60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ʻನವರಸ ನಾಯಕʼ ಜಗ್ಗೇಶ್‌..

masthmagaa.com:

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಜಗ್ಗೇಶ್‌ ಅವರ ಲೈಫ್‌ಲ್ಲಿ ಇಂದು (ಮಾರ್ಚ್‌ 17) ತುಂಬಾ ವಿಶೇಷವಾದ ದಿನ. 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1963, ಮಾರ್ಚ್ 17 ರಂದು ಶಿವಲಿಂಗಪ್ಪ ಮತ್ತು ನಂಜಮ್ಮ ದಂಪತಿಗಳಿಗೆ ಬೆಂಗಳೂರಿನ ಶ್ರೀರಾಮಪುರದಲ್ಲಿ ಹುಟ್ಟಿದರು. ಇವರ ಬಾಲ್ಯದ ಹೆಸರು ಈಶ್ವರ ಗೌಡ. ಇವರು ಮೂಲತಃ ತುಮಕೂರು ಜಿಲ್ಲೆಯ ಮಾಯಸಂದ್ರದವರು. ಇವರಿಗೆ ಇಬ್ಬರು ಸಹೋದರ ಮತ್ತು ಸಹೋದರಿಯರಿದ್ದಾರೆ. ಇವರ ಸಹೋದರ ಕೋಮಲ್ ಕೂಡ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ಇವರು ಪರಿಮಳರವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ಗಂಡುಮಕ್ಕಳಾದ ಗುರುರಾಜ್ ಮತ್ತು ಯತಿರಾಜ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯವಾಗಿದ್ದಾರೆ.
ಜಗ್ಗೇಶ್‌ ಅವರು ಸಾಗಿ ಬಂದ ಹಾದಿಯನ್ನ ಮೆಲುಕು ಹಾಕಿದರೆ ತಿಳಿಯುತ್ತದೆ ಅವರು ಏಕಾಏಕಿ ಸಾಧಕರ ಪಟ್ಟಿಯನ್ನ ಅಲಂಕರಿಸಿದವರಲ್ಲ. ಸತತ ಪರಿಶ್ರಮದಿಂದ ಒಂದೊಂದೇ ಮೆಟ್ಟಿಲನ್ನ ಏರುತ್ತಾ ಸಿನಿಮಾ ರಂಗದಲ್ಲಿ ಅಗಾದ ಸಾಧನೆ ಮಾಡಿ ʼನವರಸ ನಾಯಕʼ ಎಂದು ಫೇಮಸ್‌ ಆಗಿದ್ದಾರೆ. ಇವರು ಬೆಳೆದು ಬಂದ ಹಾದಿ ಸಾಕಷ್ಟು ಜನರಿಗೆ ಸ್ಪೂರ್ತಿ.ಕನ್ನಡ ಸಿನಿಮಾರಂಗದ ಬಹುಬೇಡಿಕೆಯ ನಟ. ಇಂದಿಗೂ ಅವರು ಅದೇ ಚಾರ್ಮ್‌ ಉಳಿಸಿಕೊಂಡಿದ್ದಾರೆ. ತಮ್ಮ ಕಾಮಿಡಿ ಸಿನಿಮಾಗಳ ಮೂಲಕ ಹಾಸ್ಯ ಚಿತ್ರ ಪ್ರೇಕ್ಷಕರ ಫೇವರೆಟ್‌ ನಟರಾಗಿದ್ದಾರೆ. ಬರೀ ಕಾಮಿಡಿ ಮಾತ್ರವಲ್ಲದೆ ಸೆಂಟಿಮೆಂಟ್‌ ದೃಶ್ಯಗಳಲ್ಲೂ ಅದ್ಬುತವಾಗಿ ಅಭಿನಯಿಸಬಲ್ಲ ಮಹಾನ್‌ ಕಲಾವಿದರು ಜಗ್ಗೇಶ್‌.
ಪ್ರಾರಂಭದಲ್ಲಿ 1982 ರಲ್ಲಿ `ರಣಧೀರ’, `ಸಾಂಗ್ಲಿಯಾನ’, `ರಣರಂಗ’, ʻಯುದ್ಧಕಾಂಡ’, `ಪರಶುರಾಮ್’, `ರಾಣಿ ಮಹಾರಾಣಿ’, ʻಸೋಲಿಲ್ಲದ ಸರದಾರ’ ಹೀಗೆ ಹಲವಾರು ಸಿನಿಮಾಗಳಲ್ಲಿ ಖಳನಾಯಕ ಮತ್ತು ಪೋಷಕ ನಟನಾಗಿ ನಟಿಸಿದರು.
ಸಿನಿಮಾರಂಗ ಪ್ರವೇಶಿಸಿದ ಹತ್ತು ವರ್ಷಗಳ ನಂತರ 1992 ರಲ್ಲಿ `ಭಂಡ ನನ್ನ ಗಂಡ’ ಚಿತ್ರದ ಮೂಲಕ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಅದೇ ವರ್ಷದಲ್ಲಿ ತೆರೆಕಂಡ `ತರ್ಲೆ ನನ್‌ ಮಗ’ ಸಿನಿಮಾ ನಾಯಕನಾಗಿ ಬಿಗ್‌ ಬ್ರೇಕ್ ನೀಡಿತು. ನಂತರ `ಇಂದ್ರನ ಗೆದ್ದ ನರೇಂದ್ರ’, `ಪಟೇಲ’, ʻಕುಬೇರ’, `ಸರ್ವರ್ ಸೋಮಣ್ಣ, ‘ರೂಪಾಯಿ ರಾಜ’ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯದ ಛಾಪು ಮೂಡಿಸಿ ಸಾಕಷ್ಟು ಯಶಸ್ಸು ಕಂಡರು. 2006 ರಲ್ಲಿ ಜಗ್ಗೇಶ್‌ ಅವರ ನೂರನೇ ಸಿನಿಮಾ ʻಮಠʼ ಭರ್ಜರಿ ಯಶಸ್ಸು ಕಂಡಿತು. ಈ ಚಿತ್ರ ಮನುಷ್ಯನಲ್ಲಿರುವ ಅವಗುಣಗಳನ್ನ ಅನಾವರಣಗೊಳಿಸಿ ಅವುಗಳ ತ್ಯಾಗದಿಂದ ಹೇಗೆ ನೆಮ್ಮದಿ ಬದುಕು ಬಾಳಬಹುದು ಎಂದು ಬಿಂಬಿಸಿತು. 2012 ರಲ್ಲಿ ತಮ್ಮ ಪುತ್ರ ಗುರುರಾಜ್‌ರ `ಗುರು’ , 2017 ರಲ್ಲಿ ತೆರೆಕಂಡ `ಮೇಲುಕೋಟೆ ಮಂಜ’ ಸಿನಿಮಾಗಳಿಗೆ ನಿರ್ದೇಶನ ಮಾಡಿ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದರು. ಕಿರುತೆರೆಯಲ್ಲಿ ಹಲವಾರು ಕಾರ್ಯಕ್ರಮಗಳ ತೀರ್ಪುಗಾರರಾಗಿ ಸದ್ಯಕ್ಕೆ ಕಿರುತರೆಯಲ್ಲಿ ಸಕ್ರಿಯರಾಗಿದ್ದಾರೆ.
ಜಗ್ಗೇಶ್‌ ಅವರು ಸಿನಿಮಾ ಫಿಲ್ಡ್‌ನಲ್ಲಿ ಅಷ್ಟೇ ಅಲ್ಲದೆ ರಾಜಕೀಯದಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಜಗ್ಗೇಶ್ ತುರುವೇಕೆರೆ ಕ್ಷೇತ್ರದಲ್ಲಿ 2010 ರಿಂದ 2016 ಶಾಸಕರಾಗಿ ಸೇವೆಸಲ್ಲಿಸಿದ್ದಾರೆ. ಇತ್ತಿಚೇಗೆ ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿ, ಭಾರತೀಯ ಜನತಾ ಪಕ್ಷದ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನವಿರಾದ ಹಾಸ್ಯ, ವಿಶಿಷ್ಟ ಮ್ಯಾನರಿಸಂ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಇರಿಸುವ ನಟ ಜಗ್ಗೇಶ ತಮ್ಮ ಮೂರು ದಶಕಗಳಿಗಿಂತಲೂ ಹೆಚ್ಚಿನ ಸಿನಿಜೀವನದಲ್ಲಿ 120 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡನಾಡಿನ ಜನರ ಅಪಾರ ಪ್ರೀತಿ, ಗೌರವ ಸಂಪಾದಿಸಿದ್ದಾರೆ.

-masthmagaa.com

Contact Us for Advertisement

Leave a Reply