“ಕನ್ನಡತಿ” ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ವಿಶೇಷ ಸಂದರ್ಶನ!!

masthmagaa.com:

“ಕನ್ನಡತಿ” ಧಾರಾವಾಹಿಯ ಮೂಲಕ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿರುವ ರಂಜನಿ ರಾಘವನ್ ಅವರು ನಟನೆ, ನೃತ್ಯ, ಸಂಗೀತ, ಸಾಹಿತ್ಯ ಜ್ಞಾನ, ಓದು, ಬರವಣಿಗೆ, ಸ್ಕ್ರೀನ್ ಪ್ಲೇ ರೈಟಿಂಗ್ ಜೊತೆಗೆ ನಿರ್ದೇಶನದ ಕಡೆಗೂ ಒಲವಿರುವ ಬಹುಮುಖಿ ವ್ಯಕ್ತಿತ್ವ. ಚಿತ್ರರಂಗದಲ್ಲಿ ಬದುಕು ಕಂಡುಕೊಳ್ಳಬೇಕು ಎಂಬ ಆಸೆ ಇದ್ದವರು ಕೇವಲ ನಟನೆ, ಅಥವಾ ಬರೀ ಹಾಡುಗಾರಿಕೆ, ಅಥವಾ ಬರೀ ನಿರ್ದೇಶನ ಹೀಗೆ ಒಂದೇ ಕ್ಷೇತ್ರದಲ್ಲಿ ತೊಡಗಿಕೊಂಡರೆ ಹೆಚ್ಚು validity ಇರುವುದಿಲ್ಲ. ಇದು ಎಲ್ಲ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಹಾಗಾಗಿ ನೆಚ್ಚಿನ ಕ್ಷೇತ್ರದಲ್ಲಿ ಬಹುಕಾಲ ಉಳಿಯಬೇಕಾದರೆ ಆ ಕ್ಷೇತ್ರಕ್ಕೆ ಸಂಬಂಧಪಟ್ಟ ಬೇರೆ ಬೇರೆ ವಿಚಾರಗಳಲ್ಲೂ ಪರಿಣತಿ ಹೊಂದುವುದು ಅತ್ಯಗತ್ಯ ಎನ್ನುವುದು ರಂಜನಿ ಅಭಿಮತ. ರಂಜನಿ ರಾಘವನ್ ಅವರು ತಮ್ಮ ಹುಟ್ಟು ಹಬ್ಬದ ದಿನ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಹೊಸ ಚಿತ್ರಗಳ ಬಗ್ಗೆ, ನಿರ್ದೇಶನ ಮಾಡುವ ಹಂಬಲದ ಬಗ್ಗೆ ಹಾಗೂ ತಮ್ಮ ಮುಂದಿನ ಯೋಜನೆಗಳ ಬಗ್ಗೆ masthmagaa.com ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.

ಪ್ರ: ನಿಮ್ಮ ಮುಂದೆ ಎರಡು ಪ್ರಶ್ನೆಗಳಿವೆ ಒಂದು, ಹರ್ಷ ಮತ್ತು ಭುವನೇಶ್ವರಿ ಅವರು ಯಾವಾಗ ಒಂದಾಗುತ್ತಾರೆ?? ಎರಡು, ರತ್ನಮಾಲಾ ಅವರು ನಿಮ್ಮ ಹೆಸರಿಗೆ ವಿಲ್ ಬರೆದಿರೋದು ಯಾವಾಗ ಗೊತ್ತಾಗುತ್ತೆ!?

ಉ: ಈ ಎರಡು ಪ್ರಶ್ನೆಗೂ ನನ್ನಲ್ಲಿ ಉತ್ತರವಿಲ್ಲ, ಎಲ್ಲವೂ ಈಗಲೇ ಗೊತ್ತಾದ್ರೆ ಮತ್ತೆ ಜನಗಳಿಗೆ ಧಾರಾವಾಹಿ ನೋಡುವ ಕುತೂಹಲವೇ ಇರುವುದಿಲ್ಲ. ನೀವು ಈ ಪ್ರಶ್ನೆನಾ ನಮ್ಮ ಡೈರೆಕ್ಟರ್ ಮತ್ತೆ ಬರಹಗಾರರನ್ನ ಕೇಳೋದೇ ಉತ್ತಮ.

ಪ್ರ: ನೀವು ನಿಮ್ಮ ಪ್ರೀತಿ ಹೇಳಿಕೊಳ್ಳುವ ಮೊದಲೇ ವರುಧಿನಿ ಹರ್ಷ ಅವರನ್ನ ಹಾರಿಸಿಕೊಂಡು ಹೋಗುತ್ತಾರೆ ಎಂಬ ಆತಂಕ ಪ್ರೇಕ್ಷಕರಿಗಿದೆ, ಇದಕ್ಕೆ ನಿಮ್ಮ ಉತ್ತರವೇನು!?

ಉ: ವರುಧಿನಿಗೆ ಹರ್ಷನ ಕಂಡರೆ ಇಷ್ಟ, ಹಾಗಾಗಿ ಹರ್ಷ ಅವಳಿಗೆ ದಕ್ಕಬೇಕು ಎಂದೆಲ್ಲ ನಾನೀಗ ಹೇಳಿದರೆ ತುಂಬಾ ನಾಟಕೀಯ ಎನಿಸುತ್ತದೆ, ಅದಲ್ಲದೇ ಜನ ನನಗೆ ಬೈತಾರೆ ಅಷ್ಟೇ. ಇದರ ಬಗ್ಗೆ ಏನು ಹೇಳಬೇಕು ಎಂಬುದೇ ಹೊಳೆಯುತ್ತಿಲ್ಲ, ಇದೆಲ್ಲ ಪ್ರಶ್ನೆಗಳಿಗೂ ಮುಂದಿನ ಎಪಿಸೋಡ್ ಗಳಲ್ಲಿ ನಿಮಗೆ ಉತ್ತರ ಸಿಗುತ್ತದೆ ಎಂದಷ್ಟೇ ಹೇಳಬಲ್ಲೆ.

ಪ್ರ: ವ್ಯಕ್ತಿಗತವಾಗಿ ನಿಮ್ಮನ್ನು ನೀವು ಅಂತರ್ಮುಖಿಯೋ ಅಥವಾ ಬಹಿರ್ಮುಖಿಯೋ?

ಉ: ಬಹುಶಃ ಸಂದರ್ಭಕ್ಕೆ ತಕ್ಕಂತೆ ನನ್ನ ವರ್ತನೆ ಇರುತ್ತದೆ. ಕೆಲವು ಸನ್ನಿವೇಶಗಳಲ್ಲಿ ಮೌನವಾಗಿದ್ದರೆ ಒಳ್ಳೆಯದು, ಕೆಲವು ಬಾರಿ ಮಾತನಾಡಿದರೆ ಸೂಕ್ತ. ಹೀಗೆ ಸಂದರ್ಭಾನುಸಾರ ನನ್ನ ವರ್ತನೆ ಬದಲಾಗುತ್ತದೆ ಎನ್ನಬಹುದು.

ಪ್ರ: ನಿರ್ದೇಶಕಿಯಾಗುವ ಮನಸ್ಸಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಿರಿ, ನಿರ್ದೇಶನದ ಬಗೆಗಿನ ನಿಮ್ಮ ಒಲವಿಗೆ ಕಾರಣ?

ಉ: ಧಾರಾವಾಹಿಯಲ್ಲಿ ಅಭಿನಯಿಸುವಾಗ ಒಂದು ರೀತಿ ಏಕತಾನತೆ ಕಾಡುವುದು ಸಾಮಾನ್ಯ. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾನು ಸ್ಕ್ರೀನ್ ಪ್ಲೇ, ಬರವಣಿಗೆ ನಿರ್ದೇಶನ, ಇವುಗಳ ಬಗೆಗೆ ಹಂತ ಹಂತವಾಗಿ ಗಮನ ಹರಿಸುತ್ತಿದ್ದೆ. ಜೊತೆಗೆ ನನ್ನ ತಂದೆಯವರು ಚಿಕ್ಕಂದಿನಿಂದಲೂ ನನಗೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿದ್ದಾರೆ, ಹಾಗಾಗಿ ನಿರಂತರ ಓದಿನಿಂದ ಬರವಣಿಗೆಯ ಬಗೆಗೆ ಸಹ ಆಸಕ್ತಿ ಹೆಚ್ಚಾಯಿತು, ಹಾಗೆ ಈಗ ಸ್ಕ್ರೀನ್ ಪ್ಲೇ ಬರೆಯುವುದರಲ್ಲಿ ಆಸಕ್ತಿ ಹುಟ್ಟಿದೆ. ಅದಲ್ಲದೇ
ಪುಟ್ಟ ಗೌರಿ ಧಾರಾವಾಹಿಯಲ್ಲಿ ನಟಿಸುವಾಗ ನಿರ್ದೇಶಕ ನಾಗೇಶ್ ಮಯ್ಯ ಅವರು ಕೆಲವು ಸೀನ್ ಗಳನ್ನ ನಿರ್ದೇಶಿಸಲು ಅವಕಾಶ ಮಾಡಿಕೊಡುತ್ತಿದ್ದರು, ಅದನ್ನು ನಾನು ಬಹಳ ಎಂಜಾಯ್ ಮಾಡುತ್ತಿದ್ದೆ. ಬಹುಶಃ ನಿರ್ದೇಶನದ ಬಗ್ಗೆ ನನಗೆ ಆಸಕ್ತಿ ಹುಟ್ಟಲಿಕ್ಕೇ ಇದೆ ಕಾರಣವಿರಬಹುದು.

ಪ್ರ: “ಕನ್ನಡತಿ” ಧಾರಾವಾಹಿ ಇಷ್ಟರ ಮಟ್ಟಿಗೆ ಯಶಸ್ಸು ಕಾಣಲಿಕ್ಕೆ ಮುಖ್ಯ ಕಾರಣ ಏನಿರಬಹುದು?

ಉ: ಈ ಧಾರಾವಾಹಿಯ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ನಿರ್ದೇಶಕರು, ಬರಹಗಾರರು ಮತ್ತು ಇಡೀ ತಂತ್ರಜ್ಞರಿಗೆ ಸಲ್ಲುತ್ತದೆ. ಒಂದು ಸೂಕ್ಷ್ಮವಾದ ಕಥೆಯನ್ನ ವಿಶೇಷ ಅಭಿರುಚಿಯ ಧಾರಾವಾಹಿಯನ್ನಾಗಿಸುವುದು ಒಂದು ಸವಾಲೇ ಸರಿ. ಅದನ್ನ ಸಮರ್ಥವಾಗಿ ನಿಭಾಯಿಸಿ ಸಾಮಾನ್ಯವಾಗಿ ಕಾಣಸಿಗುವ ಧಾರಾವಾಹಿಗಳಿಗಿಂತ ವಿಭಿನ್ನವಾದ ಪ್ರಯತ್ನ ಎಂದು ಪ್ರೇಕ್ಷಕರು ಹೇಳುತ್ತಿರುವುದು ಎಲ್ಲಿಲ್ಲದ ಖುಷಿ ಕೊಟ್ಟಿದೆ.

ಪ್ರ: ಮೊದಲ ಚಿತ್ರ “ರಾಜಹಂಸ” ತಕ್ಕಮಟ್ಟಿನ ಯಶಸ್ಸು ತಂದುಕೊಟ್ಟಿತು, ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೇಳಿ?

ಉ: “ಟಕ್ಕರ್” ಸಿನಿಮಾ ಬಿಡುಗಡೆಗೆ ತಯಾರಿದೆ, ಚಿತ್ರಕ್ಕೆ ರಘು ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ, ಮನೋಜ್ ಕುಮಾರ್ ಚಿತ್ರದ ನಾಯಕ. ಚಿತ್ರ 2020 ರ ಮಾರ್ಚ್ ನಲ್ಲೇ ಬಿಡುಗಡೆಯಾಗಬೇಕಿತ್ತು, ಆದರೆ ಲಾಕಡೌನ್ ಆದ ಕಾರಣ ಆಗಲಿಲ್ಲ, ಈಗ ಬಿಡುಗಡೆ ಕುರಿತಾದ ಮಾತುಕತೆ ನಡೆಯುತ್ತಿದೆ. ಅದು ಬಿಟ್ಟರೆ ದಿಗಂತ್ ಅವರ ಜೊತೆ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರ ಮಾಡ್ತಾ ಇದ್ದೀನಿ, ಅದರಲ್ಲಿ ದಿಗಂತ್ ನನಗೆ ಅತ್ತೆಯ ಮಗ ಆಗಿರುತ್ತಾರೆ. ನನ್ನದು ಒಂದು ಸರಳವಾದ ಹಳ್ಳಿ ಹುಡುಗಿಯ ಪಾತ್ರ, ಹಾಗೆ ಐಂದ್ರಿತಾ ರೇ ಅವರದು ಮಾಡರ್ನ್ ಸಿಟಿ ಹುಡುಗಿ ಪಾತ್ರ. ಒಂದು ಫೀಲ್ ಗುಡ್ ಸಿನಿಮಾ ಆಗುವ ಎಲ್ಲ ಲಕ್ಷಣ ಇರುವ ಈ ಚಿತ್ರ ನನ್ನ ವೃತ್ತಿ ಬದುಕಿನಲ್ಲಿ ನನಗೆ ಒಳ್ಳೆ ಹೆಸರು ತಂದುಕೊಡಲಿದೆ ಎಂಬ ನಂಬಿಕೆ ಇದೆ. ಅದಾದ ನಂತರ “ಆದ್ದರಿಂದ” ಎಂಬ ಅಂತೋಲಜಿ ಚಿತ್ರದಲ್ಲಿ ನಟಿಸುತ್ತಿದ್ದೇನೆ, ಈ ಚಿತ್ರದಲ್ಲಿ ನಾಲ್ಕು ಬೇರೆ ಬೇರೆ ಕಥೆಗಳಿರುತ್ತವೆ, ಒಂದು ಕಥೆಯಲ್ಲಿ ನಾನು ಮತ್ತು ನಟ ರಿಷಿ ಒಟ್ಟಾಗಿ ನಟಿಸುತ್ತಿದ್ದೇವೆ, ಈ ಕಥೆಗೆ ಬೆಲ್ ಬಾಟಮ್ ಚಿತ್ರದ ನಿರ್ದೇಶಕ ಜಯತೀರ್ಥ ಅವರು ನಿರ್ದೇಶನ ಮಾಡುತ್ತಿದ್ದಾರೆ. ಯೋಗರಾಜ್ ಭಟ್, ಜಯತೀರ್ಥ, ಆ ದಿನಗಳು ಚೇತನ್, ಶಶಾಂಕ್, ಲೂಸಿಯಾ ಪವನ್ ಈ ಐದು ಜನ ದಿಗ್ಗಜ ನಿರ್ದೇಶಕರುಗಳು ಈ ಆಂತೋಲಜಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಭಾಗವಾಗಿರುವುದು ಕೂಡ ನನಗೆ ಹೆಮ್ಮೆಯ ವಿಷಯ.

-masthmagaa.com

Contact Us for Advertisement

Leave a Reply