ತಾಲಿಬಾನಿಗಳೇ ದಂಗು..! ಅಫ್ಘಾನಿಸ್ತಾನದ ಕಂಪ್ಲೀಟ್ ರಿಪೋರ್ಟ್​​

masthmagaa.com:

ಯುದ್ಧ ಗೆದ್ದು ಬೀಗುತ್ತಿರೋ ತಾಲಿಬಾನಿಗಳ ಎದೆ ನಡುಗುವಂತ ದೊಡ್ಡ ಬೆಳವಣಿಗೆಯಾಗಿದೆ. ತಾಲಿಬಾನಿಗಳು ಗೆದ್ದಾಯ್ತು. ಇನ್ಮೇಲೆ ಅವರನ್ನ ಹಿಡಿಯೋರೆ ಇಲ್ಲ. ತಾಲಿಬಾನ್ ಪಾಲಿಗೆ ಇನ್ಮುಂದೆ ಸ್ವರ್ಗದಂಥಾ ಜೀವನ ಅಂತ ತುಂಬಾ ಜನ ಅನ್ಕೊಂಡಿರಬೋದು. ಆದ್ರೆ ಅಷ್ಟು ಈಸಿ ಇಲ್ಲ ಅಫ್ಘಾನಿಸ್ತಾನ. ಇಂತಾ ಅನೇಕ ಕ್ಷಿಪ್ರಕ್ರಾಂತಿಗಳನ್ನ ಅಫ್ಘಾನಿಸ್ತಾನ ನೋಡಿದೆ. ಮತ್ತೆ ಕೆಲವೇ ದಿನಗಳಲ್ಲಿ ಇನ್ಯಾವುದೋ ಒಂದು ಗುಂಪು ಬಂದು ಅವರನ್ನ ಕಿತ್ತು ಬಿಸಾಕಿರೋದನ್ನ ಕೂಡ ನೋಡಿದೆ. ಸೋ ತಾಲಿಬಾನಿಗಳಿಗೂ ಲೈಫ್ ಬಾಳ ಈಸಿ ಅಂತೇನೂ ಇಲ್ಲ. ಅದಕ್ಕೆ ಸಾಕ್ಷಿಯಾಗಿ ಈಗ ಒಂದು ಘಟನೆ ನಡೆದಿದೆ. ಪಾಕ್​ ಗಡಿಗೆ ಹತ್ತಿರದಲ್ಲಿರೋ ಜಲಾಲಾಬಾದ್​​ನಲ್ಲಿ ತಾಲಿಬಾನಿಗಳು ಮತ್ತು ಸ್ಥಳೀಯರ ಮಧ್ಯೆ ಸಂಘರ್ಷ ನಡೆದಿದೆ. ಅಂದ್ಹಾಗೆ ಜಲಾಲಾಬಾದ್​​ನಲ್ಲಿ ತಾಲಿಬಾನಿಗಳು ಅಫ್ಘನಿಸ್ತಾನದ ರಾಷ್ಟ್ರಧ್ವಜವನ್ನ ತೆಗೆದು ಅಲ್ಲಿ ತಾಲಿಬಾನಿಗಳ ಧ್ವಜವನ್ನ ಹಾರಿಸಿದ್ದರು. ಇದರಿಂದ ರೊಚ್ಚಿಗೆದ್ದ ನೂರಾರು ಜನ ರಾಷ್ಟ್ರಧ್ವಜವನ್ನ ಹಿಡಿದು ರಸ್ತೆಗೆ ಇಳಿದಿದ್ಧಾರೆ. ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ ತಾಲಿಬಾನಿಗಳು ಹಾಕಿದ್ದ ಧ್ವಜವನ್ನ ತೆಗೆದು ಮತ್ತೆ ಅಫ್ಘನಿಸ್ತಾನ ಧ್ವಜವನ್ನ ನೆಟ್ಟಿದ್ದಾರೆ. ಈ ವೇಳೆ ಸ್ಥಳೀಯರು ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆದಿದೆ. ತಾಲಿಬಾನಿಗಳು ಹಾರಿಸಿದ ಗುಂಡಿಗೆ ಮೂವರು ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಕನಿಷ್ಠ 12 ಜನ ಗಾಯಗೊಂಡಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಲಾಲಾಬಾದ್​ ಮಾತ್ರವಲ್ಲ ಅಫ್ಘನಿಸ್ತಾನದ ಕೆಲವೊಂದುಕಡೆ ಇಂಥಾ ಘಟನೆ ನಡೆದಿದೆ ಅಂತ ವರದಿಯಾಗಿದೆ. ಇತ್ತೀಚೆಗೆ ರಾಜಧಾನಿ ಕಾಬೂಲ್​ನಲ್ಲೂ ತಾಲಿಬಾನಿಗಳು ಹೀಗೆ ರಾಷ್ಟ್ರಧ್ವಜ ತೆಗೆದು ತಮ್ಮ ಧ್ವಜವನ್ನ ಹಾರಿಸಿದ್ದರು. ಇದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಒಂದ್ಕಡೆ ತಾಲಿಬಾನಿಗಳಿಗೆ ಹೆದರಿ ಕೆಲವರು ದೇಶಬಿಟ್ಟು ಹೋಗೋಕೆ ಪ್ರಯತ್ನ ಪಡ್ತಿದ್ರೆ, ಇನ್ನೂ ಕೆಲವರು ತಾಲಿಬಾನಿಗಳನ್ನೇ ಎದುರು ಹಾಕಿಕೊಂಡಿದ್ದಾರೆ. ತಮ್ಮಲ್ಲಿ ರಾಷ್ಟ್ರ ಧ್ವಜದ ಪರ ಇನ್ನೂ ಗೌರವವಿದೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ಅಫ್ಘನಿಸ್ತಾನದಿಂದ ಹೊರ ಬರೋಕೆ ಈಗಿರೋ ಏಕೈಕ ಮಾರ್ಗ ಅಂದ್ರೆ ಅದು ಕಾಬೂಲ್ ಏರ್​ಪೋರ್ಟ್​. ಇಲ್ಲಿಗೆ ಹೋಗೋರಿಗೆ ಯಾವುದೇ ತೊಂದ್ರೆ ಕೊಡಲ್ಲ ಅಂತ ತಾಲಿಬಾನಿಗಳೇನೋ ಹೇಳಿದ್ದಾರೆ. ಅಮೆರಿಕ ಕೂಡ ಕಾಬೂಲ್​ ಏರ್​ಪೋರ್ಟ್​ ಮೇಲೆ ಇನ್ನೂ ನಿಯಂತ್ರಣ ಹೊಂದಿದೆ. ಆದ್ರೆ ಕಾಬೂಲ್​​ ಏರ್​ಪೋರ್ಟ್​ಗೆ ಬರೋ ರಸ್ತೆಗಳೆಲ್ಲವೂ ತಾಲಿಬಾನ್​​ ಕಂಟ್ರೋಲ್​​ನಲ್ಲಿದೆ. ರಸ್ತೆಯುದ್ದಕ್ಕೂ ಚೆಕ್​ ಪಾಯಿಂಟ್​​ ತೆರೆದು ಅಲ್ಲಿ, ಮಹಿಳೆಯರು, ಮಕ್ಕಳಿಗೆ ತಾಲಿಬಾನಿಗಳು ಹೊಡೀತಿದ್ದಾರೆ, ಹಿಂಸಿಸುತ್ತಿದ್ಧಾರೆ ಅಂತ ವರದಿಯಾಗಿದೆ. ಚೆಕ್​ ಪಾಯಿಂಟ್​​ಗೆ ಬರೋರ ಹತ್ರ ದಾಖಲೆಗಳನ್ನ ಕೇಳಲಾಗ್ತಿದೆ, ಅವರಿಗೆ ಹೊಡೆಯಲಾಗ್ತಿದೆ, ಏರ್​ಪೋರ್ಟ್​ಗೆ ಹೋಗದಂತೆ ಒತ್ತಾಯಪೂರ್ವಕವಾಗಿ ತಡೆಯಲಾಗ್ತಿದೆ ಅಂತ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಿಂಸಾಚಾರದ ಬಗ್ಗೆ ವರದಿ ಮಾಡಿದ ಪತ್ರಕರ್ತರ ಮೇಲೂ ಹಲ್ಲೆ ನಡೆದಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್​ ಸಲ್ಲಿವಾನ್​ ಕೂಡ, ಕೆಲವೊಂದುಕಡೆ ಇಂಥಾ ಘಟನೆಗಳು ನಡೀತಿವೆ. ತಾಲಿಬಾನ್ ಜೊತೆ ಈ ಬಗ್ಗೆ ನಾವು ಮಾತಾಡ್ತೀವಿ ಅಂತ ಹೇಳಿದ್ಧಾರೆ. ಕಾಬೂಲ್​ ಏರ್​ಪೋರ್ಟ್​ನಲ್ಲಿ ಸದ್ಯ ನಾಲ್ಕೂವರೆ ಸಾವಿರ ಅಮೆರಿಕ ಯೋಧರಿದ್ದಾರೆ. ಬೇರೆ ಬೇರೆ ದೇಶದ ಯೋಧರು ಕೂಡ ಒಂದಷ್ಟು ಸಂಖ್ಯೆಯಲ್ಲಿದ್ದಾರೆ.

ಇನ್ನು ಜನ ಕಾಬೂಲ್​ ಏರ್​​ಪೋರ್ಟ್​ಗೆ ನುಗ್ಗುವಾಗ, ಏರ್​ಪೋರ್ಟ್​​ನ ಗೇಟ್​ ಬಳಿ ಕಾಲ್ತುಳಿತ ಉಂಟಾಗಿ. ಇದರಲ್ಲಿ ಕನಿಷ್ಠ 17 ಜನ ಗಾಯಗೊಂಡಿದ್ಧಾರೆ ಅಂತ ನ್ಯಾಟೋ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಸೋಮವಾರದಿಂದ ಇಲ್ಲಿವರೆಗೆ 40 ಮಂದಿ ಬೇರೆ ಬೇರೆ ದೇಶ ಸೇನೆ ಹಾರಿಸಿದ ಗುಂಡು ಮತ್ತು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ ಅಂತ ತಾಲಿಬಾನ್ ಕಮಾಂಡರೊಬ್ರು ಹೇಳಿದ್ದಾರೆ.

ತಾಲಿಬಾನಿ ಕಮಾಂಡರ್​​​ ಮತ್ತು ಹಕ್ಕಾನಿ ನೆಟ್ವರ್ಕ್​ ಉಗ್ರರ ಗುಂಪಿನ ನಾಯಕ ಅನಸ್ ಹಕ್ಕಾನಿ ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಖರ್ಝೈ ಜೊತೆ ಮಾತುಕತೆ ನಡೆಸಿದ್ದಾರೆ. ಖರ್ಝೈ ಜೊತೆ ಈ ಹಿಂದಿನ ಸರ್ಕಾದ ಶಾಂತಿ ಪ್ರತಿನಿಧಿ ಅಬ್ದುಲ್ಲಾ ಅಬ್ದುಲ್ಲಾ ಕೂಡ ಇದ್ರು. ಈ ಮಹತ್ವದ ಭೇಟಿಯಲ್ಲಿ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆದಿದೆ. ಅಂದಹಾಗೆ ಈ ಹಕ್ಕಾನಿ ನೆಟ್ವರ್ಕ್​ ತಾಲಿಬಾನ್​ನ ಒಂದು ಗುಂಪು.. ಕಾಬೂಲ್ ವಶಕ್ಕೆ ಪಡೆಯುವಲ್ಲಿ ಈ ಗುಂಪು ಪ್ರಮುಖ ಪಾತ್ರ ವಹಿಸಿತ್ತು. ಪಾಕ್ ಗಡಿ ಭಾಗದಲ್ಲಿ ಪ್ರಮುಖ ಕೇಂದ್ರ ಹೊಂದಿರೋ ಈ ಗುಂಪು ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲೂ ಪ್ರಮುಖ ಪಾತ್ರ ವಹಿಸಿತ್ತು.

ಅಫ್ಘನಿಸ್ತಾನ ಸರ್ಕಾರ ತಾಲಿಬಾನ್​ಗೆ ಎಷ್ಟು ಈಸಿಯಾಗಿ ಶರಣಾಯ್ತಲಾ ಅಂತ ಅಂದುಕೊಳ್ಳುತ್ತಿರುವಾಗಲೇ ತಜಕಿಸ್ತಾನದ ದುಶಾಂಬೆಯಲ್ಲಿರೋ ಅಫ್ಘನ್​ ರಾಯಭಾರ ಕಚೇರಿಯಲ್ಲಿ ಅಶ್ರಫ್ ಘನಿ ಫೋಟೋವನ್ನ ತೆಗೆದು ಆ ಜಾಗಕ್ಕೆ ಉಪಾಧ್ಯಕ್ಷ ಅಮರುಲ್ಲಾ ಸಲೇ ಅವರ ಫೋಟೋವನ್ನ ಫಿಕ್ಸ್ ಮಾಡಲಾಗಿದೆ. ಅಶ್ರಫ್ ಘನಿ ದೇಶಬಿಟ್ಟು ಓಡಿಹೋದ ಪರಿಣಾಮ ಸಂವಿಧಾನದ ಪ್ರಕಾರ ನಾನೇ ಕೇರ್​ಟೇಕರ್ ಅಧ್ಯಕ್ಷ ಅಂತ ಅಮರುಲ್ಲಾ ಸಲೇ ಘೋಷಿಸಿಕೊಂಡಿದ್ದಾರೆ. ಹೀಗಾಗಿ ಅವರ ಫೋಟೋವನ್ನೇ ತಜಕಿಸ್ತಾನದ ಅಫ್ಘನ್ ರಾಯಭಾರ ಕಚೇರಿಯಲ್ಲೀಗ ಹಾಕಲಾಗಿದೆ.

ಕಾಬೂಲ್​ನಿಂದ ವಿಮಾನವೇರಿ ಹೋಗಿದ್ದ ಅಶ್ರಫ್ ಘನಿ ಮತ್ತು ಅವರ ಕುಟುಂಬಸ್ಥರು ಈಗ ಯುನೈಟೆಡ್​ ಅರಬ್ ಎಮಿರೇಟ್ಸ್ – ಯುಎಇನಲ್ಲಿ ಇದ್ದಾರೆ ಅಂತ ಗೊತ್ತಾಗಿದೆ. ಪ್ರೆಸಿಡೆಂಟ್​ ಅಶ್ರಫ್​ ಘನಿ ಮತ್ತು ಅವರ ಕುಟುಂಬವನ್ನ ಮಾನವೀಯ ನೆಲೆಯಲ್ಲಿ ಯುಎಇ ಸ್ವಾಗತ ಮಾಡಿದೆ ಅಂತ ಯುಎಇನ ವಿದೇಶಾಂಗ ಇಲಾಖೆ ಹೇಳಿದೆ.

ಅಫ್ಘನಿಸ್ತಾನದ ರಾಷ್ಟ್ರೀಯ ಬ್ಯಾಂಕ್ ಆದ ‘ಡ ಅಫ್ಘನಿಸ್ತಾನ್​ ಬ್ಯಾಂಕ್​ ಅಥವಾ ಶಾರ್ಟಾಗಿ DABಗೆ ಸೇರಿದ 9.5 ಬಿಲಿಯನ್ ಡಾಲರ್ ಆಸ್ತಿಯನ್ನ ಅಮೆರಿಕ ಫ್ರೀಜ್ ಮಾಡಿದೆ. 9.5 ಬಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 74 ಸಾವಿರ ಕೋಟಿ ರೂಪಾಯಿ ಆಗುತ್ತೆ. ಇಷ್ಟು ದೊಡ್ಡ ಮೊತ್ತದ ದುಡ್ಡು ತಾಲಿಬಾನಿಗಳ ಕೈಗೆ ಸಿಗದಂತೆ ಮಾಡಿದೆ ಅಮೆರಿಕದ ಬೈಡೆನ್ ಸರ್ಕಾರ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿರೋ DABಯ ಆ್ಯಕ್ಟಿಂಗ್ ಗವರ್ನರ್​ ಅಜ್ಮಲ್ ಅಹ್ಮದಿ, DABಗೆ ಸೇರಿದ 9.5 ಬಿಲಿಯನ್ ಡಾಲರ್ ಆಸ್ತಿ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್​ ರಿಸರ್ವ್ ಸಿಸ್ಟಂನಲ್ಲಿದೆ. ಇದರಲ್ಲಿ ನಗದು, ಚಿನ್ನ, ಯುಎಸ್​ ಬಾಂಡ್ಸ್​ ಮತ್ತು ಇತರೆ ಪೇಪರ್​ಗಳ ಮೌಲ್ಯ ಸೇರಿದ್ರೆ 7 ಬಿಲಿಯನ್​ ಡಾಲರ್​ ಆಗುತ್ತೆ. ಉಳಿದವು ಅಂತಾರಾಷ್ಟ್ರೀಯ ಅಕೌಂಟ್​​ ಸೇರಿದಂತೆ ಬೇರೆ ಬೇರೆ ರೂಪದಲ್ಲಿ. ಆದ್ರೆ ಅಮೆರಿಕದಲ್ಲಿ ಅಫ್ಘನಿಸ್ತಾನ ಸರ್ಕಾರ ಹೊಂದಿರೋ ಸೆಂಟ್ರಲ್ ಬ್ಯಾಂಕ್​​ನ ಯಾವುದೇ ಆಸ್ತಿ ತಾಲಿಬಾನಿಗಳಿಗೆ ಸಿಗಲ್ಲ. ತಾಲಿಬಾನಿಗಳ ಮೇಲೆ ಅಮೆರಿಕ ಸ್ಯಾಂಕ್ಷನ್ಸ್ ಹೇರಿರೋದ್ರಿಂದ ಈ ದುಡ್ಡು ಟ್ರೆಸರಿ ಡಿಪಾರ್ಟ್​ಮೆಂಟ್​​ನ ಸ್ಯಾಂಕ್ಷನ್ಸ್ ಡೆಸಿಗ್ನೇಷನ್​ ಲಿಸ್ಟ್​ನಲ್ಲೇ ಉಳಿಯಲಿದೆ ಅಂತ ಹೇಳಿದ್ಧಾರೆ. ಅಜ್ಮಲ್ ಅಹ್ಮದಿ ಕಾಬೂಲ್​​ನಿಂದ ವಿದೇಶಕ್ಕೆ ಹಾರಿದ ಬಳಿಕವೇ ಈ ಮಾಹಿತಿ ನೀಡಿದ್ಧಾರೆ. ಆದ್ರೆ ಈ ದುಡ್ಡಿನ ಬಗ್ಗೆ ಯುಎಸ್​ ಟ್ರೆಸರಿ ಡಿಪಾರ್ಟ್​ಮೆಂಟ್​ ಇನ್ನೂ ಏನನ್ನೂ ಹೇಳಿಲ್ಲ.

ತಾಲಿಬಾನಿಗಳು ತಮ್ಮ ಪುಂಡಾಟ ಮತ್ತೆ ಶುರು ಮಾಡ್ಕೊಂಡಿದ್ಧಾರೆ. ಬಮಿಯನ್​ ಪ್ರದೇಶದಲ್ಲಿ ಹಜಾರಾ ಸಮುದಾಯದ ಶಿಯಾ ನಾಯಕ ಅಬ್ದುಲ್ ಅಲಿ ಮಜರಿಯ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಅಬ್ದುಲ್ ಅಲಿ ಮಜರಿಯನ್ನು 1995ರಲ್ಲಿ ಇದೇ ತಾಲಿಬಾನಿಗಳು ಗಲ್ಲಿಗೇರಿಸಿದ್ರು. ಅಂದಹಾಗೆ ಈ ಹಜಾರಾ ಅಂದ್ರೆ ಶಿಯಾ ಪಂಗಡದ ಒಂದು ಬುಡಕಟ್ಟು ಸಮುದಾಯ. ಇವರಲ್ಲಿ ಬಹುತೇಕರು ಮುಸ್ಲಿಮರು. ಆದ್ರೆ ಮುಸ್ಲಿಮರ ಒಳಗಿನ ಇತರೆ ಪಂಗಡಗಳು ಇವರನ್ನು ಮುಸ್ಲಿಮರು ಅಂತ ಒಪ್ಪಿಕೊಳ್ಳೋದಿಲ್ಲ. ಮತ್ತು ಅತ್ಯಂತ ಕೀಳು ಅಂತ ಭಾವಿಸ್ತಾರೆ. ಅಫ್ಘಾನಿಸ್ತಾನದ 3ನೇ ಅತಿದೊಡ್ಡ ಸಮುದಾಯ ಇದಾಗಿದ್ದು, ಗುಡ್ಡಗಾಡುಗಳಿಂದ ಕೂಡಿದ ಹಜಾರಾಜತ್​​​​ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಾಲಿಬಾನಿಗಳಿಂದ ಹೆದರಿಕೊಂಡಿರೋ ಮತ್ತೊಂದು ಸಮುದಾಯ ಇದಾಗಿದೆ. ಇನ್ನು ಈ ಹಿಂದೆ 2001ರಲ್ಲಿ ಇದೇ ಬಮಿಯನ್ ಪ್ರದೇಶದಲ್ಲಿ ತಾಲಿಬಾನಿಗಳು ಇತಿಹಾಸ ಪ್ರಸಿದ್ಧ 2 ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ್ರು. ಇದು ಬಮಿಯನ್ ಬುದ್ಧ ಅಂತಲೇ ವಿಶ್ವಪ್ರಸಿದ್ಧವಾಗಿತ್ತು. ಅಫ್ಘಾನಿಸ್ತಾನಕ್ಕೆ ಇಸ್ಲಾಂ ಆಗಮನಕ್ಕೂ ಮುನ್ನ ಈ ಪ್ರದೇಶ ವಿವಿಧ ಸಂಸ್ಕೃತಿಗಳ ನಾಡಾಗಿತ್ತು. ಭಾರತ ಉಪಖಂಡದಲ್ಲಿ ಚಕ್ರವರ್ತಿ ಅಶೋಕ ಮತ್ತು ಮೌರ್ಯ ಸಾಮ್ರಾಜ್ಯದ ವಿಸ್ತರಣೆಯಿಂದಾಗಿ ಬೌದ್ಧ ಧರ್ಮ ಅಫ್ಘಾನಿಸ್ತಾನದವರೆಗೂ ಆವರಿಸಿತ್ತು.

ತಾಲಿಬಾನ್​​ನ ನಿಯೋಗವೊಂದು ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಮಾತುಕತೆ ನಡೆಸ್ತಿದೆ. ಈಗಾಗಲೇ ಪಾಕ್ ಪ್ರಧಾನಿ ಇಮ್ರಾನ್​ ಖಾನ್ ಮತ್ತು ಸೇನಾ ಮುಖ್ಯಸ್ಥರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಹೊಸ ಅಫ್ಘನಿಸ್ತಾನ ಸರ್ಕಾರ ಎಲ್ಲರನ್ನ ಒಳಗೊಂಡಿರಬೇಕು ಅಂತ ಪಾಕಿಸ್ತಾನ ಹೇಳ್ತಾ ಬರ್ತಿದೆ. ತಾಲಿಬಾನ್​ ಕೂಡ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರನ್ನ, ಜನಾಂಗದವರನ್ನ ಒಳಗೊಂಡ ಸರ್ಕಾರವನ್ನೇ ರಚಿಸೋದಾಗಿ ಮುನ್ಸೂಚನೆ ಕೊಟ್ಟಿದೆ.

ಇವತ್ತು ಯುನೈಟೆಡ್ ಕಿಂಗ್​ಡಮ್ ಪಾರ್ಲಿಮೆಂಟ್​​ನಲ್ಲೂ ಈ ಬಗ್ಗೆ ಅಫ್ಘಾನಿಸ್ತಾನದ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೀತು. ಈ ವೇಳೆ ಮಾತನಾಡಿದ ಪ್ರಧಾನಿ ಬೋರಿಸ್ ಜಾನ್ಸನ್​​, ಯುನೈಟೆಡ್ ಕಿಂಗ್​ಡಮ್ ಒಂದೇ ಎಲ್ಲವನ್ನು ತಡೆಯಬಹುದಿತ್ತು ಅಂದ್ರೆ ಅದು ತಪ್ಪು ಕಲ್ಪನೆ. ಇದು ಈಗ ಶುರುವಾಗಿದ್ದಲ್ಲ. ಸೇನೆ ಹಿಂತೆಗೆದುಕೊಳ್ಳಲು ಅಮೆರಿಕ ಯಾವಾಗ ಏಕಪಕ್ಷೀಯವಾಗಿ ಮುಂದಾಯ್ತೋ ಅವತ್ತೇ ಶುರುವಾಗಿತ್ತು ಅಂತ ಹೇಳಿದ್ದಾರೆ. ಇದ್ರ ಬೆನ್ನಲ್ಲೇ ಬೋರಿಸ್ ಜಾನ್ಸನ್ ಮತ್ತು ಜರ್ಮನ್ ಪ್ರಧಾನಿ ಎಂಜೆಲಾ ಮರ್ಕೆಲ್ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​​ಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಇಮ್ರಾನ್ ಖಾನ್ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸೋದು ಪಾಕಿಸ್ತಾನಕ್ಕೆ ಎಷ್ಟು ಮುಖ್ಯ ಅಂತ ವಿವರಿಸಿದ್ದಾರೆ. ಇದೇ ವೇಳೆ ಬೋರಿಸ್ ಜಾನ್ಸನ್​​​, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಿದ್ರೂ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಬೇಕು. ಏಕಪಕ್ಷೀಯ ನಿರ್ಧಾರವಾಗಿರಬಾರದು ಅಂತ ಇಮ್ರಾನ್ ಖಾನ್​​ಗೆ ಸೂಚಿಸಿದ್ದಾರೆ.

ತಾಲಿಬಾನಿಗಳಿಗೆ ಒಂದು ಅವಕಾಶ ಕೊಟ್ಟು ನೋಡಬೇಕು ಅಂತ ಬ್ರಿಟನ್ ರಕ್ಷಣಾ ಇಲಾಖೆ ಮುಖ್ಯಸ್ಥ ನಿಕ್ ಕಾರ್ಟರ್ ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳು ತಾಳ್ಮೆಯಿಂದ ವರ್ತಿಸಬೇಕು. ತಾಲಿಬಾನಿಗಳಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಬೇಕು. ಅವರು ಏನು ಅಂತ ತೋರಿಸಿಕೊಳ್ಳಲಾದ್ರೂ ಒಂದು ಅವಕಾಶ ಕೊಡಬೇಕು ಅಂತ ಹೇಳಿದ್ಧಾರೆ. ಜನ ನೆನಪಿಸಿಕೊಳ್ಳುವ 1990ರ ತಾಲಿಬಾನಿಗಳಿಗಿಂತ ಈ ತಾಲಿಬಾನಿಗಳು ಭಿನ್ನವಾಗಿರಬಹುದು ಅಂತ ಹೇಳಿದ್ದಾರೆ.

ಅಫ್ಘಾನಿಸ್ತಾನದ ತಾಲಿಬಾನಿಗಳ ಸರ್ಕಾರಕ್ಕೆ ಚೀನಾ ಮಾನ್ಯತೆ ನೀಡುವ ಸುಳಿವು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್​​, ಮೊದಲು ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಯಾಗಲಿ. ಆಮೇಲೆ ನಾವು ಸರ್ಕಾರಕ್ಕೆ ರಾಜತಾಂತ್ರಿಕ ಮಾನ್ಯತೆ ನೀಡೋ ಪ್ರಶ್ನೆಗೆ ಬರ್ತೀವಿ ಅಂತ ಹೇಳಿದ್ದಾರೆ.

ಅಫ್ಘನಿಸ್ತಾನವನ್ನ ತಾಲಿಬಾನ್​ ಟೇಕೋವರ್ ಮಾಡಿದ ಕೆಲವೇ ದಿನಗಳ ಬಳಿಕ ಮೂರನೇ ಅತಿದೊಡ್ಡ ನಗರವಾದ ಹೇರತ್​​ನಲ್ಲಿ ಹೆಣ್ಣು ಮಕ್ಕಳು ಬಿಳಿ ಹಿಜಬ್ ಮತ್ತು ಕಪ್ಪು ಟುನಿಕ್ಸ್​ ಧರಿಸಿ ಶಾಲೆಗಳಿಗೆ ಬಂದಿದ್ದಾರೆ.

ಅಫ್ಘನಿಸ್ತಾನದಲ್ಲಿ ಆಗಸ್ಟ್ 17ನೇ ತಾರೀಖು 101 ಕೊರೋನಾ ಕೇಸ್​ ದೃಢಪಟ್ಟಿದೆ, 6 ಸಾವು ಸಂಭವಿಸಿದೆ.

ಕಾಬೂಲ್​ನ ಭಾರತದ ರಾಯಭಾರ ಕಚೇರಿಯ ಭದ್ರತೆಗಾಗಿ ನಿಯೋಜಿಸಿದ್ದ ಐಟಿಬಿಪಿ ಯೋಧರ ಜೊತೆಗೆ ಮೂರು ಸ್ನಿಫ್ಫರ್ ಡಾಗ್​ಗಳನ್ನ ಕೂಡ ನಿಯೋಜಿಸಲಾಗಿತ್ತು. ಅವುಗಳ ಹೆಸರು – ಮಾಯ, ರೂಬಿ ಮತ್ತು ಬಾಬಿ. ನಿನ್ನೆ ರಾಯಭಾರ ಕಚೇರಿ ಸಿಬ್ಬಂದಿಯನ್ನ ಕರೆತರುವಾಗ ಈ ಶ್ವಾನಗಳನ್ನ ಕೂಡ ಭಾರತಕ್ಕೆ ಏರ್​ಲಿಫ್ಟ್ ಮಾಡಲಾಗಿದೆ. ಇನ್ನು ಫ್ರಾನ್ಸ್​ ನಿನ್ನೆ ಕಾಬೂಲ್​​ನಿಂದ ತನ್ನವರನ್ನ ಸ್ಥಳಾಂತರ ಮಾಡಿದ ವಿಮಾನದಲ್ಲಿ 21 ಭಾರತೀಯರಿದ್ರು ಅಂತ ಫ್ರಾನ್ಸ್ ರಾಯಭಾರಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿದ್ದ ಭಾರತೀಯರಲ್ಲಿ ಹಲವರನ್ನು ಕರ್ಕೊಂಡು ಬಂದ್ರೂ ಇನ್ನೂ ಹಲವರು ಅಲ್ಲೇ ಉಳಿದಿದ್ದಾರೆ. ಹೀಗಾಗಿ ಅವರನ್ನು ಕರೆತರೋ ಬಗ್ಗೆ, ಅಲ್ಲಿರೋ ಹಿಂದೂ ಮತ್ತು ಸಿಖ್ ಸಮುದಾಯದ ರಕ್ಷಣೆ ಕುರಿತು ಪ್ರಧಾನಿ ಮೋದಿ ತುರ್ತು ಸಭೆ ನಡೆಸಿದ್ದಾರೆ. ಈ ಮೂಲಕ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಜೊತೆ 24 ಗಂಟೆಗಳಲ್ಲಿ 2 ಭಾರಿ ಮೀಟಿಂಗ್ ನಡೆಸಿದಂತಾಗಿದೆ.

ವಿದೇಶಾಂಗ ಸಚಿವ ಎಸ್​ ಜೈಶಂಕರ್ ಅಮೆರಿಕ ಪ್ರವಾಸದಲ್ಲಿದ್ದು, ವಿಶ್ವಸಂಸ್ಥೆ ಮುಖ್ಯಸ್ಥ ಅಂಟಾನಿಯೋ ಗುಟೇರಸ್ ಭೇಟಿಯಾಗಿದ್ದಾರೆ. ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಅಫ್ಘಾನಿಸ್ತಾನದ ತಾಲಿಬಾನಿಗಳನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಕೆ ಮಾಡಿದ್ದ ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರೆಹಮಾನ್ ಬರ್ಕ್​​​ ಮತ್ತು ಇತರೆ ಇಬ್ಬರ ವಿರುದ್ಧ ದೇಶದ್ರೋಹ ಕೇಸ್ ದಾಖಲಾಗಿದೆ. ಉತ್ತರ ಪ್ರದೇಶದ ಸಂಬಲ್ ಜಿಲ್ಲೆಯಲ್ಲಿ ಎಪ್​ಐಆರ್ ಕೂಡ ದಾಖಲಿಸಲಾಗಿದ್ದು, ತಾಲಿಬಾನಿಗಳು ಭಾರತದ ಸರ್ಕಾರದ ಪ್ರಕಾರ ಉಗ್ರರು. ಹೀಗಾಗಿ ಅವರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸೋದು ದೇಶದ್ರೋಹವಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

ತಾಲಿಬಾನಿಗಳ ಸಂಬಂಧ ಕಾಂಗ್ರೆಸ್ ಸಂಸದ ಶಶಿ ತರೂರ್ ಮಾಡಿರೋ ಮಾಡಿರೋ ಒಂದು ಟ್ವೀಟ್ ಈಗ ವಿವಾದದ ಬಿಂದುವಾಗಿದೆ. ವಿಡಿಯೋ ಶೇರ್ ಮಾಡಿರೋ ತರೂರ್​, ಮಲಯಾಳಿ ತಾಲಿಬಾನ್ ಅಂತ ಬರೆದುಕೊಂಡಿದ್ದಾರೆ. ಇದ್ರಲ್ಲಿ ಮಲಯಾಳಿ ಪದ ಮಾತನಾಡ್ತಿರೋದು ಕೇಳಬಹುದು ಅಂತ ಹೇಳಿದ್ದಾರೆ. ಆದ್ರೆ ಇದು ಕೇರಳಿಗರನ್ನು ಕೆರಳಿಸಿದೆ. ಈಗಾಗಲೇ ನಮ್ಮ ರಾಜ್ಯದಿಂದ ಹೆಚ್ಚಿನವರು ಜಿಹಾದಿಗಳ ಗುಂಪು ಸೇರ್ತಿದ್ದಾರೆ ಅನ್ನೋ ಆರೋಪ ಇದೆ. ಅದ್ರ ಮಧ್ಯೆ ಹೀಗೆಲ್ಲಾ ಅಂದಾಜು ಮೇಲೆ ಗುಂಡು ಹೊಡಿಬೇಡಿ ಅಂತ ಟೀಕಿಸಿದ್ದಾರೆ. ಅದಕ್ಕೆ ಇವತ್ತು ಮತ್ತೆ ಪ್ರತಿಕ್ರಿಯಿಸಿರೋ ತರೂರ್​, ಓರ್ವ ಸಂಸದನಾಗಿರೋ ನನಗೆ ಎಲ್ಲಾ ಗೊತ್ತು. ಅದಕ್ಕೆ ಹೇಳ್ತಿದ್ದೀನಿ. ಈ ಹಿಂದೆ ಹಲವಾರು ಕೇರಳ ತಾಯಂದಿರು, ಮತ್ತು ಮಹಿಳೆಯರು ನನ್ನ ಭೇಟಿಯಾಗಿ, ಮಿಸ್ ಗೈಡ್ ಆಗಿ ಅಪ್ಘಾನಿಸ್ಥಾನದಲ್ಲಿ ಸಿಲುಕಿರೋ ತಮ್ಮ ಮಕ್ಕಳು, ಪತಿಯನ್ನು ಕರೆತರಲು ಸಹಾಯ ಕೇಳಿದ್ರು. ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವೆಯಾಗಿದ್ದಾಗ ನಾನೇ ಎಷ್ಟೋ ಸಲ ಅವರ ಭೇಟಿಗೆ ಏರ್ಪಾಡು ಮಾಡಿದ್ದೆ ಅಂತ ಹೇಳಿದ್ದಾರೆ.
-masthmagaa.com

 

 

Contact Us for Advertisement

Leave a Reply