ನಾಳೆ ಲಖೀಂಪುರ ಹಿಂಸಾಚಾರದ ವರದಿ ಕೊಡಿ: ಉತ್ತರ ಪ್ರದೇಶಕ್ಕೆ ಸುಪ್ರೀಂಕೋರ್ಟ್​ ಸೂಚನೆ

masthmagaa.com:

ಲಖೀಂಪುರ ಹಿಂಸಾಚಾರ ಪ್ರಕರಣ ಇವತ್ತು ಸುಪ್ರೀಂಕೋರ್ಟ್​​ನಲ್ಲೂ ವಿಚಾರಣೆಗೆ ಬಂತು. ಪ್ರಕರಣ ಸಂಬಂಧ ಯಾರ ವಿರುದ್ಧ ಕೇಸ್ ಹಾಕಿದ್ದೀರಿ..? ಎಷ್ಟು ಮಂದಿಯನ್ನು ಅರೆಸ್ಟ್ ಮಾಡಿದ್ದೀರಿ ಅಂತ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ನಾಳೆಯೇ ಈ ಪ್ರಕರಣದ ಸದ್ಯದ ಬೆಳವಣಿಗೆ ಬಗ್ಗೆ ನಾಳೆಯೇ ರಿಪೋರ್ಟ್​ ಕೊಡಬೇಕು ಅಂತ ಸೂಚಿಸಿದೆ. ಈ ವೇಳೆ ಉತ್ತರಿಸಿದ ಉತ್ತರ ಪ್ರದೇಶ ಸರ್ಕಾರ ಪರ ವಕೀಲರು, ಈಗಾಗಲೇ ಎಫ್​ಐಆರ್ ದಾಖಲಿಸಿದ್ದು, ನಿವೃತ್ತ ಜಡ್ಜ್​​ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತೆ ಅಂತ ಹೇಳಿದ್ದಾರೆ. ಅದ್ರ ಬೆನ್ನಲ್ಲೇ ಉತ್ತರಪ್ರದೇಶ ಸರ್ಕಾರ ಅಲಹಾಬಾದ್ ಹೈಕೋರ್ಟ್ ನಿವೃತ್ತ ಜಡ್ಜ್​ ಪ್ರದೀಪ್ ಕುಮಾರ್ ಶ್ರೀವಾಸ್ತವ್ ನೇತೃತ್ವದ ಏಕಸದಸ್ಯ ಆಯೋಗ ಕೂಡ ರಚಿಸಿದೆ. ಜೊತೆಗೆ 2 ತಿಂಗಳಲ್ಲಿ ವರದಿ ನೀಡುವಂತೆಯೂ ಸೂಚಿಸಿದೆ..

ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಿಯಾಂಕಾ ಗಾಂಧಿ, ತನಿಖೆ ನಿವೃತ್ತ ಜಡ್ಜ್​​ ನೇತೃತ್ವದಲ್ಲಿ ಅಲ್ಲ. ಸುಪ್ರೀಂಕೋರ್ಟ್​ ಅಥವಾ ಹೈಕೋರ್ಟ್​​​ನ ಸಿಟ್ಟಿಂಗ್ ಜಡ್ಜ್​​ ನೇತೃತ್ವದಲ್ಲೇ ನಡೆಯಬೇಕು ಅಂತ ಆಗ್ರಹಿಸಿದ್ದಾರೆ.

ಇನ್ನು ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾರನ್ನು ಅರೆಸ್ಟ್ ಮಾಡದೇ ಇದ್ರೆ, ನಾಳೆಯಿಂದ ಉಪವಾಸ ಸತ್ಯಾಗ್ರಹ ಶುರು ಮಾಡ್ತೀನಿ ಅಂತ ನವಜೋತ್ ಸಿಂಗ್ ಸಿಧು ಘೋಷಿಸಿದ್ದಾರೆ. ಈ ನಡುವೆ ಲಖೀಂಪುರ್​ ಖೇರಿಗೆ ಹೊರಟಿದ್ದ ಅವರನ್ನು ಸಹರನ್​ಪುರದಲ್ಲಿ ವಶಕ್ಕೆ ಪಡೆಯಲಾಗಿದೆ.

ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ಅಜಯ್ ಮಿಶ್ರಾ ಮಗ ಆಶೀಶ್ ಮಿಶ್ರಾಗೆ ಪೊಲೀಸರು ಸಮನ್ಸ್ ನೀಡಿದ್ದಾರೆ. ಈಗಾಗಲೇ 13 ಮಂದಿ ವಿರುದ್ಧ ಕೇಸ್ ದಾಖಲಿಸಿ, ಇಬ್ಬರನ್ನು ಇವತ್ತು ವಿಚಾರಣೆಗೆ ಒಳಪಡಿಸಲಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply