UNSC ಖಾಯಂ ಸ್ಥಾನ! ಭಾರತದ ಪರ ಮಸ್ಕ್‌ ಬ್ಯಾಟಿಂಗ್!

masthmagaa.com:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗುವ ಪ್ರಯತ್ನದಲ್ಲಿರೊ ಭಾರತದ ಪರ ಟೆಸ್ಲಾ CEO ಎಲಾನ್‌ ಮಸ್ಕ್‌ ಬ್ಯಾಟಿಂಗ್‌ ಮಾಡಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಇಲ್ಲದಿರೋದನ್ನ ಅಸಂಬದ್ಧ ಅಂತ ಕರೆದಿದ್ದಾರೆ. ಈ ಕುರಿತು Xನಲ್ಲಿ ಪೋಸ್ಟ್‌ ಹಾಕಿರೊ ಮಸ್ಕ್‌, ʻಕೆಲವೊಮ್ಮೆ ಯುಎನ್ ಅಂಗಸಂಸ್ಥೆಗಳಲ್ಲಿ ತಿದ್ದುಪಡಿ ಮಾಡುವ ಅವಶ್ಯಕತೆಯಿದೆ. ಆದ್ರೆ ಹೆಚ್ಚಿನ ಅಧಿಕಾರ ಹೊಂದಿರೋರು ಪವರ್‌ನ್ನ ಬಿಟ್ಟು ಕೊಡೋಕೆ ರೆಡಿ ಇಲ್ದೇ ಇರೋದು ಸಮಸ್ಯೆಯಾಗಿದೆ. ಭೂಮಿಯ ಮೇಲಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ರೂ, ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಸಿಗದಿರುವುದು ಅಸಂಬದ್ಧ. ನನ್ನ ಅಭಿಪ್ರಾಯದಲ್ಲಿ, ಆಫ್ರಿಕಾಕ್ಕೂ ಶಾಶ್ವತ ಸ್ಥಾನ ಸಿಗಬೇಕುʼ ಎಂದಿದ್ದಾರೆ. ಅಂದ್ಹಾಗೆ ಈ ಬಗ್ಗೆ ಚರ್ಚೆ ಶುರುವಾಗೋಕೆ ಕಾರಣ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗುಟೆರಸ್‌ ಮಾಡಿರೋ ಪೋಸ್ಟ್‌ನಿಂದ. ಇವ್ರು ತಮ್ಮ `X’ ನಲ್ಲಿ ಆಫ್ರಿಕಾ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಇಲ್ಲದಿರೋ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಅಮೆರಿಕನ್‌-ಇಸ್ರೇಲಿ ಬ್ಯುಸನೆಸ್‌ಮ್ಯಾನ್‌ ಮೈಕಲ್‌ ಐಸನ್‌ಬರ್ಗ್‌, ಭಾರತಕ್ಕೆ ಖಾಯಂ ಸದಸ್ಯತ್ವ ಯಾಕಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಇದ್ರ ಬೆನ್ನಲ್ಲೇ ಐಸನ್‌ಬರ್ಗ್‌ ಅವ್ರ ಕಾಮೆಂಟ್‌ಗೆ ಟೆಕ್‌ ದಿಗ್ಗಜ ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿ, ʻಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸೀಟ್‌ ನೀಡದಿರೋದು ಅಸಂಬದ್ಧʼ ಅಂತ ರಿಯಾಕ್ಟ್‌ ಮಾಡಿದ್ದಾರೆ.

ಇನ್ನೊಂದ್‌ ಕಡೆ ಈ ಹಿಂದೆ `X’ನಲ್ಲಿ ಬಂದಿದ್ದ ಯಹೂದಿ ವಿರೋಧಿ ಪೋಸ್ಟ್‌ ಒಂದಕ್ಕೆ ಬೆಂಬಲ ಸೂಚಿಸಿ ಎಲಾನ್‌ ಮಸ್ಕ್‌ ರಿಯಾಕ್ಟ್‌ ಮಾಡಿದ್ರು. ಈ ಕಾರಣಕ್ಕೆ ಮಸ್ಕ್‌ ವಿರುದ್ಧ ಭಾರಿ ಟೀಕೆಗಳನ್ನ ಮಾಡಲಾಗಿತ್ತು. ಕೆಲ ದೊಡ್ಡ ದೊಡ್ಡ ಕಂಪನಿಗಳು `X’ನಲ್ಲಿ ತಮ್ಮ ಜಾಹೀರಾತುಗಳನ್ನ ನೀಡೋದನ್ನೂ ಸ್ಟಾಪ್‌ ಮಾಡಿದ್ವು. ಈ ಬಗ್ಗೆ ಸಮರ್ಥಿಸಿಕೊಳ್ಳುವಂತೆ ಇದೀಗ ಮಸ್ಕ್‌ ಜರ್ಮನ್‌ ಆಕ್ರಮಿತ ಪೋಲ್ಯಾಂಡ್‌ನಲ್ಲಿರೋ ಆಶ್ವಿಟ್ಜ್‌ ಕಾನ್ಸಂಟ್ರೇಶನ್‌ ಕ್ಯಾಂಪ್‌ಗೆ ಭೇಟಿ ನೀಡಿದ್ದಾರೆ. ಅಂದ್ಹಾಗೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯುರೋಪಿಯನ್‌ ಯಹೂದಿಗಳ ಮೇಲೆ ಹತ್ಯಾಕಾಂಡ ನಡೆಸಲಾದ ಜಾಗವಿದು. ಈ ಜಾಗಕ್ಕೆ ಜನವರಿ 22 ರಂದು ಮಸ್ಕ್‌ ಭೇಟಿ ನೀಡಿದ್ದಾರೆ. ಈ ವೇಳೆ ಅವ್ರು ಸತ್ತವ್ರ ಸ್ಮಾರಕಗಳ ಮೇಲೆ ಹೂಗುಚ್ಛವನ್ನ ಅರ್ಪಿಸಿ, ಅಲ್ಲಿ ನಡೆದ ಸ್ಮಾರಕ ಸೇವೆಯಲ್ಲಿ ಭಾಗಿಯಾದ್ರು ಎನ್ನಲಾಗಿದೆ. ಇದಾದ ಬಳಿಕ ರಿಯಾಕ್ಟ್‌ ಮಾಡಿದ ಮಸ್ಕ್‌, ʻಮನುಷ್ಯರೇ ಮನುಷ್ಯರ ಹತ್ಯಾಕಾಂಡವನ್ನ ಈ ರೀತಿ ನಡೆಸಿದ್ದಾರಂದ್ರೆ ಬಹಳ ನೋವಾಗುತ್ತೆʼ ಅಂತ ಬೇರೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply