ಯುಕ್ರೇನ್​ಲ್ಲಿ 8 ಸಾವಿರ ಜನರ ಅಸ್ತಿಪಂಜರ ಪತ್ತೆ: ಸ್ಟಾಲಿನ್ ಕ್ರೌರ್ಯದ ಗುರುತು

masthmagaa.com:

ಯುಕ್ರೇನ್​ನಲ್ಲಿ ರಷ್ಯಾ ಮಾಜಿ ಸರ್ವಾಧಿಕಾರಿ ಸ್ಟಾಲಿನ್ ನಡೆಸಿದ್ದ ಭಯಾನಕ ಮಾರಣ ಹೋಮಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಇಲ್ಲಿನ ಒಡೆಸ್ಸಾ ವಿಮಾನ ನಿಲ್ದಾಣದ ಬಳಿ 25ಕ್ಕೂ ಹೆಚ್ಚು ಸಮಾಧಿಗಳು ಪತ್ತೆಯಾಗಿದ್ದು, ಅದ್ರಲ್ಲಿ 5ರಿಂದ 8 ಸಾವಿರದಷ್ಟು ಮಂದಿಯ ಮೂಳೆಗಳಿವೆ ಅಂತ ಅಂದಾಜಿಸಲಾಗಿದೆ. ಇದು ಯುಕ್ರೇನ್​ನಲ್ಲಿ ಈವರೆಗೆ ಪತ್ತೆಯಾದ ಅತಿದೊಡ್ಡ ಸಾಮೂಹಿಕ ಸಮಾಧಿ ಇದಾಗಿದೆ. ಇವರೆಲ್ಲರನ್ನೂ 1930ರ ದಶಕದಲ್ಲಿ ಸ್ಟಾಲಿನ್​​​​​ ರಚಿಸಿದ್ದ ಸೀಕ್ರೆಟ್ ಪೊಲೀಸ್ ಪಡೆ ಎನ್​​ಕೆವಿಡಿ ಗಲ್ಲಿಗೇರಿಸಿರಬಹುದು ಅಂತ ನ್ಯಾಷನಲ್ ಮೆಮೋರಿ ಇನ್​ಸ್ಟಿಟ್ಯುಟ್​​​​ನ ಪ್ರಾದೇಶಿಕ ಬ್ರಾಂಚ್​ನ ಮುಖ್ಯಸ್ಥ ಸೆರ್ಜೀ ಗುಟ್​​ಸಾಲ್ಯುಕ್ ಹೇಳಿದ್ದಾರೆ. ಉತ್ಖನನ ಮುಂದುವರಿದಂತೆ ಮತ್ತಷ್ಟು ಜನರ ಮೂಳೆಗಳು ಸಿಗೋ ಸಾಧ್ಯತೆ ಇದೆ ಅಂತ ಗುಟ್​​ಸಾಲ್ಯುಕ್ ತಿಳಿಸಿದ್ದಾರೆ. ಈ ಮೂಳೆಗಳು ಯಾರದ್ದು ಅಂತ ಪತ್ತೆಹಚ್ಚಲು ಸಾಧ್ಯವಿಲ್ಲ. ಯಾಕಂದ್ರೆ ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಗೌಪ್ಯವಾಗಿದೆ. ಅದನ್ನು ಸದ್ಯಕ್ಕಂತೂ ರಷ್ಯಾ ಸರ್ಕಾರ ಹಸ್ತಾಂತರ ಮಾಡೋದಿಲ್ಲ ಅಂತ ಕೂಡ ಗುಟ್​ಸಾಲ್ಯುಕ್ ಅಭಿಪ್ರಾಯಪಟ್ಟಿದ್ದಾರೆ. ಯಾಕಂದ್ರೆ 2014ರಲ್ಲಿ ರಷ್ಯಾ ಯುಕ್ರೇನ್​ನಿಂದ ಕ್ರಿಮಿಯಾವನ್ನು ವಶಕ್ಕೆ ಪಡೆದ ಬಳಿಕ ಉಭಯ ದೇಶಗಳ ಸಂಬಂಧ ಹದಗೆಟ್ಟಿದೆ. ಅಂದಹಾಗೆ ಇದೇನೂ ಹೊಸತಲ್ಲ. ಯುಕ್ರೇನ್​ನಲ್ಲಿ ಈ ಹಿಂದೆಯೂ ಇಂಥಹ ಹಲವು ಸಮಾಧಿಗಳು ಪತ್ತೆಯಾಗಿದ್ದವು. ಇದನ್ನ ಅರ್ಥ ಮಾಡ್ಕೋಬೇಕಾದ್ರೆ ಸ್ವಲ್ಪ ಇತಿಹಾಸ ಕೆದಕಬೇಕಾಗುತ್ತೆ. 1917ರಲ್ಲಿ ರಷ್ಯಾ ಕ್ರಾಂತಿಯಾದ ಬಳಿಕ ಸ್ಥಾಪನೆಯಾದ ಸೋವಿಯತ್ ಒಕ್ಕೂಟದಲ್ಲಿ ಯುಕ್ರೇನ್ ಸೇರಿತ್ತು. 1925ರಲ್ಲಿ ಸೋವಿಯತ್ ಯೂನಿಯನ್ ಅಧ್ಯಕ್ಷರಾದ ಸ್ಟಾಲಿನ್ ಸರ್ವಾಧಿಕಾರಿ ಧೋರಣೆ ಬೆಳೆಸಿಕೊಂಡ್ರು. ಉತ್ಪಾದನೆಗೆ ಹೆಸರುವಾಸಿಯಾಗಿದ್ದ ಯುಕ್ರೇನ್​ನಲ್ಲಿ ರಷ್ಯನ್ನರೇ ಇರಬೇಕು ಅನ್ನೋದು ಅವರ ಉದ್ದೇಶವಾಗಿತ್ತು. ಹೀಗಾಗಿ ಅಲ್ಲಿಗೆ ಅಲ್ಲಿಗೆ ಹೆಚ್ಚೆಚ್ಚು ರಷ್ಯನ್ನರು ಕಳುಹಿಸಿದ್ರು. 1932-33ರಲ್ಲಿ ಯುಕ್ರೇನ್​​ನಲ್ಲಿ ಕೃತಕ ಬರಗಾಲ ಸೃಷ್ಟಿಸಿ ಹತ್ತತ್ರ 50 ಲಕ್ಷ ಜನರ ಸಾವಿಗೆ ಕಾರಣವಾದ್ರು. ಸ್ಟಾಲಿನ್ ರಚಿಸಿದ್ದ ಎನ್​​ಕೆವಿಡಿ ಅನ್ನೋ ಸೀಕ್ರೆಟ್ ಪೊಲೀಸ್ ಪಡೆ, ಲಕ್ಷಾಂತರ ಜನ ಯುಕ್ರೇನಿಯರನ್ನು ಹತ್ಯೆ ಮಾಡಿತ್ತು.

-masthmagaa.com

Contact Us for Advertisement

Leave a Reply