ರಾಜ್ಯದಲ್ಲಿ ಧಾರಾಕಾರ ಮಳೆ! ಹಲವು ರಾಜ್ಯಗಳಿಗೆ ಆರೇಂಜ್‌ ಹಾಗೂ ಯಲ್ಲೋ ಅಲರ್ಟ್‌!

masthmagaa.com:

ರಾಜ್ಯದ ಹಲವೆಡೆ ಇಂದು ಭಾರಿ ಮಳೆಯಾಗಿದೆ. ಅದ್ರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗ್ತಿದೆ. ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಡಕಣಿ ಎಂಬಲ್ಲಿ ಅತ್ಯಧಿಕ 342 ಮಿಲಿ ಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸುತ್ತಿರುವ ಮಳೆಗೆ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಸೇರಿದಂತೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮಳೆಯ ಕಾರಣ ಜಿಲ್ಲೆಯಲ್ಲಿ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಉಡುಪಿಯ ಬೈಂದೂರು ತಾಲೂಕಿನ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ಬಂದಿದ್ದ ಯುವಕ ಜಾರಿಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಈತನನ್ನ ಭದ್ರಾವತಿ ಮೂಲದ ಶರತ್‌ ಕುಮಾರ್‌ ಅಂತ ಗುರುತಿಸಲಾಗಿದೆ. ಬಂಡೆಯ ತುದಿಯಲ್ಲಿ ನಿಂತು ರೀಲ್ಸ್ ಮಾಡೋಕೆ ವಿಡಿಯೋ ಮಾಡಿಸಿಕೊಳ್ಳುವ ಸಾಹಸಕ್ಕೆ ಮುಂದಾಗಿದ್ದ ಯುವಕ ನೋಡ್ತಿದ್ದಂತೆ ಕಾಲು ಜಾರಿ, ನೀರುಪಾಲಾಗಿದ್ದಾನೆ. ಯುವಕನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಇನ್ನು ಮಂಗಳೂರಿನಲ್ಲೂ ಭಾರಿ ಮಳೆಯಾಗಿದ್ದು, ಜಿಲ್ಲೆಯ ಪ್ರಸಿದ್ಧ ದೇಗುಲ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತರು ಕುಮಾರಧಾರಾ ನದಿಯ ಸ್ನಾನಘಟ್ಟಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ನದಿಗೆ ಒಳಹರಿವು ಹೆಚ್ಚಳವಾಗಿದೆ. ಕೊಯ್ನಾ ಜಲಾಶಯ ಪ್ರದೇಶದಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಕೊಯ್ನಾ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೊಯ್ನಾ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆ ಕೃಷ್ಣಾ ನದಿಗೆ 1.14 ಲಕ್ಷ ಕ್ಯೂಸೆಕ್‌ಕ್ಕಿಂತ ಹೆಚ್ಚು ನೀರು ಬಿಡಲಾಗುತ್ತಿದೆ. ಇನ್ನು ನೆರೆಯ ರಾಜ್ಯ ಕೇರಳದಲ್ಲೂ ವರುಣನ ಆರ್ಭಟ ಜೋರಾಗಿದ್ದು, ನಿನ್ನೆ ಸುರಿದ ಮಳೆಗೆ 3 ಜನ ಸಾವನ್ನಪ್ಪಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply