ಯುದ್ಧ ಮಾಡಿದ್ದಕ್ಕೆ ಶಿಕ್ಷೆ.. ಈಗ 2,500 ಕೋಟಿ ರೂ ಪರಿಹಾರ ಕೊಡ್ಬೇಕು!

masthmagaa.com:

ಆಫ್ರಿಕಾ ಖಂಡದ ಡೆಮಾಕ್ರೆಟಿಕ್​ ರಿಪಬ್ಲಿಕ್ ಆಫ್​ ಕಾಂಗೋ ದೇಶಕ್ಕೆ ಯುದ್ಧ ಪರಿಹಾರವಾಗಿ ಪಕ್ಕದ ಉಗಾಂಡಾ ದೇಶ ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿ ದುಡ್ಡು ಕೊಡ್ಬೇಕು ಅಂತ ನೆದರ್​ಲ್ಯಾಂಡ್​​ನ ದಿ ಹೇಗ್​​ನಲ್ಲಿರೋ ಇಂಟರ್​​ನ್ಯಾಷನಲ್​ ಕೋರ್ಟ್ ಆಫ್​ ಜಸ್ಟಿಸ್​ – ಐಸಿಜೆ ಆದೇಶಿಸಿದೆ. ಉಗಾಂಡಾ ತನ್ನ ಅಂತಾರಾಷ್ಟ್ರೀಯ ಕಟ್ಟುಪಾಡುಗಳನ್ನ ಉಲ್ಲಂಘಿಸಿದ್ದಕ್ಕೆ ಈ ಶಿಕ್ಷೆ ವಿಧಿಸಲಾಗಿದೆ. 1998ರಿಂದ 2003ರವರೆಗೆ ಡೆಮಾಕ್ರೆಟಿಕ್​ ರಿಪಬ್ಲಿಕ್ ಆಫ್​ ಕಾಂಗೋ ಅಥವಾ ಡಿಆರ್​ಸಿ ಮತ್ತು ಉಗಾಂಡಾ ನಡುವೆ ಭೀಕರ ಯುದ್ಧ ನಡೆದಿತ್ತು. 2003ರಲ್ಲಿ ಯುದ್ಧ ಅಂತ್ಯವಾದ್ರೂ, ಅದರ ನಂತ್ರ ಅಪೌಷ್ಟಿಕತೆ ಮತ್ತು ರೋಗಗಳಿಂದ ಸಾಕಷ್ಟು ಸಾವು ಸಂಭವಿಸಿದ್ವು. 2008ರ ವೇಳೆಗೆ ಸುಮಾರು 50 ಲಕ್ಷ ಜನ ಪ್ರಾಣ ಕಳ್ಕೊಂಡ್ರು ಅಂತ ಅಂದಾಜಿಸಲಾಯ್ತು. ಹೀಗಾಗಿ ಇದನ್ನ ಎರಡನೇ ಮಹಾಯುದ್ಧದ ಬಳಿಕ ನಡೆದ ಮಾರಣಾಂತಿಕ ಸಂಘರ್ಷ ಅಂತ ಪರಿಗಣಿಸಲಾಗುತ್ತೆ. ಯುದ್ಧ ಪರಿಹಾರವಾಗಿ ತನಗೆ 11 ಬಿಲಿಯನ್​ ಡಾಲರ್​ ಕೊಡ್ಬೇಕು ಅಂತ ಡಿಆರ್​ಸಿ ಬೇಡಿಕೆ ಇಟ್ಟಿತ್ತು. ಇದೀಗ ಅಂತಾರಾಷ್ಟ್ರೀಯ ಕೋರ್ಟ್ 325 ಮಿಲಿಯನ್​ ಡಾಲರ್ ಕೊಡುವಂತೆ ಉಗಾಂಡಾಗೆ ಸೂಚಿಸಿದೆ. ಯುದ್ಧ ಪರಿಹಾರವನ್ನ ವಿವಿಧ ರೀತಿಯ ಹಾನಿಯಾಗಿ ಕೋರ್ಟ್​ ವಿಂಗಡಿಸಿದೆ. ಪ್ರಾಣ ಕಳೆದುಕೊಂಡವರು ಮತ್ತು ವ್ಯಕ್ತಿಗಳಿಗಾದ ಇತರ ನಷ್ಟಕ್ಕೆ 225 ಮಿಲಿಯನ್​ ಡಾಲರ್​. ಇದರಲ್ಲಿ ಅತ್ಯಾಚಾರ, ಸೈನಿಕರಾಗುವಂತೆ ಮಕ್ಕಳನ್ನ ಬಲವಂತ ಮಾಡಿದ್ದು, ಮತ್ತು 5 ಲಕ್ಷ ಜನರ ಸ್ಥಳಾಂತರ ಸೇರಿದೆ. ಆಸ್ತಿಪಾಸ್ತಿಗಾದ ಹಾನಿಗೆ 40 ಮಿಲಿಯನ್ ಡಾಲರ್ ಮತ್ತು ನೈಸರ್ಗಿಕ ಸಂಪತ್ತಿಗಾದ ಹಾನಿಗೆ 60 ಮಿಲಿಯನ್ ಡಾಲರ್ ಅಂತ ಫಿಕ್ಸ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply