ತಬ್ಲಿಘಿ ಜಮಾತ್ ಸ್ಫೋಟಕ ವರದಿ.. ಇದೆಲ್ಲಾ ಹೇಗಾಯ್ತು..? ಕಾರಣ ಯಾರು..?

masthmagaa.com:

ನಿಜಾಮುದ್ದಿನ್ ಮರ್ಕಝ್.. ನವದೆಹಲಿಯ ತಬ್ಲಿಘಿ ಜಮಾತ್​​​ ಮುಖ್ಯಾಲಯ.. ದಿಲ್ಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯ, ಇಬ್ಬರೂ ನಿದ್ದೆ ಮಾಡ್ತಾ ಇದ್ರು. ಹೀಗಾಗಿ ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆಯ ಹೊರತಾಗಿ ಕೂಡ ದಿಲ್ಲಿಯಲ್ಲಿ 4 ಸಾವಿರಕ್ಕೂ ಹೆಚ್ಚಿನ ಜನ ಜಮಾತ್​​​ಗಾಗಿ ಸೇರಿದರು. ಬೇಜವಾಬ್ದಾರಿತನದ ಪರಮಾವಧಿಯಾದ ಈ ಘಟನೆಯಿಂದ ಎಂಥ ದೊಡ್ಡ ಕೆಟ್ಟ ಪರಿಣಾಮ ಆಗ್ತಾ ಇದೆ ಅನ್ನೋದು ಇನ್ನಷ್ಟು ಪೂರ್ತಿ ಗೊತ್ತಾಗಬೇಕಿದೆ. ಈ ಜಮಾತ್​​​ನಲ್ಲಿ ಪಾಲ್ಗೊಂಡಿದ್ದ ಜನರ ಮೂಲಕ ಕಾಯಿಲೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಿದೆ. ತೆಲಂಗಾಣದಲ್ಲಿ ಈಗಾಗಲೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಲ್ಲಿ ಹಲವರು ಸಾವನ್ನಪ್ಪಿದ್ದಾರೆ.

ನಿಜಾಮುದ್ದಿನ್ ಏರಿಯಾದ ಆಲಮಿ ಮರ್ಕಝ್ ಕಟ್ಟಡವನ್ನು ಏಪ್ರಿಲ್ 1ರಂದು ಬೆಳಗ್ಗೆ 6 ಗಂಟೆಗೆ ಪೂರ್ತಿಯಾಗಿ ಖಾಲಿ ಮಾಡಿಸಲಾಗಿದೆ ಅಂತ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿ ಮಾಹಿತಿ ಕೊಟ್ರು. ಈ ಕಟ್ಟಡದಿಂದ 2,361 ಜನ ಹೊರಬಂದರು. ಇವರಲ್ಲಿ 617 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ದಿಲ್ಲಿ ಪೋಲಿಸರು ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನ ಸಾದ್ ಮತ್ತು ಇತರರ ವಿರುದ್ಧ ಮಹಾಮರಿ ನಿಯಂತ್ರಣ ಕಾಯ್ದೆ 1897ರ ಅನ್ವಯ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಮೌಲಾನಾ ಸಾದ್ ತಬ್ಲಿಘಿ ಜಮಾತ್​​​ನ ಅಮೀರ್ ಅಥವಾ ಮುಖ್ಯಸ್ಥ. ಇವರ 2 ಆಡಿಯೋ ವೈರಲ್ ಆಗಿದೆ. ಇದನ್ನು ಸೂಕ್ಷ್ಮವಾಗಿ ಕೇಳಿದಾಗ ಎಂಥವರಿಗೆ ಆದ್ರೂ ಈತನ ಮಾತಿನಲ್ಲಿ ಯಾವುದೇ ಧಾರ್ಮಿಕ ಅಥವಾ ವೈಜ್ಞಾನಿಕ ಅಂಶ ಇಲ್ಲ. ಕೇವಲ ತನ್ನ ಅನುಯಾಯಿಗಳನ್ನು ದಾರಿತಪ್ಪಿಸುವ ಹಾಗೂ ಪ್ರಾಣಾಪಾಯಕ್ಕೆ ದೂಡುವ ಸಂಗತಿಗಳಿವೆ ಅನ್ನೋದು ಗೊತ್ತಾಗುತ್ತೆ.

ಆಡಿಯೋದಲ್ಲಿ ಏನಿದೆ ಗೊತ್ತಾ..? 

ಯಾವುದೇ ರೀತಿಯ ಸಮಸ್ಯೆ ಆದರೂ ನೀವು ಮಸೀದಿಗಳತ್ತ ಓಡಬೇಕು. ಮಸೀದಿಗಳಲ್ಲಿ ಜನ ಸೇರಿಕೊಂಡರೆ ಕಾಯಿಲೆ ಹರಡುತ್ತದೆ ಅನ್ನೋದು ತಪ್ಪು. ಒಂದು ವೇಳೆ ಮಸೀದಿಗಳಲ್ಲಿ ಪ್ರಾಣ ಹೋಗುತ್ತದೆ ಎಂದರೆ, ಜೀವ ಬಿಡಲು ಇದಕ್ಕಿಂತ ಒಳ್ಳೆಯ ಮಾರ್ಗ ಬೇರೆ ಯಾವುದೂ ಇರಲು ಸಾಧ್ಯವಿಲ್ಲ. ಕಾಯಿಲೆಗೆ ಹೆದರಿ ಮಸೀದಿಗೆ ಹೋಗುವುದನ್ನು ನಿಲ್ಲಿಸಬೇಡಿ. ಇದು ಅಲ್ಲಾಹುವಿಗೆ ವಿರುದ್ಧ. – ಮೌಲಾನಾ ಸಾದ್​​

ಇಲ್ಲಿ ಮೌಲಾನ ಸಾದ್ ನೂರಾರು ಅಮಾಯಕ ಮುಸ್ಲಿಮರ ಪ್ರಾಣಕ್ಕೆ ಕಂಟಕವಾಗುವ ರೀತಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಎಲ್ಲರೂ ಇಲ್ಲಿ ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಬೇಕು. ಸಾಯಲು ಯಾವುದೇ ಜಾಗ ಯೋಗ್ಯವಲ್ಲ. ಯಾರಿಗೂ ಎಲ್ಲೂ ಸಾಯಲು ಇಷ್ಟವಿರುವುದಿಲ್ಲ. ಅದು ಆಸ್ಪತ್ರೆಯಲ್ಲಾಗಲಿ ಅಥವಾ ಮಸೀದಿಯಲ್ಲಾಗಲಿ ಅಥವಾ ದೇವಸ್ಥಾನದಲ್ಲಾಗಲಿ… ಎಲ್ಲರೂ ಬದುಕು ಬೇಕು. ಧರ್ಮಗುರುಗಳಿಗೆ ಹೇಳೋದು ಬಹಳ ಸುಲಭದ ಕೆಲಸ. ಆದರೆ ಯಾವುದೇ ಧರ್ಮದಲ್ಲಿ ಯಾವುದೇ ವ್ಯಕ್ತಿಗೆ ಸಾಯಲು ಜಾಗ ಅಂತ ಇರುವುದಿಲ್ಲ. ಇಡೀ ಪ್ರಪಂಚವನ್ನು ಈ ಕಾಯಿಲೆ, ಈ ಮಹಾಮಾರಿ ಆವರಿಸಿರುವ ಸಂದರ್ಭದಲ್ಲಿ ಮೌಲಾನ ಸಾದ್ ತಬ್ಲಿಘಿ ಜಮಾತ್ ಕಾರ್ಯಕ್ರಮ ಮುಗಿದ ಬಳಿಕವೂ ಮಸೀದಿಯಲ್ಲೇ ಸಾವಿರಾರು ಜನರನ್ನು ಸೇರಿಸಿ ಇಟ್ಟುಕೊಂಡಿದ್ದು, ಲಾಕ್ ಡೌನ್ ಉಲ್ಲಂಘಿಸಿದ್ದು ಅಕ್ಷಮ್ಯ ಅಪರಾಧ.

ಸದ್ಯ ದೇಶವ್ಯಾಪಿ ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳನ್ನು ಹುಡುಕಲು, ಟ್ರೇಸ್ ಮಾಡಲು ಕಾರ್ಯಾಚರಣೆ ಆರಂಭವಾಗಿದೆ. ಇವರನ್ನು ಹುಡುಕಿ ಕೇಸ್ ಹಾಕಲು ಅಲ್ಲ. ಬದಲಾಗಿ ಇವರನ್ನು ಹುಡುಕಿ ಅವರ ಆರೋಗ್ಯದ ತಪಾಸಣೆ ಮಾಡಿ ಒಂದುವೇಳೆ ಕಾಯಿಲೆ ಇದ್ದರೆ ಅವರಿಗೆ ಚಿಕಿತ್ಸೆ ಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ಉತ್ತರಪ್ರದೇಶದ ಬಿಜ್ನೋರ್​ನಲ್ಲಿ ಇಂಡೋನೇಷ್ಯಾದಿಂದ ಈ ಜಮಾತ್​​​ನಲ್ಲಿ ಪಾಲ್ಗೊಳ್ಳಲು ಬಂದಿದ್ದ ಐವರನ್ನ ಬಚ್ಚಿಡಲಾಗಿತ್ತು. ಈಗ ಬಚ್ಚಿಟ್ಟವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸ್ನೇಹಿತರೇ, ಈ ವಿಚಾರವನ್ನು ನಮ್ಮ ಸರ್ಕಾರಗಳು ಮೊದಲೇ ನಿಭಾಯಿಸಬಹುದಿತ್ತು. ತೆಲಂಗಾಣದಲ್ಲಿ ಸೋಂಕು ಪತ್ತೆಯಾದ ವ್ಯಕ್ತಿಗಳು ದಿಲ್ಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಅಂತ ಗೊತ್ತಾಯ್ತು. ಆಗ ಕೂಡಲೇ ಕೇಂದ್ರ ಗೃಹ ಸಚಿವಾಲಯ ಮಾರ್ಚ್ 21ರಂದು ದೇಶದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಿತು. ಇದರಲ್ಲಿ ಪ್ರಮುಖವಾಗಿ ತಬ್ಲಿಘಿ ಜಮಾತ್​ನ 824 ವಿದೇಶಿ ಸದಸ್ಯರನ್ನು ಕೂಡಲೇ ಪತ್ತೆ ಹಚ್ಚುವಂತೆ ಸೂಚಿಸಲಾಗಿತ್ತು. ಕೂಡಲೇ ಪತ್ತೆಹಚ್ಚಿ, ಪ್ರತ್ಯೇಕವಾಗಿ ಇಟ್ಟು, ಸಾಧ್ಯವಾದರೆ ವಾಪಸ್ ಕಳುಹಿಸುವಂತೆ ಎಚ್ಚರಿಕೆ ಕೊಡಲಾಗಿತ್ತು. ಈಗ ರಾಜ್ಯಗಳು ಉತ್ತರ ಕೊಡಬೇಕು, ಮಾರ್ಚ್ 21ಕ್ಕೆ ಬಂದಿದ್ದ ಈ ಪತ್ರವನ್ನ ಎಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ ಅಂತ.

ನಂತರ ಮಾರ್ಚ್ 28ರಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಮತ್ತೊಂದು ಪತ್ರವನ್ನು ಬರೆಯಿತು. ಇದರಲ್ಲಿ ಹತ್ತಿರ ಹತ್ತಿರ 2 ಸಾವಿರದಷ್ಟು ತಬ್ಲಿಘಿ ಜಮಾತ್ ವಿದೇಶಿ ಸದಸ್ಯರು ಟೂರಿಸ್ಟ್ ವೀಸಾದಲ್ಲಿ ಭಾರತದಲ್ಲಿ ಓಡಾಡುತ್ತಿದ್ದಾರೆ ಅಂತ ತಿಳಿದು ಬಂತು. ಬಾಂಗ್ಲಾದೇಶ, ಮಲೇಷ್ಯಾ, ಇಂಡೋನೇಷ್ಯಾ ಹಾಗೂ ಸಿಂಗಾಪುರ್​​ನಿಂದ ಇವರು ಬಂದಿದ್ದು ಅವರಿಂದ ಮಹಾಮಾರಿ ಹರಡುವ ಆತಂಕವಿದೆ. ಕೂಡಲೇ ಇವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಅಂತ ಸೂಚಿಸಲಾಗಿತ್ತು. ಜೊತೆಗೆ ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವನ್ನು ಉಲ್ಲೇಖಿಸಲಾಗಿತ್ತು. ಮಲೇಷ್ಯಾದಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರಲ್ಲಿ ಭಾರಿ ಪ್ರಮಾಣದಲ್ಲಿ ಈ ಕಾಯಿಲೆ ಪತ್ತೆಯಾಗಿತ್ತು. ಈಗ ಮಲೇಷ್ಯಾದಿಂದ ಭಾರತಕ್ಕೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜನ ಬಂದಿದ್ದರು. ಹಾಗಾಗಿ ಕೂಡಲೇ ಇವರ ಆರೋಗ್ಯ ತಪಾಸಣೆ ಆಗಲೇಬೇಕು ಅಂತ ಕೇಂದ್ರ ಸರ್ಕಾರ ಹೇಳಿತ್ತು. ಯಾಕಂದ್ರೆ ಮಲೇಷ್ಯಾದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾರತದವರೂ ಪಾಲ್ಗೊಂಡಿದ್ದರು. ಭಾರತದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಮಲೇಷ್ಯಾದವರೂ ಪಾಲ್ಗೊಂಡಿದ್ದರು.

ಸ್ನೇಹಿತರೇ, ಜನತಾ ಕರ್ಫ್ಯೂಗಿಂತ ಒಂದು ದಿನ ಮೊದಲು ಅಂದ್ರೆ ಮಾರ್ಚ್ 21ರಂದು ಜಮ್ಮು-ಕಾಶ್ಮೀರ ಸರ್ಕಾರ, ಕೇಂದ್ರ ಆರೋಗ್ಯ ಇಲಾಖೆಗೆ ಒಂದು ತುರ್ತು ಸಂದೇಶವನ್ನು ರವಾನಿಸಿತ್ತು. ಅದರಲ್ಲಿ 65 ವರ್ಷದ ಓರ್ವ ಕಾಯಿಲೆ ಪೀಡಿತ ವ್ಯಕ್ತಿಯ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಈ ವ್ಯಕ್ತಿ ಫೆಬ್ರವರಿ 15ರಿಂದ ಅಂಡಮಾನ್ ನಿಕೋಬಾರ್, ದೆಹಲಿ,  ಉತ್ತರ ಪ್ರದೇಶದ ದೇವಬಂದ್ ಹಾಗೂ ಜಮ್ಮು-ಕಾಶ್ಮೀರದ ತನಕವೂ ಓಡಾಡಿದ್ದರು. ಇವರಿಗೆ ಮಲೇಷ್ಯಾ ಅಥವಾ ಇಂಡೋನೇಷ್ಯಾದ ಬಂದಿದ್ದ ತಬ್ಲಿಘಿ ಸದಸ್ಯರಿಂದ ಕೊರೋನಾ ಬಂದಿರಬಹುದು ಅನ್ನುವ ಆತಂಕವನ್ನು ವ್ಯಕ್ತಪಡಿಸಲಾಗಿತ್ತು. ಯಾಕಂದ್ರೆ ಈ ವ್ಯಕ್ತಿ ದೆಹಲಿಯ ತಬ್ಲಿಘಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಬ್ಲಿಘಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಈ ವ್ಯಕ್ತಿ ಬರೋಬ್ಬರಿ 15 ಸಾವಿರ ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಬಸ್ಸು, ರೈಲು ಹಾಗೂ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಎಲ್ಲಾ ಬಿಡಿ, ಸ್ವತಃ ಈ ಪರ್ಟಿಕ್ಯುಲರ್ ವ್ಯಕ್ತಿಯ ಕುಟುಂಬದ 8 ಮಂದಿ ಸದಸ್ಯರು ಈ ಸೋಂಕಿಗೆ ಒಳಗಾಗಿದ್ದರು. ಅಷ್ಟು ಮಾತ್ರ ಅಲ್ಲ.. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಈ ವ್ಯಕ್ತಿಗೆ ಚಿಕಿತ್ಸೆ ನೀಡಿದ 14 ವೈದ್ಯಕೀಯ ಸಿಬ್ಬಂದಿಯನ್ನ ಈಗ ಪ್ರತ್ಯೇಕವಾಗಿಟ್ಟು ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇದು ಜಮಾತ್​​ನಲ್ಲಿ ಪಾಲ್ಗೊಂಡಿದ್ದ ಒಬ್ಬ ವ್ಯಕ್ತಿ ಮತ್ತು ಆತನಿಂದ ಕಾಯಿಲೆ ಹರಡಿರುವ ಮಾಹಿತಿ.

ಈ ವ್ಯಕ್ತಿಯ ರೀತಿ ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಇದುವರೆಗೂ 300ಕ್ಕೂ ಅಧಿಕ ಜನರಿಗೆ ಕಾಯಿಲೆ ತಗುಲಿರುವುದು ದೃಢಪಟ್ಟಿದೆ. ಈ 300 ಜನರಿಂದ ಇನ್ನು ಎಷ್ಟು ಜನಕ್ಕೆ ಈ ರೀತಿ ಹರಡಿದೆಯೋ ಆ ಭಗವಂತನೇ ಬಲ್ಲ. ಇದೆಲ್ಲದಕ್ಕೂ ಜವಾಬ್ದಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಸಾಮಾನ್ಯ ಜನ ಅಲ್ಲ. ಇವರೆಲ್ಲ ಧರ್ಮದ ಅನುಯಾಯಿಗಳು ಅಷ್ಟೇ. ಇಲ್ಲಿ ಹೊಣೆಗಾರರನ್ನಾಗಿ ಮಾಡಬೇಕಾಗಿರುವುದು ಇದರ ಆಯೋಜಕರನ್ನು. ಇಡೀ ಜಗತ್ತಿನಲ್ಲಿ ಮಹಾಮಾರಿ ಹರಡಿ ದಿನವೂ ಸಾವಿರಾರು ಜನರ ಹೆಣ ಬೀಳುತ್ತಿರುವ ಸಂದರ್ಭದಲ್ಲಿ ಲಾಕ್​​​ಡೌನ್ ನಿಯಮ ಉಲ್ಲಂಘಿಸಿ ಒಂದೇ ಕಟ್ಟಡದೊಳಗೆ ಸಾವಿರಾರು ಜನರನ್ನು ತುಂಬಿಟ್ಟುಕೊಂಡಿದ್ದು ಮಹಾ ಅಪರಾಧ. ಅಲ್ಲಿ ಒಬ್ಬೊಬ್ಬರೇ ಕಾಯಿಲೆ ಬೀಳುತ್ತಿದ್ದರೂ ಸರ್ಕಾರಕ್ಕೆ ಅಷ್ಟೊಂದು ಜನ ಸೇರಿರುವುದರ ಬಗ್ಗೆ ಮಾಹಿತಿ ಕೊಡದಿರುವುದು ಮತ್ತೂ ಅಕ್ಷಮ್ಯ ಅಪರಾಧ. ಈ ತಪ್ಪಿಗೆ ಮೌಲಾನ ಸಾದ್ ಮತ್ತು ಇತರರ ವಿರುದ್ಧ ಕಠಿಣ ಕ್ರಮ ಆಗಬೇಕು. ಆದ್ರೆ ಇಡೀ ಪ್ರಕರಣಕ್ಕೆ ಧರ್ಮದ ಬಣ್ಣ ಕಟ್ಟುವುದು ಸರಿಯಲ್ಲ. ಒಂದು ಇಡೀ ಸಮುದಾಯವನ್ನು ಅಪರಾಧಿಯಂತೆ ನೋಡುವುದು ಅಮಾನವೀಯ. ಈ ವೈರಾಣುವಿಗೆ ಧರ್ಮದ ಬಣ್ಣ ಬಳಿಯುವ ಸಮಯ ಅಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡದೆ ಧರ್ಮ ಧರ್ಮ ಅಂತ ಬಡಿದಾಡುತ್ತಿದ್ದರೆ ಈ ವೈರಾಣು ಸದ್ದೇ ಇಲ್ಲದೆ ನಮ್ಮೆಲ್ಲರನ್ನು ಮುಗಿಸಿಬಿಡುತ್ತದೆ. ಎಚ್ಚರ…

-masthmagaa.com

Contact Us for Advertisement

Leave a Reply