ಬೆಳಗಾವಿ ವಿವಾದ: ಅಮಿತ್‌ ಶಾ ಭೇಟಿಯಾದ ಮಹರಾಷ್ಟ್ರ ನಾಯಕರು! ರಾಜ್ಯದ ಸಂಸದರಿಂದ ದಿವ್ಯ ಮೌನ!

masthmagaa.com:

ಬೆಳಗಾವಿ ಗಡಿ ವಿವಾದ ಸದ್ಯಕ್ಕೆ ತಣ್ಣಗಾಗೋ ಲಕ್ಷಣ ಕಾಣಿಸ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಡಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ ಅಂತ ನಿನ್ನೆಯಷ್ಟೇ ಹೇಳಿಕೆ ನೀಡಿದ್ದಾರೆ. ಇದ್ರ ಮಧ್ಯೆ ಕೂಡ ಅತ್ತ ಮಹಾರಾಷ್ಟ್ರ ನಾಯಕರು ಬೆಳಗಾವಿ ವಿಚಾರವಾಗಿ ಮತ್ತೆ ಕ್ಯಾತೆ ತೆಗೆದಿದ್ದಾರೆ. ಲೋಕಸಭೆಯಲ್ಲಿ ಕರ್ನಾಟಕ ವಿರುದ್ದ ನಾಲಿಗೆ ಹರಿಬಿಟ್ಟಿದ್ದ ಎನ್‌ಸಿಪಿ ಸಂಸದೆ ಸುಪ್ರೀಯಾ ಸೂಲೆ ಸೇರಿ ಮಹಾರಾಷ್ಟ್ರದ ರಾಜಕಾರಣಿಗಳ ನಿಯೋಗ ಒಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನ ಭೇಟಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ‌ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವುದಾಗಿ ಅಮಿತ್​ ಶಾ ಹೇಳಿದ್ದಾರೆ. ಗಡಿ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಒತ್ತಾಯವಾಗಿತ್ತು. ಈ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಅವರಿಗೆ ಒತ್ತಾಯಿಸುತ್ತೇವೆ ಅಂತ ಹೇಳಿದಾರೆ. ಇತ್ತ ಗಡಿ ವಿಚಾರವಾಗಿ ಒಂದೇ ಸಮನೇ ವಾಗ್ದಾಳಿ ಮಾಡ್ತಿರೋ ಶಿವಸೇನೆ ನಾಯಕ ಉದ್ದವ್‌ ಠಾಕ್ರೆ, ಬಿಜೆಪಿ, ಮುಂಬರುವ ಕರ್ನಾಟಕ ವಿಧಾನಸಭೆಯ ಚುನಾವಣೆಯನ್ನ ಗೆಲ್ಲೋಕೆ ಮಹರಾಷ್ಟ್ರದ ಭೂಮಿಯನ್ನ ಕರ್ನಾಟಕಕ್ಕೆ ಮಾರಾಟ ಮಾಡಿದೆ ಅಂತ ಹೇಳಿದ್ದಾರೆ. ಇಷ್ಟೆಲ್ಲಾ ಬೆಳವಣಿಗಳು ಆಗ್ತಿದ್ರು ರಾಜ್ಯದ ಪರ ಯಾವೊಬ್ಬ ಸಂಸದರು ಕೂಡ ಈ ಬಗ್ಗೆ ಕೇಂದ್ರ ಮಟ್ಟದಲ್ಲಿ ತುಟಿ ಬಿಚ್ಚದೇ ದಿವ್ಯ ಮೌನ ವಹಿಸಿರೋದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅತ್ತ ಅಸ್ಸಾಂ ಮೇಘಾಲಯ ರಾಜ್ಯಗಳ ಗಡಿ ವಿವಾದಕ್ಕೆ ಸಂಬಂಧಿಸಿದ ಬದಲಾವಣೆ ಹಾಗೂ ಗಡಿ ಗುರುತಿಸುವ ಕಾರ್ಯಕ್ಕೆ ಮೇಘಾಲಯ ಹೈಕೋರ್ಟ್‌ ತಡೆ ನೀಡಿದೆ. ಮುಂದಿನ ವರ್ಷದ ಫೆಬ್ರವರಿವರೆಗೆ ಈ ತಡೆಯಾಜ್ಞೆ ಜಾರಿಯಲ್ಲಿರುತ್ತೆ. ಅಲ್ಲಿವರೆಗೂ ಗಡಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಅಂತ ಕೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply