ಮೋದಿ 20 ಲಕ್ಷ ಕೋಟಿ ಪ್ಯಾಕೇಜ್: ಮೊದಲ ಭಾಗ ಘೋಷಣೆ..!

masthmagaa.com:

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಿನ್ನೆ ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿ ಮೊತ್ತದ ಆರ್ಥಿಕ ಪ್ಯಾಕೇಜ್​ನ ವಿವರ ನೀಡಿದ್ರು.

₹20  ಲಕ್ಷ ಕೋಟಿಯಲ್ಲಿ ಯಾರಿಗೆ ಎಷ್ಟು..?

– ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಗುರುತಿಸಲ್ಪಟ್ಟ ಆಯ್ದ ಖಾಸಗಿ ಸಂಸ್ಥೆಗಳ ಇಪಿಎಫ್​ಗೆ ಸಂಬಂಧಿಸಿದಂತೆ ಕಂಪನಿ ಹಾಗೂ ಉದ್ಯೋಗಿ ಇಬ್ಬರೂ ಕಟ್ಟುತ್ತಿದ್ದ ತಲಾ 12 ಪರ್ಸೆಂಟ್ ಪಾಲನ್ನು ಕೇಂದ್ರ ಸರ್ಕಾರ ಮತ್ತೆ ಮೂರು ತಿಂಗಳು ಕಟ್ಟಲಿದೆ. ಜೂನ್, ಜುಲೈ ಹಾಗೂ ಆಗಸ್ಟ್​ವರೆಗೆ ಇದನ್ನ ವಿಸ್ತರಿಸಲಾಗಿದೆ. ಇದಕ್ಕಾಗಿ 2,500 ಕೋಟಿ ರೂಪಾಯಿ ಮೀಸಲು. 72.44 ಲಕ್ಷ ಉದ್ಯೋಗಿಗಳಿಗೆ ಲಾಭ.

– ಉಳಿದ ಖಾಸಗಿ ಕಂಪನಿಗಳಲ್ಲಿ ಎಂಪ್ಲಾಯರ್ಸ್ ಮತ್ತು ಎಂಪ್ಲಾಯೀಸ್​ ಕಾಂಟ್ರಿಬ್ಯೂಷನ್ 12 ಪರ್ಸೆಂಟ್​ನಿಂದ 10 ಪರ್ಸೆಂಟ್​ಗೆ ಇಳಿಕೆ. ಇದರಿಂದಾಗಿ ಉದ್ಯೋಗಿಗಳ ತಿಂಗಳ ವೇತನದಲ್ಲಿ ಮುಂದಿನ ಮೂರು ತಿಂಗಳವರೆಗೆ ಅಲ್ಪ ಏರಿಕೆಯಾಗಲಿದೆ.

– ಬ್ಯಾಂಕೇತರ ಹಣಕಾಸು ಸಂಸ್ಥೆ ಹಾಗೂ ಕಿರು ಹಣಕಾಸಿನ ಸಂಸ್ಥೆಗಳಿಗೆ 30,000 ಕೋಟಿ ರೂಪಾಯಿ ಹಣಕಾಸಿನ ಲಭ್ಯತೆ.

– ವಿದ್ಯುತ್ ಉತ್ಪಾದನಾ ಹಾಗೂ ಪ್ರಸರಣ ಸಂಸ್ಥೆಗಳಿಗೆ 90,000 ಕೋಟಿ ರೂಪಾಯಿ ಹಣಕಾಸಿನ ಲಭ್ಯತೆ. ಇದರಿಂದ ಆಗುವ ಲಾಭವನ್ನ ಸಂಸ್ಥೆಗಳು ಗ್ರಾಹಕರಿಗೂ ತಲುಪುವಂತೆ ನೋಡಿಕೊಳ್ಳಬೇಕು.

– ರೈಲ್ವೆ, ಹೈವೆ, ರಸ್ತೆ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ಕೆಲಸ ಮಾಡುವ ಕಾಂಟ್ರಾಕ್ಟರ್​ಗಳಿಗೆ ಕೆಲಸ ಮುಗಿಸಲು 6 ತಿಂಗಳು ಹೆಚ್ಚುವರಿ ಕಾಲಾವಕಾಶ.

– ರಿಯಲ್ ಎಸ್ಟೇಟ್ ಕಂಪನಿಗಳು ರಿಜಿಸ್ಟರ್ ಮಾಡಿಕೊಂಡ ಪ್ರಾಜೆಕ್ಟ್​ಗಳನ್ನ ಮುಗಿಸಲು 6 ತಿಂಗಳ ಕಾಲಾವಕಾಶ.

– ಟಿಡಿಎಸ್​ ಮತ್ತು ಟಿಸಿಎಸ್​ ಮೊತ್ತವನ್ನು ಶೇ. 25ರಷ್ಟು ಕಡಿತ ಮಾಡಲಾಗುವುದು. ಇದು ಮಾರ್ಚ್ 31, 2021ರವರೆಗೆ ಜಾರಿಯಲ್ಲಿರುತ್ತದೆ.

– ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಕೊನೆಯ ದಿನಾಂಕವನ್ನ ನವೆಂಬರ್​ 30ರವರೆಗೆ ವಿಸ್ತರಿಸಲಾಗಿದೆ.

– ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಶೂರಿಟಿ ಇಲ್ಲದೆ 4 ವರ್ಷ ಅವಧಿಗೆ ಸಾಲ ಸೌಲಭ್ಯ. 100 ಕೋಟಿ ರೂಪಾಯಿವರೆಗೆ  ವಹಿವಾಟು ನಡೆಸುವ 45 ಲಕ್ಷಕ್ಕೂ ಹೆಚ್ಚು ಉದ್ಯಮಗಳಿಗೆ ಲಾಭ. ಇದಕ್ಕಾಗಿ 3 ಲಕ್ಷ ಕೋಟಿ ರೂಪಾಯಿ ಮೀಸಲು.

– ಲಾಕ್​ಡೌನ್​ನಿಂದ ನಷ್ಟದಲ್ಲಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ 20 ಸಾವಿರ ಕೋಟಿ ರೂಪಾಯಿ ಸಾಲ. 2 ಲಕ್ಷಕ್ಕೂ ಹೆಚ್ಚು ಉದ್ಯಮಗಳಿಗೆ ಲಾಭ.

– ಲಾಭದಲ್ಲಿ ನಡೆಯುತ್ತಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ತಮ್ಮ ಉದ್ಯಮವನ್ನು ವಿಸ್ತರಿಸಲು 50 ಸಾವಿರ ಕೋಟಿ ರೂಪಾಯಿ ಸಾಲ.

– ಅತಿ ಸಣ್ಣ ಉದ್ಯಮಗಳ ಬಂಡವಾಳ ಲಿಮಿಟ್ ಅನ್ನು ₹1 ಕೋಟಿಗೆ ಏರಿಸಲಾಗಿದೆ. ವಹಿವಾಟು 5 ಕೋಟಿವರೆಗೆ ಇದ್ದರೂ ಅವುಗಳನ್ನ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳೆಂದೇ ಪರಿಗಣಿಸಲಾಗುತ್ತದೆ. ಸಣ್ಣ ಉದ್ಯಮಗಳ ಬಂಡವಾಳ ಲಿಮಿಟ್​ 10 ಕೋಟಿ, ವಹಿವಾಟು 50 ಕೋಟಿ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ ಬಂಡವಾಳ ಲಿಮಿಟ್ 20 ಕೋಟಿ, ವಹಿವಾಟು 100 ಕೋಟಿ ರೂಪಾಯಿವರೆಗೆ ಏರಿಸಲಾಗಿದೆ.  ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಲ್ಲಿ ಉತ್ಪಾದನಾ ಮತ್ತು ಸೇವಾ ಉದ್ಯಮಗಳು ಎರಡನ್ನೂ ಒಂದೇ ರೀತಿ ನೋಡಲಾಗುತ್ತದೆ.

– 200 ಕೋಟಿ ರೂಪಾಯಿವರೆಗಿನ ಸರ್ಕಾರಿ ಟೆಂಡರ್​ಗಳಲ್ಲಿ ಕೇವಲ ದೇಶೀ ಕಂಪನಿಗಳಿಗೆ ಮಾತ್ರ ಅವಕಾಶ. 200 ಕೋಟಿಗೂ ಕಡಿಮೆ ಮೊತ್ತದ ಸರ್ಕಾರಿ ಟೆಂಡರ್​​ಗಳಲ್ಲಿ ಗ್ಲೋಬಲ್ ಟೆಂಡರ್ ರದ್ದು.

-masthmagaa.com

Contact Us for Advertisement

Leave a Reply