ಸಿಗರೇಟ್ ಎಳೆದು ವರ್ಷಕ್ಕೆ ಎಷ್ಟು ಜನ ಸಾಯ್ತಿದ್ದಾರೆ ಗೊತ್ತಾ?

masthmagaa.com:

ವಿಶ್ವದಲ್ಲಿ ಹೊಗೆಬತ್ತಿ ಎಳೆಯುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗ್ತಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಅಂಕಿ ಅಂಶಗಳಿಂದ ಗೊತ್ತಾಗಿದೆ. ಜೊತೆಗೆ ಧೂಮಪಾನಕ್ಕೆ ಅಡಿಕ್ಟ್ ಆಗುವವರ ಸಂಖ್ಯೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ದೇಶಗಳಿಗೆ ಸೂಚಿಸಿದೆ. 2020ರಲ್ಲಿ ಇಡೀ ವಿಶ್ವದಾದ್ಯಂತ 130 ಕೋಟಿ ಮಂದಿ ಧೂಮಪಾನಿಗಳಿದ್ರು. ಇದಕ್ಕೂ 2 ವರ್ಷ ಮುನ್ನ ಅಂದ್ರೆ 2018ರಲ್ಲಿ 132 ಕೋಟಿ ಇತ್ತು. ಇದೇ ಟ್ರೆಂಡ್ ಮುಂದುವರಿದು 2025ರ ವೇಳೆಗೆ ವಿಶ್ವದಾದ್ಯಂತ ಧೂಮಪಾನಿಗಳ ಸಂಖ್ಯೆ 127 ಕೋಟಿಗೆ ಇಳಿಕೆಯಾಗಬಹುದು. ಒಂದ್ವೇಳೆ ಹಾಗೇನಾದ್ರೂ ಆದ್ರೆ 7 ವರ್ಷಗಳ ಅವಧಿಯಲ್ಲಿ 5 ಕೋಟಿ ಜನ ಧೂಮಪಾನ ಅಭ್ಯಾಸ ಬಿಟ್ಟಂತಾಗುತ್ತೆ ಅಂತ ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಜೊತೆಗೆ 2000ನೇ ಇಸವಿಯಲ್ಲಿ ವಿಶ್ವದಲ್ಲಿ 15 ವರ್ಷ ದಾಟಿದ ಹತ್ತತ್ರ ಮೂರನೇ 1 ಭಾಗದಷ್ಟು ಜನ ತಂಬಾಕು ಸೇವನೆ ಮಾಡ್ತಿದ್ರು. ಆದ್ರೆ 2025ರ ವೇಳೆಗೆ ಅಂಥವರ ಸಂಖ್ಯೆ 5ನೇ ಒಂದು ಭಾಗಕ್ಕೆ ಇಳಿಕೆಯಾಗಲಿದೆ ಅಂತ ವರದಿಯಲ್ಲಿ ಅಂದಾಜಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್​​, ತಂಬಾಕು ಬಳಕೆದಾರರ ಸಂಖ್ಯೆ ಪ್ರತಿದಿನವೂ ಕಡಿಮೆಯಾಗ್ತಿರೋದು ತುಂಬಾ ಸಂತಸದ ವಿಚಾರ. ಆದ್ರೆ ನಾವು ಸಾಗಬೇಕಾದ ದಾರಿ ತುಂಬಾ ದೂರ ಇದೆ. ಯಾಕಂದ್ರೆ ತಂಬಾಕು ಕಂಪನಿಗಳು ದೊಡ್ಡ ಮಟ್ಟದ ಲಾಭ ಗಳಿಸೋ ಉದ್ದೇಶದಿಂದ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಏನೇನ್ ಬೇಕೋ ಎಲ್ಲವನ್ನೂ ಮಾಡ್ತಿವೆ ಅಂತ ಹೇಳಿದ್ದಾರೆ. ತಂಬಾಕು ಸೇವನೆಯಿಂದ ಪ್ರತಿವರ್ಷ ವಿಶ್ವದಲ್ಲಿ 80 ಲಕ್ಷ ಜನ ಪ್ರಾಣ ಬಿಡ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ತಂಬಾಕು ಸೇವಿಸಿ ಜೀವ ಬಿಟ್ರೆ, ಸುಮಾರು 12 ಲಕ್ಷ ಜನ ಬೇರೆಯವರು ಧೂಮಪಾನ ಮಾಡಿ ಬಿಟ್ಟ ಹೊಗೆ ಉಸಿರಾಡಿ ಪ್ರಾಣ ಬಿಡ್ತಿದ್ದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳು ಹೇಳಿವೆ. ತಂಬಾಕು ಬಳಕೆಯನ್ನು ಕಡಿಮೆ ಮಾಡುವ ಹಾದಿಯಲ್ಲಿ ವಿಶ್ವದ 60 ದೇಶಗಳು ಶ್ರಮಿಸ್ತಿವೆ. ಅದೇ 2 ವರ್ಷಗಳ ಹಿಂದಿನ ವಿಶ್ವ ಆರೋಗ್ಯಸಂಸ್ಥೆ ವರದಿ ಪ್ರಕಾರ ಕೇವಲ 32 ದೇಶಗಳು ಮಾತ್ರ ಈ ಪ್ರಯತ್ನ ನಡೆಸುತ್ತಿದ್ವು. ಧೂಮಪಾನ ನೀಡೋ ಖುಷಿಗಿಂತ ಅದ್ರಿಂದ ಬರೋ ಕಾಯಿಲೆಗಳು ಕೊಡೋ ನೋವು ತುಂಬಾ ದೊಡ್ಡದು ಅನ್ನೋದನ್ನ ಮರೆಯಬಾರದು..

-masthmagaa.com

Contact Us for Advertisement

Leave a Reply