ಮೂರನೇ ಮಹಾಯುದ್ದದ ವಾರ್ನಿಂಗ್‌ ಕೊಟ್ಟ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ!

masthmagaa.com:

ರಷ್ಯಾ-ಯುಕ್ರೇನ್‌ ಸಂಘರ್ಷಕ್ಕೆ ಇದೇ ಫೆಬ್ರವರಿ 24ಕ್ಕೆ ಭರ್ತಿ ಒಂದು ವರ್ಷ ತುಂಬುತ್ತೆ. ಇಂಥಾ ಹೊತ್ತಲ್ಲೇ ಯುದ್ದದ ಕುರಿತು ಚೀನಾ ಹಿಂದೆಂದಿಗಿಂತಲೂ ಹೆಚ್ಚಿನ ರೀತಿ ಆಕ್ರೋಶ ಭರಿತವಾಗಿದ್ದು ಪಾಶ್ಚಿಮಾತ್ಯ ದೇಶಗಳ ವಿರುದ್ದ ಕೆಂಡಕಾರಿದೆ. ʻಉರಿಯೋ ಬೆಂಕಿಗೆ ಪೆಟ್ರೋಲ್‌ ಹಾಕೋದನ್ನ ಮೊದಲು ನಿಲ್ಸಿ ಅಂತ ಪಾಶ್ಚಿಮಾತ್ಯ ದೇಶಗಳಿಗೆ ಚೀನಾ ಛೀಮಾರಿ ಹಾಕಿದೆ. ಯುಕ್ರೇನ್‌ ವಿರುದ್ದ ರಷ್ಯಾಗೆ ಚೀನಾ ಆಯುಧಗಳನ್ನ ಒದಗಿಸೋಕೆ ಸಿದ್ದತೆ ನಡೆಸ್ತಿದೆ ಅಂತ ನಿನ್ನೆ ತಾನೇ ಅಮೆರಿಕ, ಚೀನಾ ವಿರುದ್ದ ಗಂಭೀರ ಆರೋಪ ಮಾಡಿತ್ತು. ಇದರ ಬೆನ್ನಲ್ಲೇ ಅಮೆರಿಕವನ್ನ ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡಿರೋ ಚೀನಾ, ಯುಕ್ರೇನ್‌ನಲ್ಲಿ ನಡೀತಿರೋ ಸಂಘರ್ಷದ ಕುರಿತು ಚೀನಾಗೆ ತೀವ್ರ ಕಳವಳ ಇದೆ. ಚೀನಾ ಇಬ್ರ ಮಧ್ಯೆ ಶಾಂತಿ ಸ್ಥಾಪನೆ ಆಗಬೇಕು ಅಂತ ಬಯಸುತ್ತೆ. ನಾವು ರಷ್ಯಾಗೆ ಯಾವುದೇ ಆಯುಧಗಳನ್ನ ಕೊಡ್ತಾಯಿಲ್ಲ. ಮೊದಲು ನೀವು ಉರಿಯೋ ಬೆಂಕಿಗೆ ಪೆಟ್ರೋಲ್‌ ಹಾಕೋದನ್ನ ನಿಲ್ಸಿ. ಅಂದ್ರೆ, ಯುಕ್ರೇನ್‌ನವರಿಗೆ ನೀವು ಆಯುಧ ಕೊಡೋದನ್ನ ಮೊದಲು ಸ್ಟಾಪ್‌ ಮಾಡಿ ಅಂತ ಅಮೆರಿಕ ಹಾಗೂ ಮಿತ್ರರನ್ನ ಚೀನಾ ತರಾಟೆಗೆ ತಗೊಂಡಿದೆ. ಅಲ್ದೇ ಚೀನಾದ ಆಂತರಿಕ ವಿಚಾರಗಳ ಕುರಿತು ಯಾವುದೇ ರೂಪದಲ್ಲಿ ಹಸ್ತಕ್ಷೇಪ ಮಾಡಿದ್ರೆ, ನಮ್ಮ ಮೇಲೆ ಯಜಮಾನಿಕೆ ತೋರುದ್ರೆ ಅದಕ್ಕೆ ನಮ್ಮ ತೀವ್ರ ವಿರೋಧ ಇದೆ ಅಂತ ಚೀನಾ ಹೇಳಿದೆ. ಇತ್ತ ಚೀನಾ, ರಷ್ಯಾಗೆ ಆಯುಧ ಸಹಾಯ ಮಾಡೋದಕ್ಕೆ ಮುಂದಾಗಿದೆ ಅನ್ನೋ ಅಮೆರಿಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರೋ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ, ನನಗೆ ಆ ರೀತಿ ಏನ್‌ ಅನ್ಸೋದಿಲ್ಲ. ಆದ್ರೆ ಅದನ್ನ ಮೀರಿ ಕೂಡ ಚೀನಾ, ರಷ್ಯಾ ಜೊತೆಗೆ ನಿಂತುಕೊಳ್ತು ಅಂದ್ರೆ ಅದು ಖಂಡಿತಾ ಮೂರನೇ ಮಹಾಯುದ್ದವೇ ಆಗಿರುತ್ತೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಈ ಕಡೆ ರಷ್ಯಾದ ವ್ಯಕ್ತಿಯೊಬ್ಬ ತಾನು ಯುಕ್ರೇನ್‌ನ ಮಾಜಿ ಅಧ್ಯಕ್ಷ ಪೆಟ್ರೋ ಪೊರೊಶಂಕೊ ಅಂತ ಹೇಳಿಕೊಂಡು ಜರ್ಮನಿಯ ಮಾಜಿ ಚಾನ್ಸಲರ್‌ ಏಂಜೆಲಾ ಮಾರ್ಕೆಲ್‌ ಅವರಿಗೆ ಕರೆ ಮಾಡಿ ಯುಕ್ರೇನ್ ಹಾಗೂ ಬೆಲರೂಸ್‌ಗಳಲ್ಲಿ ಆಗ್ತಿರೋ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾನೆ. ಏಂಜೆಲಾ ಮಾರ್ಕೆಲ್‌ ಕೂಡ ಈ ವೇಳೆ ತುಂಬಾ ಜಾಗರೂಕರಾಗಿ ಉತ್ತರ ಕೊಟ್ಟಿದ್ದಾರೆ ಅಂತ ಮಾರ್ಕೆಲ್‌ ಅವರ ಆಫೀಸ್‌ ಹೇಳಿಕೆ ಬಿಡುಗಡೆ ಮಾಡಿದೆ. ಇತ್ತ ಯುಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ದ ನಿಲ್ಲಿಸೋಕೆ ಭಾರತವೇ ಸೂಕ್ತ ಅಂತ ಯುರೋಪಿಯನ್‌ ಯೂನಿಯನ್‌ ಮತ್ತೊಮ್ಮೆ ಪುನರುಚ್ಚಾರ ಮಾಡಿದೆ. ಯುರೋಪಿಯನ್‌ ಯೂನಿಯನ್‌ನ ಭಾರತದ ರಾಯಭಾರಿ, ಯುಗೋ ಅಸ್ಟುಟೋ ಈ ಬಗ್ಗೆ ಮಾತನಾಡಿದ್ದಾರೆ. ಯುಕ್ರೇನ್‌ ಸಂಘರ್ಷಕ್ಕೆ ಜಿ20 ಅಧ್ಯಕ್ಷತೆ ವಹಿಸಿಕೊಂಡಿರೋ ಭಾರತವೇ ಒಂದು ದಾರಿ ಹುಡುಕ್ಬೇಕು ಅಂತ ಯುರೋಪಿಯನ್‌ ಯೂನಿಯನ್‌ ನಂಬಿದೆ ಅಂತ ಯುಗೋ ಅಸ್ಟುಟೋ ಹೇಳಿದ್ದಾರೆ. ಇನ್ನು ಯುಕ್ರೇನ್‌ ಯುದ್ದಕ್ಕೆ ಒಂದು ವರ್ಷ ಸಮೀಪಿಸ್ತಿರೋ ಹಿನ್ನೆಲೆಯಲ್ಲಿ ಈ ವಿಚಾರವಾಗಿ ಪುಟಿನ್‌ ಇಂದು ರಷ್ಯಾ ಸಂಸತ್‌ನಲ್ಲಿ ಮಾತನಾಡಲಿದ್ದಾರೆ ಅಂತ ರಷ್ಯಾದ ಆಡಳಿತ ಹೇಳಿಕೆ ಬಿಡುಗಡೆ ಮಾಡಿದೆ.

-masthmagaa

Contact Us for Advertisement

Leave a Reply