ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ ಎಂ.ಪಿ ರೇಣುಕಾಚಾರ್ಯ!

masthmagaa.com:

ವಿಧಾನಸಭೆ ಸೋಲಿನ ಬಳಿಕ ಸೈಲೆಂಟ್ ಆಗಿದ್ದ ಬಿಜೆಪಿ ಪಾಳೆಯದಲ್ಲೀಗ ಆರೋಪ ಪ್ರತ್ಯಾರೋಪ ಹಾಗೂ ಹೊಂದಾಣಿಕೆಯ ಅಂತರ್ಯುದ್ಧ ತಾರಕಕ್ಕೇರಿದೆ. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಿಜೆಪಿ ನಾಯಕರು ತಮ್ಮ ತಮ್ಮ ಮಧ್ಯೆ ಕಿತ್ತಾಡಿಕೊಳ್ತಿದಾರೆ. ಇದರ ಮಧ್ಯೆ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚೆಯಾಗುತ್ತಿದ್ದು, ಈ ವಿಚಾರವಾಗಿ ಪಕ್ಷದ ಘನತೆಗೆ ಧಕ್ಕೆ ತರುವಂಥ ಯಾವುದೇ ಹೇಳಿಕೆಗಳನ್ನು ನೀಡಬಾರದು ಅಂತ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಖಡಕ್ ಸೂಚನೆ ಕೊಟ್ಟಿದ್ದಾರೆ. ಆದ್ರೆ ಅದ್ಯಾವುದಕ್ಕೂ ತಲೆಕೆಡಿಸಕೊಳ್ಳದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ನಳಿನ್ ಕುಮಾರ್ ಕಟೀಲ್ ವಿರುದ್ಧವೇ ಕಿಡಿಕಾರಿದ್ದಾರೆ. ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಬಿಜೆಪಿ ಹೀ‌ನಾಯವಾಗಿ ಸೋಲು ಕಂಡಿದೆ. ಇದರಿಂದ ಅವರು ನೈತಿಕ ಹೊಣೆಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಅಂತ ಬಹಿರಂಗವಾಗಿಯೇ ಆಗ್ರಹಿಸಿದ್ದಾರೆ. ಇದೇ ವೇಳೆ ಪಕ್ಷ ಕಟ್ಟಿದವರು ಯಡಿಯೂರಪ್ಪ, ಅನಂತ್ ಕುಮಾರ್, ಈಶ್ವರಪ್ಪ, ಜಗದೀಶ ಶೆಟ್ಟರ್‌. ಆದ್ರೆ, ಈಗ ಅನಂತಕುಮಾರ್‌ ನಮ್ಮೊಂದಿಗಿಲ್ಲ. ಉಳಿದ 3 ಜನರನ್ನ ಮುಗಿಸಿ ಹಾಕಿದ್ದೀರಿ. ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನ ಸಿಎಂ ಮಾಡಿದ್ರಿ. ಆದ್ರೆ ಅವರ ಕೈ ಕಟ್ಟಿ ಹಾಕಿದ್ರಿ. ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಲಿಲ್ಲ. ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಆತ್ಮಾವಲೋಕನ ಅಗತ್ಯವಿದೆ. ಮೊದಲು ನಳಿನ್ ಕುಮಾರ್ ಕಟೀಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಂತ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply