ಹೆಚ್ಚಾಗ್ತಿರೋ ಕೋವಿಡ್‌ ಕೇಸ್‌ಗಳು: ಸರ್ಕಾರದಿಂದ ಉನ್ನತ ಮಟ್ಟದ ಸಭೆ

masthmagaa.com:

ರಾಜ್ಯದಲ್ಲಿ ಕೋವಿಡ್‌ 19 ಪ್ರಕರಣಗಳು ಜಾಸ್ತಿಯಾಗ್ತಿರೋ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮೂವರು ಸೋಂಕಿಗೆ ಬಲಿಯಾಗಿದ್ದು, ರಾಜ್ಯದ 92 ಸಕ್ರಿಯ ಪ್ರಕರಣಗಳ ಪೈಕಿ 80 ಬೆಂಗಳೂರಿನಲ್ಲೇ ದಾಖಲಾಗಿವೆ. ಹೀಗಾಗಿ ಮುಂಜಾಗ್ರತಾ ಕ್ರಮಗಳ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಾಗಿದೆ. ಈ ವೇಳೆ ಮಾತನಾಡಿರೋ ಸಿದ್ಧರಾಮಯ್ಯ, ʻಜನರು ಆತಂಕ ಪಡೋ ಅಗತ್ಯ ಇಲ್ಲ. ಮುಂಜಾಗ್ರತಾ ಕ್ರಮ ತಗೊಳ್ಬೇಕು ಅಷ್ಟೇ. ಮುಖ್ಯವಾಗಿ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಯಾವುದಕ್ಕೂ ಕೊರತೆ ಬರ್ದೇ ಇರೋ ತರ ನೋಡ್ಕೊಳ್ಬೇಕು. ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನ ಫಾಲೋ ಮಾಡ್ಬೇಕು. ಎಲ್ರೂ ಜವಾಬ್ದಾರಿ ಅರಿತು ಕೆಲಸ ಮಾಡ್ಬೇಕುʼ ಅಂದಿದ್ದಾರೆ. ಅಲ್ಲದೆ ಕೋವಿಡ್‌ ನಿರ್ವಹಣೆ ಕೆಲಸ ಟ್ರಾನ್ಸ್‌ಪರೆಂಟಾಗಿ ಇರ್ಲಿ ಅಂತ ಕ್ಯಾಬಿನೆಟ್‌ ಉಪಸಮಿತಿ ರಚನೆ ಮಾಡ್ತೀವಿ ಅಂತ ಸಿಎಂ ಹೇಳಿದ್ದಾರೆ. ಇನ್ನುಳಿದಂತೆ ಮಾಸ್ಕ್‌ ಬಳಸೋದು, ಕ್ರೌಡೆಡ್‌ ಜಾಗಗಳಿಗೆ ಹೋಗೊದನ್ನ ಅವಾಯ್ಡ್‌ ಮಾಡೋದು, ಮುಂತಾದ ಕ್ರಮಗಳ ಬಗ್ಗೆ ಸಿದ್ಧರಾಮಯ್ಯ ಮಾತನಾಡಿದ್ದಾರೆ. ಇದೇ ವೇಳೆ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಎರಡು ದಿನಗಳಿಂದ 30 ಕೇಸ್‌ಗಳು ವರದಿಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೆ 1,500 ಮಂದಿಯನ್ನು ಪರೀಕ್ಷೆಗೆ ಒಳಪಡಿಸೋಕೆ ಆರೋಗ್ಯ ಇಲಾಖೆ ಸಜ್ಜಾಗಿದೆ. ಕೇಸ್‌ಗಳ ಸಂಖ್ಯೆ ಜನವರಿ ಮೊದಲ ವಾರದಿಂದ ಹೆಚ್ಚಾಗೊ ಸಂಭವವಿದ್ದು, ಫೆಬ್ರವರಿ ಕೊನೆ ವಾರದ ವೇಳೆಗೆ ಕಡಿಮೆ ಆಗಲಿವೆ ಅಂತ ವಿಶ್ಲೇಷಿಸಲಾಗ್ತಿದೆ. ಕರ್ನಾಟಕದಲ್ಲಿನ ಪ್ರಾಥಮಿಕ ಹಾಗೂ ಪೌಢಶಾಲೆಗಳಿಗೆ ಮುನ್ನೆಚ್ಚರಿಕಾ ಕ್ರಮ ತಗೊಳ್ಳೋಕೆ ಸಲಹೆ ನೀಡಲಾಗಿದೆ. ಆರೋಗ್ಯ ಸರಿಯಿಲ್ಲದ ಮಕ್ಕಳು ತರಗತಿಗೆ ಬರದಂತೆ ಕ್ರಮ ತಗೊಳ್ಬೇಕು, ಕಡ್ಡಾಯವಾಗಿ ಪ್ರತಿ ವಿದ್ಯಾರ್ಥಿಯ ಟೆಂಪರೇಚರ್‌ ಚೆಕ್‌ ಮಾಡಿ, ಮಾಸ್ಕ್‌ ಇದ್ದರಷ್ಟೇ ಒಳಗೆ ಬಿಡಬೇಕು, ಶಾಲಾ ಆವರಣವನ್ನ ಸ್ಯಾನಿಟೈಸ್‌ ಮಾಡ್ಬೇಕು ಅಂತ ಆದೇಶ ನೀಡಲಾಗಿದೆ. ಇತ್ತ ದೇಶದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 2,669ಕ್ಕೆ ಏರಿದೆ. ಗುರುವಾರ ಒಂದೇ ದಿನ 594 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ವಾರಗಳಿಂದ ಕೊರೊನಾಗೆ ಸಂಬಂಧಿಸಿದ 23 ಸಾವುಗಳು ವರದಿಯಾಗಿವೆ.

-masthmagaa.com

Contact Us for Advertisement

Leave a Reply