ʻಜನರೇ ಬಿಲ್‌ ಕಟ್ಬೇಡಿʼ! HDK ಗಲಾಟೆ ʻಗ್ಯಾರಂಟಿʼ!

masthmagaa.com:

ಇನ್ನೂ ಜಾರಿಯಾಗದ ರಾಜ್ಯ ಸರ್ಕಾರದ ಗ್ಯಾರಂಟಿಗಳ ಕುರಿತು ರಾಜ್ಯಾದ್ಯಾಂತ ಗಲಾಟೆಗಳು ಹೆಚ್ಚಾಗ್ತಿವೆ. ಈಗಾಗಲೇ ವಿದ್ಯುತ್‌ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹೊಸ ಯೋಜನೆ ತಲೆಬಿಸಿ ತಂದಿದ್ದು ಜನ ವಿದ್ಯುತ್ ಬಿಲ್‌ನ್ನೂ ಕಟ್ಟಲ್ಲ,.ಬಸ್ಸಲ್ಲಿ ದುಡ್ಡನ್ನೂ ಕೊಡಲ್ಲ ಅಂತ ಪಟ್ಟು ಹಿಡೀತಿದ್ದಾರೆ. ಈ ಪ್ರಕರಣಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿದ್ದು ಕೆಲವು ಕಡೆ ಗಲಾಟೆಗಳೂ ಕೂಡ ಆಗಿವೆ. ಇದನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿವೆ. ಇತ್ತ ಬಸ್‌ ಟಿಕೆಟ್‌ ಹಾಗೂ ವಿದ್ಯುತ್‌ ಬಿಲ್‌ಗಳ ಗಲಾಟೆ ನಡುವೆ ಇದೀಗ ಕಾಂಗ್ರೆಸ್‌ನ ಗೃಹಲಕ್ಷ್ಮೀ ಯೋಜನೆ ಅಡಿ ಹೆಸರು ನೊಂದಾಯಿಸಲು ನೂರಾರು ಮಹಿಳೆಯರು ಸೈಬರ್‌ ಸೆಂಟರ್‌ಗಳಿಗೆ ಮುಗಿಬಿದ್ದಿದ್ದಾರೆ. ಪಡಿತರ ಚೀಟಿಗೆ ಮೇ 31ರ ಒಳಗೆ ಆಧಾರ್‌ ಜೋಡಣೆ ಮಾಡಿ ಹೆಸರು ನೋಂದಾಯಿಸಬೇಕು. ಆಗ ಮಾತ್ರ ಗೃಹಲಕ್ಷ್ಮೀ ಯೋಜನೆ ಅಡಿ ಮನೆಯ ಯಜಮಾನಿಗೆ 2,000 ರೂ. ಸಿಗುತ್ತೆ ಅಂತ ಸುಳ್ಳು ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ. ಅದನ್ನ ನಂಬಿ ಮಹಿಳೆಯರು ಸೈಬರ್‌ ಸೆಂಟರ್‌ಗಳಿಗೆ ಮುತ್ತಿಗೆ ಹಾಕ್ತಿರೋ ಪ್ರಸಂಗಗಳು ನಡೀತಿವೆ. ಇತ್ತ ಸರ್ಕಾರದಿಂದ ಇದುವರೆಗೂ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಹಣ ಬಿಡುಗಡೆಗೆ ಮಾರ್ಗಸೂಚಿ ಬಂದಿಲ್ಲ. ಸಚಿವ ಸಂಪುಟದ ಒಪ್ಪಿಗೆ ಬಳಿಕ ಮಾರ್ಗಸೂಚಿ ರಿಲೀಸ್‌ ಆಗುತ್ತೆ ಅಂತ ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಒತ್ತಡ ಸೃಷ್ಠಿಯಾಗ್ತಿದ್ದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಸಿದ್ಧತೆ ನಡೆಸಿದ್ದು, ಪೂರಕ ಮಾಹಿತಿ ಹಾಗೂ ಮಾನದಂಡಗಳನ್ನು ನಿರ್ಧರಿಸುವ ಪ್ರಕ್ರಿಯೆ ಶುರುವಾಗಿದೆ ಅಂತ ಮಾಹಿತಿ ಲಭ್ಯವಾಗಿದೆ. ಯೋಜನೆಗಳ ಫಲಾನುಭವಿಗಳು ಯಾರು, ಏನೆಲ್ಲಾ ಮಾನದಂಡಗಳನ್ನ ಅನುಸರಿಸಬೇಕು ಅನ್ನೊ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪೂರ್ಣ ವಿವರ ಸಿದ್ಧಪಡಿಸುವ ಕೆಲಸವನ್ನು ಆರಂಭಿಸಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಗೂ ಮುನ್ನ 5 ಗ್ಯಾರಂಟಿಗಳ ಜಾರಿಗೆ ಸ್ಪಷ್ಟ ರೂಪುರೇಷೆ ಸಿದ್ದವಾಗಲಿದೆ ಅಂತ ಅಧಿಕೃತ ಮೂಲಗಳು ತಿಳಿಸಿವೆ. ಇನ್ನೊಂದ್‌ ಕಡೆ ಚುನಾವಣೆಗೂ ಮೊದಲು ಕಾಂಗ್ರೆಸ್​ನ ಇದೇ ಸಿದ್ದರಾಮಯ್ಯ ನಿನಗೂ ಫ್ರೀ, ನನಗೂ ಫ್ರೀ ಅಂದ್ರು. ಎಲ್ಲರಿಗೂ ಫ್ರೀ ಫ್ರೀ ಅಂತ ಭಾಷಣದಲ್ಲಿ ಹೇಳಿದ್ದರು. ಮೊದಲ ಸಂಪುಟದಲ್ಲೇ ಎಲ್ಲಾ ಗ್ಯಾರಂಟಿ ಜಾರಿ ಅಂತ ಹೇಳಿದ್ದರು. ಕುತಂತ್ರ ರಾಜಕಾರಣ ನಡೆಸಿ ರಾಜ್ಯದ ಜನರನ್ನು ವಂಚಿಸಲಾಗಿದೆ. 200 ಯೂನಿಟ್ ಉಚಿತ ವಿದ್ಯುತ್ ನೀಡೋದಾಗಿ ಹೇಳಿದ್ದಾರೆ. ರಾಜ್ಯದ ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ ಅಂತ ಹೆಚ್​ಡಿಕೆ ಜನರಿಗೆ ಕರೆ ಕೊಟ್ಟಿದ್ದಾರೆ. ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಅಂದ್ರು. ಈಗ ಗ್ಯಾರಂಟಿಗಳಿಗೆ ಕಂಡೀಷನ್​ ಇದೆ ಅಂತಾ ಹೇಳುತ್ತಿದ್ದಾರೆ. ಗ್ಯಾರಂಟಿ ಘೋಷಣೆ ಮುನ್ನವೇ ಯಾಕೆ ಷರತ್ತುಗಳ ಬಗ್ಗೆ ಹೇಳಿಲ್ಲ. ನಿಮ್ಮ ಕುತಂತ್ರದ ರಾಜಕೀಯಕ್ಕೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಇತ್ತ ಕುಮಾರಸ್ವಾಮಿ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡಲ್ಲ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನ ಜನ ತಿರಸ್ಕರಿಸಿದ್ದಾರೆ ಅಂತ ಡಿಸಿಎಂ ಡಿ.ಕೆ ಶಿವಕುಮಾರ್‌ ತಿರುಗೇಟು ಕೊಟ್ಟಿದಾರೆ.

-masthmagaa.com

Contact Us for Advertisement

Leave a Reply