ಮಯನ್ಮಾರ್​​ನಲ್ಲಿ ರಕ್ತಪಾತ ಸಮೀಪಿಸುತ್ತಿದೆ: ವಿಶ್ವಸಂಸ್ಥೆ ವಾರ್ನಿಂಗ್

masthmagaa.com:

ಮಯನ್ಮಾರ್​​ನಲ್ಲಿ ಸೇನೆ ವಿರುದ್ಧ ಪ್ರತಿಭಟನೆಗಳು ಹೆಚ್ಚಾದ ಬೆನ್ನಲ್ಲೇ ‘ರಕ್ತಪಾತ ಸಮೀಪಿಸುತ್ತಿದೆ’ ಅಂತ ವಿಶ್ವಸಂಸ್ಥೆಯ ಮಯನ್ಮಾರ್​ ವಿಶೇಷ ರಾಯಭಾರಿ ಎಚ್ಚರಿಸಿದ್ದಾರೆ. ಅಲ್ಲದೆ ಮಯನ್ಮಾರ್​​ನಲ್ಲಿ ನಾಗರಿಕ ಯುದ್ಧದ ಬಗ್ಗೆ ಎಚ್ಚರಿಸಿರೋ ಅವರು ತಕ್ಷಣ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಧ್ಯಪ್ರವೇಶಿಸಬೇಕು ಅಂತ ಆಗ್ರಹಿಸಿದ್ದಾರೆ. ರಕ್ತಪಾತದ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಸಿದ್ರೂ ಸುಮ್ಮನಾಗದ ಪ್ರತಿಭಟನಾಕಾರರು ಮಯನ್ಮಾರ್ ಸೇನೆಯ ಸಂವಿಧಾನ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಗಡಿ ಪ್ರದೇಶದಲ್ಲಿರೋ ಅಲ್ಪಸಂಖ್ಯಾತ ದಂಗೆಕೋರರ ಗುಂಪು ಮತ್ತು ಮಯನ್ಮಾರ್ ಸೇನೆ ನಡುವಿನ ಸಂಘರ್ಷ ಕೂಡ ಜೋರಾಗಿದೆ. ಮಯಾನ್ಮಾರ್​ನ ಮೋಸ್ಟ್​ ಪವರ್​ಫುಲ್​ ರೆಬೆಲ್ ಗ್ರೂಪ್​​ಗಳಲ್ಲಿ ಒಂದಾದ ಕಾಚಿನ್ ಇಂಡಿಪೆಂಡೆನ್ಸ್ ಆರ್ಮಿ (KIA) ಮತ್ತು ಸೇನೆ ನಡುವೆ ನಡೆದ ಸಂಘರ್ಷದಲ್ಲಿ 20 ಯೋಧರು ಮೃತಪಟ್ಟಿದ್ದಾರೆ. ಸೇನೆಯ 4 ಟ್ರಕ್​ಗಳನ್ನ ಧ್ವಂಸ ಮಾಡಲಾಗಿದೆ. ಮತ್ತೊಂದುಕಡೆ ದಂಗೆಕೋರರ ಇನ್ನೊಂದು ಗುಂಪಾದ ಕರೆನ್ ನ್ಯಾಷನಲ್ ಯೂನಿಯನ್ (KNU) ಹೆಚ್ಚು ಪ್ರಭಾವ ಹೊಂದಿರುವ ಪ್ರದೇಶಗಳ ಮೇಲೆ ಸೇನೆಯು ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಆ ಪ್ರದೇಶದಲ್ಲಿ ಸಾವಿರಾರು ಜನ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಹಲವರು ಥೈಲ್ಯಾಂಡ್​ಗೆ ಪಲಾಯನ ಮಾಡಿದ್ದಾರೆ ಅಂತ ವರದಿಯಾಗಿದೆ.

ಇನ್ನು ಮಯನ್ಮಾರ್ ಸೇನೆ ಅರೆಸ್ಟ್ ಮಾಡಿರೋ ಆಂಗ್ ಸಾನ್ ಸೂ ಕಿ ಮೇಲೆ ಇಷ್ಟುದಿನ ಹಲವು ಸಣ್ಣ ಸಣ್ಣ ಆರೋಪಗಳನ್ನ ಮಾಡಿದ್ದ ಸೇನೆ ಈಗ ಅವರ ಮೇಲೆ ಮರಣ ದಂಡನೆ ನೀಡುವಂತಹ ಗಂಭೀರ ಆರೋಪಗಳನ್ನ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸೂ ಕಿ ಅರೆಸ್ಟ್ ಆದ ಬಳಿಕ ಬುಧವಾರ ಮೊದಲ ಬಾರಿಗೆ ತಮ್ಮ ಲಾಯರ್ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ರು. ಸೂ ಕಿ ಆರೋಗ್ಯವಾಗಿದ್ದಾರೆ ಅಂತ ವಕೀಲರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply