ಪಾಕ್ ಬಳಿಕ ಬಾಂಗ್ಲಾದಲ್ಲೂ ಹಿಂದೂಗಳ ಮೇಲೆ ದಾಳಿ!

masthmagaa.com:

ಪಾಕಿಸ್ತಾನ ಬಳಿಕ ಈಗ ಬಾಂಗ್ಲಾದೇಶದಲ್ಲೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆದಿದೆ. ಇಲ್ಲಿನ ಖುಲಾನಾ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಟ್ಟರ್​ಪಂಥಿಗಳು ಒಟ್ಟಾಗಿ ಬಂದು 50ಕ್ಕೂ ಹೆಚ್ಚು ಹಿಂದೂಗಳ ಮನೆ ಧ್ವಂಸಗೊಳಿಸಿದ್ದಾರೆ. ಈ ವೇಳೆ 4 ದೇವಸ್ಥಾನಗಳನ್ನು ಕೂಡ ನಾಶ ಮಾಡಿದ್ದಾರೆ. ಇಲ್ಲಿನ ಸಿಲಾಯಿ ಗ್ರಾಮದಲ್ಲಿ ಹಿಂದೂ ಧರ್ಮೀಯರು ಒಂದು ಧಾರ್ಮಿಕ ಮೆರವಣಿಗೆ ಆಯೋಜಿಸಿದ್ರು. ಆದ್ರೆ ಇದಕ್ಕೆ ಮೌಲ್ವಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಕಟ್ಟರ್​ಪಂಥಿಗಳ ಒಂದು ಗುಂಪು ಹಿಂದೂಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಹಾರೆ, ಕೊಡಲಿ ಹಿಡಿದು ದೇಗುಲಗಳನ್ನು ನಾಶ ಮಾಡಿದ್ದಾರೆ. ದಾಳಿ ನಂತರದ ವಿಡಿಯೋವನ್ನು ಬಾಂಗ್ಲಾದೇಶ್ ಹಿಂದೂ ಯುನಿಟಿ ಕೌನ್ಸಿಲ್ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. ಇದ್ರಲ್ಲಿ ಮನೆಗಳು ಧ್ವಂಸವಾಗಿರೋದು, ದೇಗುಲ ಮತ್ತದರ ವಿಗ್ರಹಗಳಿಗೆ ಹಾನಿಯಾಗಿರೋದನ್ನು ಕಾಣಬಹುದಾಗಿದೆ. ದಾಳಿ ವೇಳೆ ಅಡ್ಡ ಬಂದ ಹಲವು ಹಿಂದೂಗಳಿಗೆ ಗಾಯಗಳಾಗಿವೆ. ಇನ್ನೂ ಕೂಡ ಸ್ಥಳದಲ್ಲಿ ಬೂದಿಮುಚ್ಚಿದ ಕೆಂಡದ ವಾತಾವರಣ ಇದ್ದು, ಘಟನೆ ಸಂಬಂಧ 10 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಮೌಲ್ವಿ, ಹಿಂದು ಧರ್ಮದವರು ಕೀರ್ತನೆ ಹಾಡುತ್ತಾ ಮಸೀದಿ ಮುಂದೆ ಹೋಗ್ತಿದ್ರು. ಈ ವೇಳೆ ಮಸೀದಿಯಲ್ಲಿ ನಮಾಜ್ ಆಗ್ತಿತ್ತು. ಹೀಗಾಗಿ ಕೀರ್ತನೆ ಹಾಡದಂತೆ ಮನವಿ ಮಾಡ್ದೆ. ಆದ್ರೆ ಅವರಲ್ಲಿ ಯಾರೋ ಒಬ್ರು ನನ್ನನ್ನು ತಳ್ಳಿದ್ರು. ಇದ್ರಿಂದ ಗಲಾಟೆಯಾಯ್ತು ಅಂತ ಹೇಳಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಹಿಂದೂ ಸಮುದಾಯ, ನಾವ್ಯಾರೂ ಮೌಲ್ವಿಯನ್ನು ಮುಟ್ಟಿರಲಿಲ್ಲ ಅಂತ ಹೇಳಿದ್ದಾರೆ. ಅಂದಹಾಗೆ 2011ರ ಜನಗಣತಿ ಪ್ರಕಾರ ಬಾಂಗ್ಲಾದೇಶದಲ್ಲಿ 14.90 ಕೋಟಿ ಜನಸಂಖ್ಯೆ ಇದ್ದು, ಅದ್ರಲ್ಲಿ 8.5 ಪರ್ಸೆಂಟ್ ಹಿಂದೂ ಧರ್ಮೀಯರಾಗಿದ್ಧಾರೆ. ಅದ್ರಲ್ಲೂ ಈಗ ದಾಳಿ ನಡೆದಿದ್ಯಲ್ವಾ ಆ ಖುಲಾನಾ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ವಾಸಿಸ್ತಾರೆ. ಅಂದಹಾಗೆ ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಇಂಥ ಘಟನೆಗಳು ಜಾಸ್ತಿಯಾಗ್ತಿವೆ. ಅದಕ್ಕೆ ಹಿಫಾಜತ್ ಎ ಇಸ್ಲಾಂ ಅನ್ನೋ ಸಂಘಟನೆ ಕೂಡ ಕಾರಣವಾಗಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗಲೂ ಭಾರಿ ವಿರೋಧ ವ್ಯಕ್ತವಾಗಿತ್ತು.

-masthmagaa.com

Contact Us for Advertisement

Leave a Reply