ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೆಕ್​ಅಫೀ ಸಾಫ್ಟ್​ವೇರ್​ ಸೃಷ್ಟಿಕರ್ತ

masthmagaa.com:

ಮೆಕ್​ಅಫೀ’ ಆ್ಯಂಟಿ ವೈರಸ್​ ಸಾಫ್ಟ್​ವೇರ್​ನ ಸೃಷ್ಟಿಕರ್ತ ಜಾನ್​ ಮೆಕ್​ಅಫೀ ಸ್ಪೇನ್​ನ ಬಾರ್ಸಿಲೋನಾ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 75 ವರ್ಷ ವಯಸ್ಸಾಗಿತ್ತು. ಅಮೆರಿಕದಲ್ಲಿ ತೆರಿಗೆ ವಂಚನೆ ಮಾಡಿದ ಆರೋಪ ಮತ್ತು ಕ್ರಿಪ್ಟೋಕರೆನ್ಸಿಯಲ್ಲಿ ವಂಚನೆ ಮಾಡಿದ ಆರೋಪಗಳು ಇವರ ಮೇಲಿತ್ತು. ಈ ಹಿನ್ನೆಲೆ ತಲೆಮರೆಸಿಕೊಂಡಿದ್ದ ಜಾನ್​ ಮೆಕ್​ಅಫೀಯನ್ನ ಹೋದ್ವರ್ಷ ಸ್ಪೇನ್​ನ ಬಾರ್ಸಿಲೋನಾ ಏರ್​ಪೋರ್ಟ್​ನಲ್ಲಿ ಅರೆಸ್ಟ್ ಮಾಡಲಾಗಿತ್ತು. ಸ್ಪೇನ್​ನಲ್ಲಿ ಅವರ ವಿಚಾರಣೆ ನಡೀತಿತ್ತು. ಇತ್ತೀಚೆಗಷ್ಟೇ ಜಾನ್​ ಮೆಕ್​ಅಫೀಯನ್ನ ಅಮೆರಿಕಕ್ಕೆ ಹಸ್ತಾಂತರ ಮಾಡಲು ಸ್ಪಾನಿಷ್​ ಹೈಕೋರ್ಟ್​ ಆದೇಶ ನೀಡಿತ್ತು. ವಿಚಾರಣೆ ಟೈಮಲ್ಲಿ ಮಾತನಾಡಿದ್ದ ಮೆಕ್​ಅಫೀ, ನಂಗೇನಾದ್ರೂ ಅಮೆರಿಕಕ್ಕೆ ಹಸ್ತಾಂತರ ಮಾಡಿದ್ರೆ ನಾನು ಜೀವನಪೂರ್ತಿ ಜೈಲಿನಲ್ಲೇ ಕಾಲ ಕಳೀಬೇಕಾಗುತ್ತೆ ಅಂತ ಹೇಳಿದ್ದರು. ಸ್ಪೇನ್ ಹೈಕೋರ್ಟ್ ನೀಡಿದ ಆದೇಶವನ್ನ ಪ್ರಶ್ನಿಸಿ ಅರ್ಜಿ ಸಲ್ಲಿಸೋ ಅವಕಾಶ ಜಾನ್​ ಮೆಕ್​ಅಫೀಗೆ ಇತ್ತು. ಆದ್ರೂ ಅವರು ಜೈಲಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಅವರ ಪರ ವಕೀಲರು ತಿಳಿಸಿದ್ದಾರೆ. 2019ರಲ್ಲಿ ಒಮ್ಮೆ ಮಾತನಾಡುವಾಗ ಜಾನ್​ ಮೆಕ್​ಅಫೀ, ಸೈದ್ಧಾಂತಿಕ ಕಾರಣಗಳಿಂದಾಗಿ ಕಳೆದ 8 ವರ್ಷಗಳಿಂದ ತಾನು ತೆರಿಗೆ ಕಟ್ಟಿಲ್ಲ ಅಂತ ಹೇಳಿಕೊಂಡಿದ್ದರು. ಪ್ರಕರಣದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅದೇ ವರ್ಷ ಅಮೆರಿಕದಿಂದ ಪರಾರಿಯಾಗಿದ್ದ ಅವರು ಸಾಕಷ್ಟು ಸಮಯದವರೆಗೆ ಮೆಗಾಯಾಚ್​ನಲ್ಲಿ ತಮ್ಮ ಪತ್ನಿಯೊಂದಿಗೆ ವಾಸವಿದ್ದರು. ಇನ್ನು ಕ್ರಿಪ್ಟೋಕರೆನ್ಸಿ ಬಳಸಿಕೊಂಡು ಅಮೆರಿಕದ ವ್ಯಾಪಾರ ನಿರ್ಬಂಧದಿಂದ ತಪ್ಪಿಸಲು ಕ್ಯೂಬಾಗೆ ಸಹಾಯ ಮಾಡಲು ಮುಂದಾಗಿದ್ರು. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಲಿಬರ್​ಟೇರಿಯನ್​ ಪಾರ್ಟಿಯಿಂದ ಸ್ಪರ್ಧಿಸಲು ಕೂಡ ಮುಂದಾಗಿದ್ದರು ಮೆಕ್​ಅಫೀ. ಒಂದ್ಸಲವಂತೂ ತಾವು 47 ಮಕ್ಕಳಿಗೆ ತಂದೆ ಅಂತಾನೂ ಹೇಳಿಕೊಂಡಿದ್ದರು.
ಅಂದ್ಹಾಗೆ ಜಾನ್​ ಮೆಕ್​ಅಫೀ ಸ್ಥಾಪಿಸಿದ ಮೆಕ್​ಅಫೀ ಆ್ಯಂಟಿ ವೈರಸ್​ ಸಾಫ್ಟ್​ವೇರ್ ಅನ್ನ ಮೊದಲು ಕಮರ್ಷಿಯಲ್ ಆಗಿ ರಿಲೀಸ್ ಮಾಡಿದ್ದು 1987ರಲ್ಲಿ. ಅದಕ್ಕೂ ಮೊದಲು ಈ ಸಾಫ್ಟ್​ವೇರ್​ ಅನ್ನ ನಾಸಾ, ಲಾಕ್​ಹೀಡ್​ ಮಾರ್ಟಿನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬಳಸಿಕೊಳ್ಳಲಾಗಿತ್ತು. 2011ರಲ್ಲಿ ಈ ಕಂಪನಿಯನ್ನ ಇಂಟೆಲ್​ಗೆ ಸೇಲ್​ ಮಾಡಿದ್ರು ಜಾನ್ ಮೆಕ್​ಅಫೀ. ಅಲ್ಲಿಂದ ಇಲ್ಲಿವರೆಗೆ ಅವರಿಗೂ ಈ ಸಾಫ್ಟ್​ವೇರ್​ಗೂ ಯಾವುದೇ ಸಂಬಂಧ ಇಲ್ಲ. ಆದ್ರೆ ಈಗಲೂ ಈ ಆ್ಯಂಟಿವೈರಸ್​ ಸಾಫ್ಟ್​ವೇರ್​ಗೆ ಅವರ ಹೆಸರೇ ಇರೋದು ವಿಶೇಷ. ಜಗತ್ತಿನಾದ್ಯಂತ ಸುಮಾರು 50 ಕೋಟಿ ಜನ ಈ ಮೆಕ್​ಅಫೀ ಆ್ಯಂಟಿ ವೈರಸ್​ ಸಾಫ್ಟ್​ವೇರ್ ಅನ್ನ ಬಳಸುತ್ತಿದ್ದಾರೆ. ಜಾನ್​ ಮೆಕ್​ಅಫೀ ಸಾವಿಗೆ ಸಾವಿರಾರು ಕ್ರಿಪ್ಟೋಕರೆನ್ಸಿ ಬಳಕೆದಾರರು ಸಂತಾಪ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply