ಇಸ್ರೇಲ್‌ ಪ್ಯಾಲೆಸ್ತೇನ್‌ ನಡುವೆ ಕದನ ವಿರಾಮ ಘೋಷಣೆ

masthmagaa.com:

ವಿಶ್ವದಲ್ಲೇ ದೊಡ್ಡ ಯುದ್ಧದ ಭೀತಿ ಹುಟ್ಟಿಸಿದ್ದ ಇಸ್ರೇಲ್-ಪ್ಯಾಲೆಸ್ತೇನ್ ಸಂಘರ್ಷಕ್ಕೆ ಕೊನೆಗೂ ಕದನ ವಿರಾಮದ ಮುದ್ರೆ ಬಿದ್ದಿದೆ. ಈಜಿಪ್ಟ್​​ ಮಧ್ಯಸ್ಥಿಕೆ ಫಲ ನೀಡಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ನೇತೃತ್ವದಲ್ಲಿ ಸೆಕ್ಯೂರಿಟಿ ಕ್ಯಾಬಿನೆಟ್ ಸಭೆಯಲ್ಲಿ ಬೇಷರತ್​​ ಆಗಿ ಕದನ ವಿರಾಮಕ್ಕೆ ಅವಿರೋಧವಾಗಿ ಮತ ಹಾಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ಯಾಲೆಸ್ತೇನ್ ಕೂಡ ಮಧ್ಯರಾತ್ರಿ 2 ಗಂಟೆಗೆ ಕದನ ವಿರಾಮ ಘೋಷಣೆಯಾಗಿದೆ ಅಂತ ಮಾಹಿತಿ ನೀಡಿದೆ. ನಿನ್ನೆಯಷ್ಟೇ ಬೈಡೆನ್ ಇಸ್ರೇಲ್ ಪ್ರಧಾನಿ ಬೆಂಜಮಿನ್​​​ಗೆ ಕರೆ ಮಾಡಿ, ಕದನ ವಿರಾಮದ ಸಲಹೆ ನೀಡಿದ್ರು. ಇದಾದ ಬಳಿಕ ಈಜಿಪ್ಟ್​, ಖತಾರ್ ಮತ್ತು ವಿಶ್ವಸಂಸ್ಥೆ ಕೂಡ ಇಸ್ರೇಲ್- ಪ್ಯಾಲೆಸ್ತೇನ್ ನಡುವೆ ಮಧ್ಯಸ್ಥಿಕೆ ವಹಿಸ್ತೀವಿ ಅಂತ ಹೇಳಿಕೊಂಡಿದ್ವು. ಇದೇ ವಿಚಾರವಾಗಿ ಬೈಡೆನ್ ಕೂಡ ಈಜಿಪ್ಟ್​ ಅಧ್ಯಕ್ಷ ಅಬ್ದೆಲ್ ಫತಾ ಅಲ್​ ಸಿಸಿಗೆ ಕರೆ ಮಾಡಿ ಮಾತನಾಡಿದ್ರು ಅಂತ ಕೂಡ ವೈಟ್ ಹೌಸ್ ಹೇಳಿದೆ. ಕದನ ವಿರಾಮದ ಬೆನ್ನಲ್ಲೇ ಪ್ಯಾಲೆಸ್ತೇನ್​​ನಲ್ಲಿ ಹಮಾಸ್​​​​ ಗೆಲುವು ಘೋಷಿಸಿಕೊಂಡಿದ್ದು, ಗಾಜಾದಲ್ಲಿ ಸಾವಿರಾರು ಜನ ನಾವೇ ಗೆದ್ವಿ ಅಂತ ರಸ್ತೆಗಿಳಿದು ಸಂಭ್ರಮಿಸ್ತಿದ್ದಾರೆ. ಇಸ್ರೇಲ್​​ನ ಆಕ್ರಮಣಶೀಲತೆಯ ವಿರುದ್ಧದ ಗೆಲುವು ಸಾಧಿಸಿದ್ದೇವೆ ಅಂತ ಮಸೀದಿಯ ಮೈಕ್​​ಗಳಲ್ಲಿ ಘೋಷಿಸಲಾಗ್ತಿದೆ. ಅಂದಹಾಗೆ ಇಸ್ರೇಲ್​​-ಪ್ಯಾಲೆಸ್ತೇನ್ ಸಂಘರ್ಷದಲ್ಲಿ ಯಾವಾಗಲೂ ಹಾಗೆ.. ಯುದ್ಧ ಮಾಡೋದು.. ಫೈನಲಿ ಎರಡೂ ದೇಶಗಳು ಗೆಲುವು ಘೋಷಿಸಿಕೊಳ್ಳೋದೇ ನಡೆದುಕೊಂಡು ಬಂದಿದೆ.. ಈ ಸಲನೂ ಹಾಗೇ ಆಗಿದೆ. ಆದ್ರೂ ಕೂಡ ನಮ್ಮ ಕೈ ಬೆರಳು ಇನ್ನೂ ಕೂಡ ಟ್ರಿಗರ್ ಮೇಲೆಯೇ ಇದೆ ಎಂದು ಎಚ್ಚರಿಸಿರೋ ಹಮಾಸ್​​, ಜೆರುಸಲೆಂನಲ್ಲಿ ಹಿಂಸಾಚಾರ ಕೊನೆಗೊಳಿಸಬೇಕು. ಗಾಜಾದಲ್ಲಾದ ನಷ್ಟಕ್ಕೆ ಪರಿಹಾರ ನೀಡಬೇಕು ಅಂತ ಆಗ್ರಹಿಸಿದೆ.

ಅಂದಹಾಗೆ ಮೇ 10ರಂದು ಜೆರುಸಲೆಂನಲ್ಲಿರೋ ಅಲ್​ ಅಕ್ಸಾ ಮಸೀದಿ ಬಳಿ ಇಸ್ರೇಲ್ ಭದ್ರತಾ ಸಿಬ್ಬಂದಿ ಮತ್ತು ಪ್ಯಾಲೆಸ್ತೇನಿಯರ ನಡುವೆ ಘರ್ಷಣೆ ಮೂಲಕ ಈ ಸಂಘರ್ಷ ಶುರುವಾಗಿತ್ತು. ಈ ಸಂಘರ್ಷದಲ್ಲಿ ಪ್ಯಾಲೆಸ್ತೇನ್​​ನಲ್ಲಿ 232 ಮಂದಿ ಪ್ರಾಣ ಬಿಟ್ಟಿದ್ಧಾರೆ. ಇವರಲ್ಲಿ 65 ಮಕ್ಕಳು ಮತ್ತು 39 ಮಹಿಳೆಯರು ಸೇರಿದ್ದಾರೆ. 1900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒಟ್ಟು 1.20 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದ್ದು, ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆಲ್ಲಾ ಈಗ ಮತ್ತೆ ವಸತಿ ಸೌಲಭ್ಯ ಕಲ್ಪಿಸೋದೇ ದೊಡ್ಡ ಸವಾಲಾಗಿದೆ. ಪ್ಯಾಲೆಸ್ತೇನ್​​ನಲ್ಲಿ ಮೃತರ ಪೈಕಿ 160 ಮಂದಿ ಹಮಾಸ್ ಪಡೆಯ ಸದಸ್ಯರೇ ಸೇರಿದ್ದಾರೆ. ಹಮಾಸ್ ಪಡೆ ಒಟ್ಟು 4300 ರಾಕೆಟ್ ಉಡಾವಣೆ ಮಾಡಿದೆ ಅಂತ ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್​​ನಲ್ಲೂ 12 ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದಲ್ಲಿ ಜನ ಗಾಯಗೊಂಡಿದ್ಧಾರೆ.

ಇಸ್ರೇಲ್​​​​​​ ರಕ್ಷಣಾ ಸಚಿವರು ಈಗಾಗಲೇ ತಮ್ಮ ಸೇನೆ ಹಮಾಸ್​ ಪಡೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿರೋದಾಗಿ ಘೋಷಿಸಿದೆ. ಆದ್ರೆ ಇಸ್ರೇಲಿಗರಲ್ಲೇ ಈ ಬಗ್ಗೆ ಅನುಮಾನವಿದೆ ಅಂತ ಅಲ್​​ಜಜೀರಾ ವರದಿ ಮಾಡಿದೆ. ಇಸ್ರೇಲ್ ಸೇನೆ ಹೇಳಿಕೊಳ್ತಿರುವಷ್ಟರ ಮಟ್ಟಿಗೆ ಹಮಾಸ್ ಪಡೆಗೆ ಹಾನಿಯಾಗಿಲ್ಲ ಅಂತ ಇಸ್ರೇಲಿಗರು ಮಾತಾಡ್ಕೊಳ್ತಿದ್ಧಾರೆ ಅಂತ ಹೇಳಲಾಗ್ತಿದೆ.

ನಿನ್ನೆವರೆಗೂ ಇಸ್ರೇಲ್ ಮತ್ತು ಗಾಜಾ ನಡುವೆ ಸದ್ಯಕ್ಕೆ ಕದನ ವಿರಾಮ ಆಗಲ್ಲ ಅಂತಲೇ ಭಾವಿಸಲಾಗಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕದನ ವಿರಾಮದ ಪ್ರಯತ್ನಕ್ಕೆ ಅಮೆರಿಕ ಅಡ್ಡಿಪಡಿಸಿದ್ರೆ, ಇಸ್ರೇಲ್ ಪ್ರಧಾನಿ ನೆತನ್ಯಾಹು ಕೂಡ ಇಸ್ರೇಲ್ ತನ್ನ ಗುರಿ ತಲುಪುವವರೆಗೆ ದಾಳಿ ಮುಂದುವರಿಸಲಿದೆ ಅಂತ ಹೇಳಿದ್ರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ಬಗ್ಗೆ ನಿನ್ನೆಯಷ್ಟೇ ಸಭೆ ನಡೆದಿತ್ತು. ಸಭೆಯಲ್ಲಿ ಮಾತನಾಡಿದ್ದ ಇಸ್ರೇಲ್ ಪ್ರತಿನಿಧಿ ಇಸ್ರೇಲ್ ಹೋರಾಟ ಮಾಡ್ತಿರೋದು ಪ್ಯಾಲೆಸ್ತೇನ್ ವಿರುದ್ಧ ಅಲ್ಲ.. ಒಂದು ಉಗ್ರ ಸಂಘಟನೆ ವಿರುದ್ಧ ಅಂತ ಹೇಳಿ ವಾಕೌಟ್ ಮಾಡಿದ್ರು. ಹೀಗಾಗಿ ಕದನ ವಿರಾಮ ತುಂಬಾ ಕಷ್ಟ ಅಂತ ಹೇಳಲಾಗಿತ್ತು. ಆದ್ರೂ ಕೂಡ ಈಜಿಪ್ಟ್​ ಪ್ರಯತ್ನ ಫಲ ಕೊಟ್ಟಿದೆ.

ಇನ್ನು ಈ ನಡುವೆ ಇಸ್ರೇಲ್-ಪ್ಯಾಲೆಸ್ತೇನ್ ಕುರಿತು ಇವತ್ತು ಬೈಡೆನ್ ಹೇಳಿಕೆ ನೀಡಲಿದ್ಧಾರೆ ಅಂತ ವೈಟ್ ಹೌಸ್​ ಮಾಹಿತಿ ನೀಡಿದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಬ್ಲಿಂಕನ್ ಸದ್ಯದಲ್ಲೇ ಮಿಡಲ್​ ಈಸ್ಟ್​​ಗೆ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಪ್ಯಾಲೆಸ್ತೇನ್ ಮತ್ತು ಇಸ್ರೇಲ್ ಜೊತೆ ಮಾತುಕತೆ ನಡೆಸಲಿದ್ಧಾರೆ ಅಂತ ಅಮೆರಿಕದ ಸ್ಟೇಟ್​ ಡಿಪಾರ್ಟ್​​ಮೆಂಟ್ ತಿಳಿಸಿದೆ. ಇನ್ನು ಪಾಕಿಸ್ತಾನ ಕೂಡ ಗಾಜಾ ಕದನ ವಿರಾಮವನ್ನು ಬೆಂಬಲಿಸಿದ್ದು, ಇವತ್ತು ಲಾಹೋರ್, ಇಸ್ಲಮಾಬಾದ್​​, ಕರಾಚಿಯಲ್ಲಿ ಬೃಹತ್ ಮೆರವಣಿಗೆಗಳನ್ನು ನಡೆಸಿದೆ. ಭಾರತ ಮಾತ್ರ ಈ ಸಂಘರ್ಷದ ವಿಚಾರದಲ್ಲಿ ತಟಸ್ಥ ನಿಲುವು ಹೊಂದಿದ್ದು, ಇತ್ತೀಚೆಗೆ ನಡೆದ ಘಟನೆಗಳು ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಈ ಕೂಡಲೇ ಮಾತುಕತೆ ಶುರುವಾಗಬೇಕು ಅನ್ನೋದನ್ನ ತೋರಿಸುತ್ತೆ ಅಂತ ಹೇಳಿದೆ.

ಪ್ಯಾಲೆಸ್ತೇನ್​​ನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಮುಂದಿನ 6 ತಿಂಗಳಲ್ಲಿ 51 ಕೋಟಿ ರೂಪಾಯಿಯಷ್ಟು ದುಡ್ಡು ಬೇಕು ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದ್ರ ಬೆನ್ನಲ್ಲೇ ಚೀನಾ ಗಾಜಾಪಟ್ಟಿಯ ನೆರವಿಗೆ ಮುಂದಾಗಿದೆ. ಅಲ್ಲಿ ಗಾಯಗೊಂಡವರಿಗೆ ಚಿಕಿತ್ಸೆಗೆ ಮತ್ತು ಮನೆ ಮಠ ಕಳೆದುಕೊಂಡು ನಿರಾಶ್ರಿತರಾದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಅಗತ್ಯ ನೆರವು ನೀಡೋದಾಗಿ ಘೋಷಿಸಿದೆ.

ಇಸ್ರೇಲ್-ಗಾಜಾದಲ್ಲೇನೋ ಸಂಘರ್ಷ ಕದನ ವಿರಾಮ ಘೋಷಣೆಯಾಗಿದೆ. ಆದ್ರೆ ಇದಕ್ಕೂ ಮುನ್ನ ನ್ಯೂಯಾರ್ಕ್​ನಲ್ಲಿ ಇಸ್ರೇಲ್ ಪರ ಮತ್ತು ಪ್ಯಾಲೆಸ್ತೇನ್ ಪರ ಪ್ರತಿಭಟನೆ ಮಾಡ್ತಿದ್ದೋರು ಫುಲ್ ಗಲಾಟೆ ಮಾಡ್ಕೊಂಡಿದ್ಧಾರೆ. ಮ್ಯಾನ್​​ಹಟನ್​​ನ ರಸ್ತೆಗಳಲ್ಲಿ ಜನರ ಮೇಲೆ ಸ್ಫೋಟಗಳನ್ನೆಲ್ಲಾ ಎಸೆದುಕೊಂಡು ಕಿತ್ತಾಡಿದ್ಧಾರೆ. ಒಬ್ರಿಗೆ ಸುಟ್ಟ ಗಾಯಗಳಾಗಿದ್ದು ಬಿಟ್ರೆ ಬೇರೆ ಯಾರಿಗೂ ಏನೂ ಆಗಿಲ್ಲ..

-masthmagaa.com

Contact Us for Advertisement

Leave a Reply