ವಿಶ್ವಾಸಮತಕ್ಕೂ ಮುನ್ನ ಕಮಲ್​ನಾಥ್​ ರಾಜೀನಾಮೆ.. ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ ಪತನ..!

masthmagaa.com:

ಮಧ್ಯಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್​ನಾಥ್ ರಾಜೀನಾಮೆ ನೀಡಿದ್ದು, ಈ ಮೂಲಕ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ. ಇತ್ತೀಚೆಗೆ 6 ಸಚಿವರು ಸೇರಿದಂತೆ ಒಟ್ಟು 22 ಮಂದಿ ಶಾಸಕರು ರಾಜೀನಾಮೆ ನೀಡಿದ್ದರಿಂದ ಕಮಲ್​ನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು. ಈ ಪೈಕಿ 6 ಜನರ ರಾಜೀನಾಮೆ ಅಂಗೀಕಾರ ಮಾಡಿದ್ದ ಸ್ಪೀಕರ್ ಉಳಿದ 16 ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ನೀತಿ ಅನುಸರಿಸುತ್ತಿದ್ದರು. ಈ ನಡುವೆ ಬಂಡಾಯ ಶಾಸಕರು ತಮ್ಮ ಜೊತೆಗೆ ಇದ್ದಾರೆ ಅಂತಾನೇ ಕಮಲ್​ನಾಥ್ ಹೇಳುತ್ತಾ ಬಂದಿದ್ದರು.

ಆದ್ರೆ ಶುಕ್ರವಾರ ಸಂಜೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಇದರ ಬೆನ್ನಲ್ಲೇ ಉಳಿದ 16 ಬಂಡಾಯ ಶಾಸಕರ ರಾಜೀನಾಮೆಯನ್ನ ಅಂಗೀಕರಿಸಿರುವುದಾಗಿ ವಿಧಾನಸಭೆ ಸ್ಪೀಕರ್ ಎನ್‌.ಪಿ. ಪ್ರಜಾಪತಿ ಶುಕ್ರವಾರ ಬೆಳಗ್ಗೆ ಘೋಷಿಸಿದ್ದರು. ಇದರೊಂದಿಗೆ ಪಕ್ಷದ ಒಟ್ಟು 22 ಶಾಸಕರ ರಾಜೀನಾಮೆ ಅಂಗೀಕಾರವಾದಂತಾಯಿತು. ಸರ್ಕಾರ ಅಲ್ಪಮತಕ್ಕೆ ಕುಸಿದ ಪರಿಣಾಮ ಕಮಲ್​ನಾಥ್​ ರಾಜೀನಾಮೆ ನೀಡುವುದು ಅನಿವಾರ್ಯವಾಯಿತು.

ರಾಜೀನಾಮೆ ನಿರ್ಧಾರ ಪ್ರಕಟಿಸುವುದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಕಮಲ್​ನಾಥ್ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ರು. ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಿದ ಮೊದಲ ದಿನದಿಂದಲೂ ಬಿಜೆಪಿ ನಮ್ಮ ವಿರುದ್ಧ ಸಂಚು ಹೂಡಿದೆ. ರಾಜ್ಯದ ಜನರಿಗೆ ಬಿಜೆಪಿ ದ್ರೋಹ ಬಗೆದಿದೆ ಅಂತ ಆರೋಪ ಮಾಡಿದ್ರು.

ಕಾಂಗ್ರೆಸ್ ಸರ್ಕಾರ ಪತನವಾಗಿರೋದ್ರಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ. ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತೊಮ್ಮೆ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಲು ವೇದಿಕೆ ಸಿದ್ಧವಾಗಿದೆ.

-masthmagaa.com

Contact Us for Advertisement

Leave a Reply