊತೆಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಫೋಟೋ ಮತ್ತು ವಿಡಿಯೋಗಳನ್ನು ಕೂಡ ರಹಸ್ಯ ರೀತಿಯಲ್ಲಿ ಪಡ್ಕೊಂಡಿದೆ. ಅದ್ರ ಪ್ರಕಾರ ಈ ಕ್ಯಾಂಪ್​​ಗಳಲ್ಲಿನ ಮಕ್ಕಳು ಲೈಂಗಿಕ ದೌರ್ಜನ್ಯ, ಕೊರೋನಾದಿಂದ ಪರದಾಡ್ತಿದ್ದಾರೆ. ನೈರ್ಮಲ್ಯದ ಕೊರತೆಯಿಂದ ಅವರ ದೇಹದಲ್ಲಿ ಹೇನು, ತಿಗಣೆ ಕೀಟಾಣುಗಳು ಸೃಷ್ಟಿಯಾಗಿವೆ. ಸರಿಯಾದ ವೈದ್ಯಕೀಯ ಸೌಲಭ್ಯ ಕೂಡ ಸಿಗ್ತಿಲ್ಲ. ಸ್ವಚ್ಛವಾದ ಬಟ್ಟೆಗಳಿಲ್ಲದೇ, ಆಹಾರಗಳಿಲ್ಲದೇ ನರಕಯಾತನೆ ಅನುಭವಿಸ್ತಿದ್ದಾರೆ ಅಂತ ಗೊತ್ತಾಗಿದೆ. ಎಲ್ಲಾ ಬಿಡಿ.. ಇಲ್ಲಿ ಮಕ್ಕಳಿಗೆ ಅರೆಬರೆ ಬೇಯಿಸಿದ ಮಾಂಸವನ್ನ ಆಹಾರವಾಗಿ ಕೊಡಲಾಗ್ತಿದೆ ಅಂತ ಬಿಬಿಸಿ ವರದಿ ಮಾಡಿದೆ. ಈಗಾಗಲೇ ಈ ಕ್ಯಾಂಪ್​ನಿಂದ ರಿಲೀಸ್ ಆಗಿರೋ 15 ವರ್ಷದ ಬಾಲಕನೊಬ್ಬ, ನಮಗೆ ಯಾವಾಗಲೂ ಅರೆಬರೆ ಬೆಂದಿರೋ ಮಾಂಸ ಕೊಡ್ತಿದ್ರು. ಒಮ್ಮೊಮ್ಮೆ ಚಿಕನ್​​ನಲ್ಲಿ ರಕ್ತ ಕೂಡ ಹಾಗೇ ಇರ್ತಿತ್ತು. ನಾವು ತುಂಬಾ ಹಸಿದುಕೊಂಡಿರ್ತಿದ್ವಿ. ಹೀಗಾಗಿ ಅದೇ ಮಾಂಸವನ್ನು ತಿಂದು ಬಿಡ್ತಿದ್ವಿ. ಅದಾದ್ಮಲೆ ವಿವಿಧ ರೀತಿಯ ಕಾಯಿಲೆಗಳು ಕೂಡ ಬರ್ತಿದ್ವು ಅಂತ ಹೇಳಿದ್ದಾನೆ. ಅಲ್ಲದೆ ಈಗಾಗಲೇ ಈ ಕ್ಯಾಂಪ್​​ನಲ್ಲಿ ನೂರಾರು ಮಕ್ಕಳಿಗೆ ಕೊರೋನಾ ಬಂದಿದ್ದು, ಅನಾರೋಗ್ಯ ಪೀಡಿತ ಮಕ್ಕಳಿಗೆ ಪ್ರತ್ಯೇಕ ಡೇರೆಗಳನ್ನು ಕೂಡಾ ನಿರ್ಮಿಸಲಾಗಿದೆ. ಅದಕ್ಕೆ ಕೋವಿಡ್ ಸಿಟಿ ಅಂತಾ ಕರೆಯಲಾಗುತ್ತೆ. ಜೊತೆಗೆ ಮಕ್ಕಳು ತುಂಬಾ ಡಿಪ್ರೆಸ್​​ಗೆ ಒಳಗಾಗಿದ್ದು, ಹಲವಾರು ಬಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಗಳು ಕೂಡ ವರದಿಯಾಗಿವೆ ಅಂತ ಸಿಬ್ಬಂದಿ ಮಾಹಿತಿ ನೀಡಿದ್ಧಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಮತ್ತೋರ್ವ ಬಾಲಕ, ನಾವು ಅಲ್ಲಿಂದ ಹೊರಗೆ ಬರ್ತೀವಿ.. ನಮ್ಮ ಕುಟುಂಬಸ್ಥರನ್ನು ಭೇಟಿಯಾಗ್ತೀವಿ ಅನ್ನೋ ನಂಬಿಕೆಯೇ ಇರಲಿಲ್ಲ. ರಾತ್ರಿ ಹೊತ್ತು ಕೆಲವೊಮ್ಮೆ ನಾವು ಜೋರಾಗಿ ಅಳ್ತಿದ್ವಿ. ನಾನು ಒಮ್ಮೊಮ್ಮೆ ಆತ್ಮಹತ್ಯೆ ಬಗ್ಗೆಯೂ ಯೋಚನೆ ಮಾಡಿದ್ದೀನಿ ಅಂತ ಹೇಳಿಕೊಂಡಿದ್ಧಾನೆ.. ಹೇಗಿರಬಹುದು ಅಲ್ವಾ.. ಅಲ್ಲಿನ ಪರಿಸ್ಥಿತಿ.

-masthmagaa.com

Contact Us for Advertisement

Leave a Reply