ಕಾಂಗ್ರೆಸ್‌ನ ʻಗೃಹಲಕ್ಷ್ಮಿʼ ಯೋಜನೆ ಜಾರಿ! ಮನೆ ಯಜಮಾನಿ ಅಕೌಂಟ್‌ಗೆ ಬಂತು ₹2000

masthmagaa.com:

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ʻಗೃಹಲಕ್ಷ್ಮಿʼ ಯೋಜನೆಗೆ ಇಂದು ಅದ್ದೂರಿ ಚಾಲನೆ ದೊರೆತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಿಜಿಟಲ್ ಬಟನ್ ಒತ್ತುವ ಮೂಲಕ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ರಿಜಿಸ್ಟರ್‌ ಮಾಡಿಕೊಂಡಿರುವ ಮನೆಯ ಯಜಮಾನಿಯರ ಖಾತೆಗೆ 2 ಸಾವಿರ ರೂಪಾಯಿ ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ 100 ದಿನ ಪೂರೈಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು 100 ದಿನಗಳ ಸಾಧನೆ ಕುರಿತ ಪುಸ್ತಕವನ್ನ ರಿಲೀಸ್‌ ಮಾಡಿದ್ದಾರೆ. ಬಳಿಕ ಮಾತಾಡಿರುವ ರಾಹುಲ್‌, ನಾನಿವತ್ತು ತುಂಬಾ ಖುಷಿಯಾಗಿದ್ದೇನೆ. ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದೆ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ನನ್ನ ತಂಗಿ ಇವತ್ತು ನನಗೆ ರಾಖಿ ಕಟ್ಟಿದ್ದಾಳೆ. ಈ ಶುಭ ದಿನದ ವೇಳೆ ನಾವು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದೇವೆ. ಮನೆಯ ಯಜಮಾನಿ ಮಹಿಳೆಯರ ಖಾತೆಗೆ 2 ಸಾವಿರ ಹಣ ಜಮೆ ಮಾಡಿದ್ದೇವೆ ಅಂತ ಹೇಳಿದ್ದಾರೆ. ಇದೇ ವೇಳೆ ಮಾತಾಡಿರುವ ಸಿಎಂ ಸಿದ್ದರಾಮಯ್ಯ 1.10 ಕೋಟಿ ಫಲಾನುಭವಿಗಳ ಅಕೌಂಟ್‌ಗೆ ತಲಾ 2 ಸಾವಿರ ರೂಪಾಯಿ ಜಮೆ ಮಾಡಲಾಗುವುದು ಅಂತ ತಿಳಿಸಿದ್ದಾರೆ. ಇನ್ನು ಇದೇ ಕಾರ್ಯಕ್ರಮವನ್ನ ಉದ್ಧೇಶಿಸಿ ಮಾತಾಡಿರೋ ಮಲ್ಲಿಕಾರ್ಜುನ್‌ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದಾರೆ. 50 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತ ಕೇಂದ್ರ ನಾಯಕರು ಕೇಳ್ತಾರೆ. ಆದರೆ, ನಾವು ವಿಮಾನ ನಿಲ್ದಾಣ ಹಾಗೂ ಅನೇಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದೇವೆ. ನಾವು ಕಟ್ಟಿರೊ ಸಂಸ್ಥೆಗಳಿಗೆ ಸುಣ್ಣ ಬಣ್ಣ ಹೊಡೆದು ಉದ್ಘಾಟನೆ ಮಾಡೋದು ಮೋದಿ ಕೆಲಸ. ನಮ್ಮ ಬಳಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಅನ್ನೊ ರಿಪೋರ್ಟ್ ಕಾರ್ಡ್ ಇದೆ ಅಂತ ಹೇಳಿದ್ದಾರೆ. ಜೊತೆಗೆ ಇಲ್ಲಿ ಮೋದಿ ಅಂತ ಹೇಳಿದರೆ ಕೇಸ್ ಹಾಕ್ತಾರೆ. ಮೋದಿ ಎಂದಿದಕ್ಕೆ ರಾಹುಲ್ ಗಾಂಧಿ ಮೇಲೆ ಕೇಸ್ ಹಾಕಿದ್ರು. ಆದ್ರೆ ರಾಹುಲ್ ಯಾವುದಕ್ಕೂ ಹೆದರಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಪಾದಯಾತ್ರೆ ಮಾಡಿ ರಾಹುಲ್ ಜನರ ಮಾತು ಆಲಿಸಿದ್ದಾರೆ ಅಂತ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply