ಪಾಕಿ ಖಾನ್‌ಗೆ ಖಟ್ಟಕ್ ಕಂಟಕ… ಎಲ್ಲೆಡೆಯಿಂದ ಸಂಕಟ! ಇಮ್ಮು ಅಕಟಕಟ!

masthmagaa.com:

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​​ಗೆ ಖಟ್ಟಕ್​​ ಕಂಟಕ ಎದುರಾಗಿದೆ… ಇದರ ಪರಿಣಾಮ ಹಲ್ಲು ಕಟಕಟ ಕಡಿಯುತ್ತಾ ಅಕಟಕಟ ಎನ್ನುವಂತಾಗಿದೆ ಪಾಕಿ PM ಕಥೆ. ಏನಿದು ಅಂತ ಅರ್ಥ ಆಗಬೇಕು ಅಂದ್ರೆ, ನಮ್ಮ ನೆರೆಯ ದೇಶದ ಇಂಟರ್ನಲ್ ಪಾಲಿಟಿಕ್ಸ್ ಏನಾಗ್ತಿದೆ ಅಂತ ನೋಡಬೇಕು. ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಕಟ್ಟಕ್ ಇಮ್ರಾನ್ ಖಾನ್ ಪಾಲಿಗೆ ಹೊಸ ಕಂಟಕವಾಗಿ ಪರಿಣಮಿಸೋ ಸುಳಿವು ನೀಡಿದ್ದಾರೆ. ತನ್ನದೇ ಪ್ರಧಾನಿಯ ವಿರುದ್ಧ ಇವ್ರು ಆಕ್ರೋಶದ ಹೇಳಿಕೆಗಳನ್ನ ಕೊಟ್ಟಿದ್ದಾರೆ. ಇಮ್ರಾನ್ ಖಾನ್ ಸರ್ಕಾರ ಖೈಬರ್ ಪಕ್ತುಂಖ್ವಾ ಪ್ರಾಂತ್ಯದ ಬಗ್ಗೆ ತಾರತಮ್ಯದ ಧೋರಣೆ ತೋರ್ತಿದೆ. ಪಾಕಿಸ್ತಾನದ ಬೇರೆಲ್ಲ ಪ್ರಾಂತ್ಯಗಳಲ್ಲೂ ಸರ್ಕಾರ ಅಡುಗೆ ಅನಿಲ ಹಾಗೂ ಪೆಟ್ರೋಲ್ ಡೀಸೆಲ್ ವಿಚಾರದಲ್ಲಿ ಒಳ್ಳೊಳ್ಳೆ ಸ್ಕೀಮ್ ಕೊಡ್ತಿದೆ. ಆದ್ರೆ ಖೈಬರ್ ಪಕ್ತುಂಕ್ವಾ ಪ್ರಾಂತ್ಯದ ಜನಕ್ಕೆ ಈ ಯಾವ ಲಾಭವೂ ಸಿಗ್ತಿಲ್ಲ. ಇದು ಹೀಗೇ ಮುಂದುವರಿದರೆ KPಯ ಜನ PTI ಪಕ್ಷಕ್ಕೆ ಓಟೇ ಹಾಕಲ್ಲ ಅಂತ ಗುಡುಗಿದ್ದಾರೆ. ಇಮ್ರಾನ್ ಖಾನ್ ಮುಂದೇನೇ ಪಕ್ಷದ ಸಂಸದೀಯ ಸಭೆಯಲ್ಲಿ ಈ ರೀತಿ ಸಿಟ್ಟು ಹೊರಹಾಕಿದ್ದಾರೆ. ಪರ್ವೇಜ್ ಖಟ್ಟಕ್ 72 ವರ್ಷದ ಹಿರಿಯ ನಾಯಕ. ಇವ್ರು ಇಮ್ರಾನ್ ಖಾನ್ ಹುಟ್ಟು ಹಾಕಿದ PTI ಪಕ್ಷದ ಪ್ರಮುಖ ನಾಯಕ. ಇವರು ತಮ್ಮದೇ ಪಕ್ಷದ ಟಾಪ್ ನಾಯಕನ ಮೇಲೆ ಪಕ್ಷದ ವೇದಿಕೆಯಲ್ಲೇ ಬೆಂಕಿ ಕಾರಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನ ಸೇನೆಗೂ ಇತ್ತೀಚಿಗೆ ಆಗಿಬರ್ತಿಲ್ಲ. ಪಾಕಿಸ್ತಾನದಲ್ಲಿ ಸೇನೆ ಜೊತೆ ಒಳ್ಳೆ ಬಾಂಧವ್ಯ ಇಲ್ಲ ಅಂದ್ರೆ ಅಧಿಕಾರದಲ್ಲಿ ಉಳಿಯೋದು ಕಷ್ಟ. ಬರೀ ಅಧಿಕಾರ ಅಲ್ಲ., ಜೀವಂತ ಉಳಿಯೋದೂ ಕಷ್ಟ. ISI ಮುಖ್ಯಸ್ಥರ ನೇಮಕ, ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವಧಿ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಇತ್ತೀಚೆಗೆ ಇಮ್ರಾನ್ ಖಾನ್ ಸೇನೆಗೆ ಉಲ್ಟಾ ಹೊಡೆದು ವಿರೋಧ ಕಟ್ಟಿಕೊಂಡಿದ್ದಾರೆ. ಪಾಕಿಸ್ಥಾನದ ಆಂತರಿಕ ಭದ್ರತೆ ವಿಚಾರವನ್ನ ಇಮ್ರಾನ್ ಖಾನ್ ಹ್ಯಾಂಡಲ್ ಮಾಡ್ತಿರೋ ರೀತಿ ಬಗ್ಗೆಯೂ ಸೇನೆಗೆ ಬಹಳ ಅಸಮಾಧಾನ ಇದೆ. ಇಲ್ಲಿ ಇಂಟರೆಸ್ಟಿಂಗ್ ಅಂದ್ರೆ, ಇತ್ತೀಚೆಗೆ ಇಮ್ರಾನ್ ಖಾನ್ ರನ್ನ ಕೆಳಗಿಳಿಸಿ ಬೇರೊಬ್ಬರನ್ನ PM ಮಾಡೋಕೆ ಸೇನೆ ಮಸಲತ್ತು ಮಾಡ್ತಿದೆ ಅಂತ ಸುದ್ದಿಯಾದಾಗ, ಆಗಲೇ ಹೇಳಿದ್ವಲ್ಲ,? ಪರ್ವೇಜ್ ಖಟ್ಟಕ್ ಅಂತ. ಇದೇ ಪರ್ವೇಜ್ ಖಟ್ಟಕ್ ಹೊಸ ಪ್ರಧಾನಿ ಆಗಬೋದು ಅಂತ ಸುದ್ದಿಯಾಗಿತ್ತು. ಈಗ ಅವರೇ ಇಮ್ರಾನ್ ಖಾನ್ ವಿರುದ್ಧ ಬಹಿರಂಗವಾಗಿ ಯುದ್ಧ ಸಾರಿದ್ದಾರೆ. ಇಷ್ಟೇ ಅಲ್ಲ, PTI ಪಕ್ಷದ ಮತ್ತೊಬ್ಬ ಹಿರಿಯ ನಾಯಕ ನೂರ್ ಆಲಮ್ ಕೂಡ ಇಮ್ರಾನ್ ಖಾನ್ ಸರ್ಕಾರ ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿಯ ಧೋರಣೆ ತೋರ್ತಿದೆ. ತಾರತಮ್ಯ ಮಾಡ್ತಿದೆ ಅಂತ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ಪಾಕಿಸ್ತಾನದ ವಿಪಕ್ಷಗಳೆಲ್ಲ ಒಟ್ಟು ಸೇರಿಕೊಂಡು ಇಮ್ರಾನ್ ಖಾನ್ ಬುಡ ಅಲ್ಲಾಡಿಸುತ್ತಿವೆ. ಒಂದಾದ ಮೇಲೊಂದು ಲಾಂಗ್ ಮಾರ್ಚ್ ನಡೆಸಿ ಇಮ್ರಾನ್ ಖಾನ್ ವಿರೋಧಿ ಅಲೆ ಸೃಷ್ಟಿ ಮಾಡ್ತಿವೆ. ಸೋ ಈ ರೀತಿ, ಪಾತಾಳ ಕಂಡಿರೋ ಪಾಕ್ ಆರ್ಥಿಕತೆ, ತನ್ನ ಪಕ್ಷದ ಒಳಗಿನಿಂದನೇ ಬಂಡಾಯ, ಸೇನೆಯ ಸಿಟ್ಟು, ವಿರೋಧ ಪಕ್ಷಗಳ ಜಂಟಿ ದಾಳಿ ಈ ಎಲ್ಲವೂ ಸೇರಿ ಇಮ್ರಾನ್ ಖಾನ್ಗೆ ಕೊನೆಗಾಲ ದರ್ಶನ ಮಾಡಿಸ್ತಿವೆ.

ಮತ್ತೊಂದ್ಕಡೆ ಎಲೆಕ್ಷನ್ ಕಮಿಷನ್ ಆಫ್ ಪಾಕಿಸ್ತಾನ್ ಕೂಡ ಪ್ರಧಾನಿ ಇಮ್ರಾನ್ ಖಾನ್​​ಗೆ ಶಾಕ್ ಕೊಟ್ಟಿದೆ. ತಿಮರ್​​​ಗರ ಎಂಬಲ್ಲಿ ಪ್ಲಾನ್ ಮಾಡಲಾಗಿದ್ದ ರ್ಯಾಲಿಗೆ ಬ್ರೇಕ್ ಹಾಕಿದೆ. ಜನವರಿ 27ರಂದು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಲೋವರ್​ ದಿರ್ ಜಿಲ್ಲೆಯಲ್ಲಿ ಇಮ್ರಾನ್ ಕಾನ್ ಸಾರ್ವಜನಿಕ ರ್ಯಾಲಿಯೊಂದ್ರಲ್ಲಿ ಭಾಗಿಯಾಗಿ ಭಾಷಣ ಮಾಡ್ಬೇಕಿತ್ತು. ಆದ್ರೆ ಈ ಕೂಡಲೇ ನೀತಿ ಸಂಹಿತೆ ಜಾರಿಗೊಳಿಸಿ, ರ್ಯಾಲಿ ತಡೆಯಬೇಕು ಅಂತ ಲೋವರ್ ಧಿರ್​ ಜಿಲ್ಲಾಡಳಿತಕ್ಕೆ ಪಾಕಿಸ್ತಾನದ ಚುನಾವಣಾ ಆಯೋಗ ಸೂಚಿಸಿದೆ.

-masthmagaa.com

Contact Us for Advertisement

Leave a Reply