masthmagaa.com:

ಕೊರೋನಾ ಹಾವಳಿಯಿಂದ ತತ್ತರಿಸಿರುವ ಭಾರತಕ್ಕೆ ರಷ್ಯಾದ ಕೊರೋನಾ ಲಸಿಕೆ ಪೂರೈಕೆಯಾಗುವ ದಿನಗಳು ಮತ್ತಷ್ಟು ಹತ್ತಿರವಾದಂತೆ ಕಾಣ್ತಿದೆ. ಇದೀಗ ರಷ್ಯನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್​ ಫಂಡ್ (RDIF) ದೆಹಲಿ ಮೂಲದ ಮ್ಯಾನ್​ಕೈಂಡ್ ಫಾರ್ಮಾ ಜೊತೆ ಒಪ್ಪಂದ ಮಾಡಿಕೊಂಡಿದೆ ಅಂತ ಮೂಲಗಳು ತಿಳಿಸಿವೆ. ಇದರ ಪ್ರಕಾರ ಭಾರತದಲ್ಲಿ ‘ಸ್ಪುತ್ನಿಕ್-V’ ಲಸಿಕೆಯ ಮಾರಾಟ ಮತ್ತು ಪೂರೈಕೆ ಮಾಡಲು ಮ್ಯಾನ್​ಕೈಂಡ್ ಫಾರ್ಮಾಗೆ ಅನುಮತಿ ಸಿಕ್ಕಿದೆ. ಆದ್ರೆ ಈ ಒಪ್ಪಂದ ಎಷ್ಟು ಡೋಸ್​ಗಳಿಗಾಗಿ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ರಷ್ಯಾ ಮತ್ತು ದಕ್ಷಿಣ ಕೊರಿಯಾದ ಲಸಿಕೆ ಉತ್ಪಾದಕ ಕಂಪನಿಗಳ ಜೊತೆ RDIF 5 ಕೋಟಿ ಡೋಸ್​ಗಳ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲೂ ಅನುಮೋದನೆ ಸಿಕ್ಕಿದ ಬಳಿಕ ಮ್ಯಾನ್​ಕೈಂಡ್​ಗೆ ಲಸಿಕೆಯ ಡೋಸ್​ಗಳನ್ನ ಪೂರೈಸಲಾಗುವುದು ಅಂತ ಮೂಲಗಳು ತಿಳಿಸಿವೆ.

ಕಳೆದ ತಿಂಗಳು RDIF ಮತ್ತು ಭಾರತದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಒಪ್ಪಂದ ಮಾಡಿಕೊಂಡಿದ್ದವು. ಇದರ ಪ್ರಕಾರ ಭಾರತದಲ್ಲಿ ರಷ್ಯಾ ಲಸಿಕೆಯ 2 ಮತ್ತು 3ನೇ ಹಂತದ ಮಾನವ ಪ್ರಯೋಗ ನಡೆಸಲು ಮತ್ತು ಅದರ ಪೂರೈಕೆಯ ಜವಾಬ್ದಾರಿಯನ್ನು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಪಡೆದುಕೊಂಡಿತ್ತು. ಈ ಒಪ್ಪಂದದ ಅಡಿಯಲ್ಲಿ ರಷ್ಯಾದ RDIF ಡಾ. ರೆಡ್ಡೀಸ್ ಲ್ಯಾಬೊರೇಟರೀಸ್​ಗೆ 10 ಕೋಟಿ ಡೋಸ್​ಗಳನ್ನು ಪೂರೈಸಲಿದೆ. ಇನ್ನು ರಷ್ಯಾ ಲಸಿಕೆಯ ಮಾನವ ಪ್ರಯೋಗ ನಡೆಸಲು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ (Drug Controller General of India) ಎರಡು ದಿನಗಳ ಹಿಂದಷ್ಟೇ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್​ಗೆ​ ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ ಮ್ಯಾನ್​ಕೈಂಡ್ ಫಾರ್ಮಾ ಜೊತೆಗೂ RDIF ಒಪ್ಪಂದ ಮಾಡಿಕೊಂಡಿರೋದು ಗಮನಾರ್ಹ. ಆದ್ರೆ ಮ್ಯಾನ್​ಕೈಂಡ್ ಫಾರ್ಮಾ ರಷ್ಯಾ ಲಸಿಕೆಯ ಮಾನವ ಪ್ರಯೋಗ ನಡೆಸೋದಿಲ್ಲ. ಕೇವಲ ಮಾರಾಟ ಮತ್ತು ಪೂರೈಕೆ ಮಾಡುತ್ತದೆ.

-masthmagaa.com

Contact Us for Advertisement

Leave a Reply