ಉತ್ತರ ಪ್ರದೇಶ ಹಿಂಸಾಚಾರದ ಬೆಚ್ಚಿ ಬೀಳಿಸೋ ವಿಡಿಯೋ ಬಹಿರಂಗ!

masthmagaa.com:

ಉತ್ತರ ಪ್ರದೇಶದ ಲಖೀಂಪುರ್ ಖೇರಿಯದ್ದು ಎನ್ನಲಾದ ಭಯಾನಕ ವಿಡಿಯೋವೊಂದು ಹೊರಬಿದ್ದಿದೆ. ಇದ್ರಲ್ಲಿ ಒಂದಷ್ಟು ರೈತರು ರಸ್ತೆಯಲ್ಲಿ ನಡ್ಕೊಂಡು ಹೋಗ್ತಿದ್ದು, ಹಿಂದಿನಿಂದ ಬರೋ ಜೀಪು ರೈತರನ್ನು ಗುದ್ದಿಕೊಂಡು ಮುಂದೆ ಹೋಗಿದೆ. ಜೀಪು ಹೋದ ಬಳಿಕ ಒಂದಷ್ಟು ಜನ ರಸ್ತೆಯಲ್ಲಿ ಬಿದ್ದಿರೋದು ಕೂಡ ನೋಡ್ಬೋದಾಗಿದೆ. ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿರೋ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ಮೋದಿ ಈ ವಿಡಿಯೋ ನೋಡಿ.. ನನ್ನಂತ ವಿಪಕ್ಷ ನಾಯಕರನ್ನು ಯಾವುದೇ ಆದೇಶ, ಎಫ್​ಐಆರ್ ಇಲ್ಲದೇ ಜೈಲಿನಲ್ಲಿಟ್ಟಿದ್ದೀರಿ. ಈ ಕೃತ್ಯ ಎಸಗಿದ ವ್ಯಕ್ತಿ ಇನ್ನೂ ಸ್ವತಂತ್ರನಾಗಿರೋದು ಯಾಕೆ ಅಂತ ಪ್ರಶ್ನಿಸೋಕೆ ಇಷ್ಟ ಪಡ್ತೀನಿ ಅಂತ ಹೇಳಿದ್ದಾರೆ.

ಇನ್ನು ಪ್ರಿಯಾಂಕ ಗಾಂಧಿ ಬಂಧನದ ಬಗ್ಗೆ ಟ್ವೀಟ್ ಮಾಡಿರೋ ರಾಹುಲ್ ಗಾಂಧಿ, ಇದ್ರಿಂದೆಲ್ಲಾ ಪ್ರತಿಭಟನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಜೈಲಿನಲ್ಲಿ ಇಟ್ಟಿರೋದಕ್ಕೆ ಪ್ರಿಯಾಂಕ ಗಾಂಧಿ ಹೆದರೋದಿಲ್ಲ. ಆಕೆ ನಿಜವಾದ ಕಾಂಗ್ರೆಸ್ಸಿಗಳು.. ಸೋಲು ಒಪ್ಪಿಕೊಳ್ಳೋದಿಲ್ಲ ಅಂತ ಹೇಳಿದ್ದಾರೆ.

ಇನ್ನು ಪ್ರಿಯಾಂಕ ಗಾಂಧಿಯನ್ನು ವಶಕ್ಕೆ ಪಡೆದಿರೋ ಬಗ್ಗೆ ಪ್ರತಿಕ್ರಿಯಿಸಿರೋ ನವಜೋತ್ ಸಿಂಗ್ ಸಿಧು, ನಾಳೆಯೊಳಗೆ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾರನ್ನು ಅರೆಸ್ಟ್​​ ಮಾಡ್ಬೇಕು. ಮತ್ತು ಪ್ರಿಯಾಂಕಾರನ್ನು ಬಿಡುಗಡೆ ಮಾಡ್ಬೇಕು. ಇಲ್ಲದೇ ಇದ್ರೆ ಉತ್ತರ ಪ್ರದೇಶದ ಲಖೀಂಪುರಕ್ಕೆ ಪಾದಯಾತ್ರೆ ಕೈಗೊಳ್ತೀವಿ ಅಂತ ಎಚ್ಚರಿಸಿದ್ದಾರೆ.

ಇನ್ನು ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿರೋ ವಿಡಿಯೋವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಟ್ವೀಟ್ ಮಾಡಿದ್ದಾರೆ. ರೈತರನ್ನು ವಾಹನಗಳಿಂದ ಗುದ್ದಿರೋ ಈ ವಿಡಿಯೋ ಎಂಥವರ ಆತ್ಮವನ್ನು ನಡುಗಿಸುತ್ತೆ. ಈ ವಾಹನದ ಮಾಲೀಕರು, ಅದ್ರಲ್ಲಿ ಕುಳಿತಿರೋರನ್ನು ಪೊಲೀಸರು ಅರೆಸ್ಟ್ ಮಾಡ್ಬೇಕು ಅಂತ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ಕಾಂಗ್ರೆಸ್​​​​ನ ಚುನಾವಣಾ ವೀಕ್ಷಕರಾಗಿ ಆಯ್ಕೆಯಾಗಿರೋ ಛತ್ತೀಸ್​​ಗಢ ಸಿಎಂ ಭೂಪೇಶ್ ಸಿಂಗ್ ಭಗೇಲ್ ಕೂಡ ಲಖೀಂಪುರಕ್ಕೆ ಹೊರಟಿದ್ರು. ಈ ವೇಳೆ ಲಖೀಂಪುರದಲ್ಲಿ ತಡೆದಾಗ ನೆಲದಲ್ಲೇ ಕೂತು ಪ್ರತಿಭಟಿಸಿದ್ರು.

ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರೋ ರೈತ ತೇಜಿಂದರ್ ವಿರ್ಕ್​ ಅನ್ನೋರು, ಕಾರು ಓಡಿಸ್ತಿದ್ದಿದ್ದು ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಅಂತ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಗೃಹಖಾತೆ ರಾಜ್ಯಸಚಿವ ಅಜಯ್ ಮಿಶ್ರಾ, ನಾನಾಗಲೀ, ನನ್ನ ಮಗನಾಗಲೀ ಘಟನೆಯ ಜಾಗದಲ್ಲಿ ಇರಲಿಲ್ಲ ಅನ್ನೋದಕ್ಕೆ ನಮ್ಮ ಬಳಿ ಸಾಕ್ಷ್ಯ ಇದೆ. ನಾವು ತನಿಖೆಗೆ ಸಹಕರಿಸುತ್ತೀವಿ. ಆದ್ರೆ ಇ ಎಲ್ಲಾ ಘಟನೆಯ ಪ್ಲಾನ್ ಮಾಡಿರೋರನ್ನು ನಾವು ಬಿಡೋದಿಲ್ಲ ಅಂತ ಹೇಳಿದ್ದಾರೆ.

ಇನ್ನು ಎಫ್​ಐಆರ್​ನಲ್ಲಿ ಹೆಸರಿದ್ರೂ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾರನ್ನು ಯಾಕೆ ಅರೆಸ್ಟ್ ಮಾಡಿಲ್ಲ ಅಂತ ಕೇಳಿದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಪೊಲೀಸರು, ಇಷ್ಟು ದಿನ ರೈತರೊಂದಿಗೆ ಚರ್ಚೆ, ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಕ್ರಿಯೆಯಲ್ಲಿ ಬ್ಯುಸಿ ಇದ್ವಿ ಅಂತ ಹೇಳಿದ್ದಾರೆ.

ಈ ನಡುವೆ ಪ್ರಧಾನಿ ಮೋದಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿವಿಧ ನಗರಾಭಿವೃದ್ಧಿ ಯೋಜನೆಗಳ ಉದ್ಘಾಟನೆಗಾಗಿ ಲಕ್ನೋಗೆ ಹೋಗಿದ್ರು. ತಮ್ಮ ಭಾಷಣದಲ್ಲಿ ಲಕ್ನೋದಲ್ಲಿ ಬಿಜೆಪಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತಾಡಿದ್ರು. ಆದ್ರೆ ಲಖೀಂಪುರ ಹಿಂಸಾಚಾರದ ಬಗ್ಗೆ ಏನೂ ಮಾತಾಡಲೇ ಇಲ್ಲ.

-masthmagaa.com

Contact Us for Advertisement

Leave a Reply