ʼವಜ್ರಮುನಿʼ ರೆಟ್ರೂ ಲುಕ್‌ ನಲ್ಲಿ ಕೋಮಲ್‌ ಕಮಾಲ್‌….

masthmagaa.com:

ಹಾಸ್ಯಮಯವಾದ ಹಾಗೂ ರೋಚಕವಾದ ಸಿನಿಮಾಗಳಿಂದ ಕನ್ನಡನಾಡಿನ ಜನತೆಯ ಪ್ರೀತಿ ವಾತ್ಸಲ್ಯಗಳಿಸಿರುವ ಸೆನ್ಸೇಷನಲ್‌ ಸ್ಟಾರ್‌ ಕೋಮಲ ಕುಮಾರ್‌ ಅಭಿನಯದ ನೂತನ ಚಿತ್ರದ ʼʼಯಲಾ ಕುನ್ನಿʼʼ ಮೇರಾ ನಾಮ್‌ ವಜ್ರಮುನಿ ಎಂಬ ಶೀರ್ಷಿಕೆ ಇತ್ತೀಚೆಗೆ ಅನಾವರಣವಾಯಿತು.
ಎನ್.‌ ಆರ್‌ ಪ್ರದೀಪ ಅವರ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಆರಂಭವಾಗಲಿದೆ. 1981 ರ ಕಾಲದ ಕಥೆಯಾಗಿದ್ದು, ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನಲ್ಲಿ ಹಳ್ಳಿ ಮತ್ತು ದೇವಸ್ಥಾನದ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುವುದಂತೆ.
ಕನ್ನಡ ಚಿತ್ರರಂಗದ ನೆಗೆಟಿವ್‌ ಪಾತ್ರಗಳಲ್ಲಿ ಅಬ್ಬರಿಸಿದಂತಹ ಖ್ಯಾತ ನಟ ವಜ್ರಮುನಿ ಅವರು ಹೆಚ್ಚು ಬಯ್ಯಲು ಬಳಸುತ್ತಿದ್ದ ಪದ ʼʼಯಲಾ ಕುನ್ನಿʼʼ . ಈ ಪದವನ್ನೇ ಸಿನಿಮಾದ ಶೀರ್ಷಿಕೆಯಾಗಿ ಚಿತ್ರತಂಡ ಬಳಸಿಕೊಂಡಿದೆ. ಇನ್ನೂ ತಾರಾಬಳಗದಲ್ಲಿ, ನವರಸ ನಾಯಕ ಜಗ್ಗೇಶ್‌ ಅವರ ಮಗ ಯತಿರಾಜ್, ಹಿರಿಯ ಕಲಾವಿದ ಮುಸುರಿ ಕೃಷ್ಣ ಮೂರ್ತಿ ಅವರ ಮಗ ಜಯಸಿಂಹ ಮುಸುರಿ ಹಾಗೂ ʼʼಫ್ರೆಂಚ್ ಬಿರಿಯಾನಿʼʼ ಖ್ಯಾತಿಯ ಮಹಾಂತೇಶ್‌ ಮುಂತಾದವರಿದ್ದಾರೆ. ಸೌಭಾಗ್ಯ ಸಿನಿಮಾಸ್‌ನ ಮಹೇಶ್‌ ಗೌಡ್ರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಇನ್ನೂ ಧರ್ಮ ವಿಶ್‌ ಅವರ ಸಂಗೀತ, ದೀಪು ಎಸ್‌ ಕುಮಾರ್‌ ಅವರ ಸಂಕಲನ, ಉದಯ್‌ ಲೀಲಾ ಅವರ ಛಾಯಾಗ್ರಹಣ ಈ ಸಿನಿಮಾಕ್ಕಿರಲಿದೆ.
ಹಾಸ್ಯನಟರಾಗಿ 1992 ರಲ್ಲಿ ʼʼಸುಪರ್‌ ನನ್‌ ಮಗಾʼʼ ಚಿತ್ರದ ಮುಲಕ ಸ್ಯಾಂಡಲ್‌ ವುಡ್‌ಗೆ ಎಂಟ್ರಿ ಕೊಟ್ಟ ಕೋಮಲ ಕುಮಾರ್‌ ಅವರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ʼತವರಿಗೆ ಬಾ ತಂಗಿʼ, ʼಕತ್ತೆಗಳು ಸಾರ್‌ ಕತ್ತೆಗಳುʼ , ʼಗೋವಿಂದಾಯ ನಮಃʼ , ʼ ಪ್ಯಾರ್‌ಗೆ ಆಗ್ಬಿಟೈತೆʼ ಹೀಗೆ ಹಲವಾರು ಚಿತ್ರಗಳ ಮೂಲಕ ಜನಪ್ರಿಯತೆ ಪಡೆದರು. ಇನ್ನೂ 2019 ರ ʼಕೆಂಪೇಗೌಡ್‌ 2ʼ ಚಿತ್ರದ ಬಳಿಕ 3 ವರ್ಷದ ಬ್ರೇಕ್‌ ತೆಗೆದುಕೊಂಡು, ʼʼಯಲಾ ಕುನ್ನಿʼʼ ಮೇರಾ ನಾಮ್‌ ವಜ್ರಮುನಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

-masthmagaa.com

Contact Us for Advertisement

Leave a Reply