ಪರಂ ಕೋಟೆಯಲ್ಲಿ ಕಂತೆ ಕಂತೆ ನೋಟು..? ಇಂದೂ ಶೋಧಕಾರ್ಯ…

ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಕೋಟೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು ಮತ್ತು ಸದಾಶಿವನಗರದ ಮನೆಯಲ್ಲಿ ಇವತ್ತೂ ಸಹ ಐಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಲಿದ್ದಾರೆ. ಸದಾಶಿವನಗರದಲ್ಲಿ ನಿನ್ನೆ ರಾತ್ರಿ 12.30ರವರೆಗೂ ಐಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದರು. ನಂತರ ನಾಲ್ವರು ಅಧಿಕಾರಿಗಳನ್ನು ಅಲ್ಲಿಯೇ ಬಿಟ್ಟು 10 ಮಂದಿ ಅಧಿಕಾರಿಗಳು ಮಹತ್ವದ ದಾಖಲೆಗಳೊಂದಿಗೆ ತೆರಳಿದ್ದರು.

ತುಮಕೂರಿನ ಸಿದ್ಧಾಥ ಮೆಡಿಕಲ್ ಕಾಲೇಜಿನಲ್ಲೂ ಮಧ್ಯರಾತ್ರಿ 1.30ರವರೆಗೂ ಐಟಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿದೆ. ರಾತ್ರಿ 8 ಗಂಟೆ ವೇಳೆ ಮತ್ತೂ 10 ಮಂದಿ ಐಟಿ ಅಧಿಕಾರಿಗಳು ಆಗಮಿಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ಅಲ್ಲೇ ಇದ್ದ ಗೆಸ್ಟ್ ಹೌಸ್‍ನಲ್ಲಿ ಉಳಿದಿರೋ ಐಟಿ ಅಧಿಕಾರಿಗಳು ಇವತ್ತು ಪುನಃ ಶೋಧ ಕಾರ್ಯ ಮುಂದುವರಿಸಲಿದ್ದಾರೆ.

ಇನ್ನು ನಿನ್ನೆ ಐಟಿ ದಾಳಿ ವೇಳೆ ಪರಮೇಶ್ವರ್ ನಿವಾಸದಲ್ಲಿ ಭಾರಿ ಪ್ರಮಾಣದಲ್ಲಿ ನಗದು ಪತ್ತೆಯಾಗಿದೆ ಎನ್ನಲಾಗಿದೆ. ದಾಳಿ ವೇಳೆ ಒಟ್ಟು ನಾಲ್ಕೂವರೆ ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಪರಮೇಶ್ವರ್ ನಿವಾಸದಲ್ಲಿ 70 ಲಕ್ಷ, ನೆಲಮಂಗಲ ಪುರಸಭೆ ಸದಸ್ಯ ಶಿವಕುಮಾರ್ ನಿವಾಸದಲ್ಲಿ 1.80 ಕೋಟಿ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

Contact Us for Advertisement

Leave a Reply