ಪೆಟ್ರೋಲ್-ಡೀಸೆಲ್​ ರೇಟು: ಕಳೆದ ವರ್ಷ ಎಷ್ಟಿತ್ತು, ಈಗ ಎಷ್ಟಾಗಿದೆ? ಇಲ್ಲಿದೆ ನೋಡಿ

masthmagaa.com:

ಪೆಟ್ರೋಲ್​ ಮತ್ತು ಡೀಸೆಲ್ ದರ ಇವತ್ತು ಕೂಡ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ ದರ 37 ಪೈಸೆ ಜಾಸ್ತಿಯಾಗಿ 93.98 ರೂಪಾಯಿ ಆಗಿದೆ. ಪ್ರತಿ ಲೀಟರ್ ಡೀಸೆಲ್​ ದರ ಕೂಡ 37 ಪೈಸೆ ಜಾಸ್ತಿಯಾಗಿ 86.21 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್​ 97 ರೂಪಾಯಿ ಗಡಿ ದಾಟಿ, 100ರ ಹತ್ರ ಹೋಗಿದೆ.

ನಿರಂತರ ಪೆಟ್ರೋಲ್​ ಮತ್ತು ಡೀಸೆಲ್ ದರ ಏರಿಕೆಯಾಗ್ತಿರೋ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗ್ತಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್​ ಕೂಡ ತುಟ್ಟಿಯಾಗಿದೆ. ಈ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತೆ. ಕೊರೋನಾ ಕಾರಣದಿಂದಾಗ ಜಾಗತಿಕ ಕಚ್ಚಾ ತೈಲದ ಪೂರೈಕೆ ಕಮ್ಮಿಯಾಗಿದೆ. ಇದರ ಪರಿಣಾಮ ಪೆಟ್ರೋಲ್-ಡೀಸೆಲ್ ಉತ್ಪಾದನೆ ಮೇಲೂ ಪೆಟ್ಟು ಬಿದ್ದಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನ ಜಿಎಸ್​ಟಿ ವ್ಯಾಪ್ತಿಗೆ ತರುವಂತೆ ಜಿಎಸ್​ಟಿ ಕೌನ್ಸಿಲ್​ಗೆ ನಾವು ಮನವಿ ಮಾಡ್ತಾನೇ ಇದ್ದೀವಿ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಜಿಎಸ್​ಟಿ ಕೌನ್ಸಿಲ್​ಗೆ ಇದೆ ಅಂತ ಹೇಳಿದ್ದಾರೆ. ಇನ್ನು ಬೆಲೆ ಏರಿಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಬರೆದ ಪತ್ರದ ಬಗ್ಗೆ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಕಾಂಗ್ರೆಸ್ ಅಧಿಕಾರದಲ್ಲಿರೋ ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ತೆರಿಗೆ ಇದೆ ಅನ್ನೋದನ್ನ ಸೋನಿಯಾ ಗಾಂಧಿ ಮೊದಲು ತಿಳಿದುಕೊಳ್ಳಬೇಕು ಎಂದಿದ್ದಾರೆ.

ಪೆಟ್ರೋಲಿಯಂ ಸಚಿವರು ಹೇಳೋ ಪ್ರಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗ್ತಿರೋದು ನಿಜ. ಈಗ ಒಂದು ಬ್ಯಾರೆಲ್​​ ಕಚ್ಚಾ ತೈಲದ ಬೆಲೆ 63 ಅಮೆರಿಕನ್ ಡಾಲರ್ ದಾಟಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಅಂದ್ರೆ ಫೆಬ್ರವರಿಯಲ್ಲಿ 54 ಡಾಲರ್ ಇತ್ತು. ಸುಮಾರು 9ರಿಂದ 10 ಡಾಲರ್ ಈಗ ಜಾಸ್ತಿಯಾಗಿದೆ. ಇದರ ಜೊತೆಗೆ ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಕುವ ಅಬಕಾರಿ ಸುಂಕ, ವ್ಯಾಟ್​ ಕೂಡ ಹೆಚ್ಚಾಗಿದೆ ಅನ್ನೋದು ಕೂಡ ಗಮನಾರ್ಹ. ಕಳೆದ ವರ್ಷಕ್ಕಿಂತ 30-40 ಪರ್ಸೆಂಟ್​ ತೆರಿಗೆ ಜಾಸ್ತಿಯಾಗಿದೆ.

ಅಬಕಾರಿ ಸುಂಕ:
2020 ಫೆಬ್ರವರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19 ರೂಪಾಯಿ ಅಬಕಾರಿ ಸುಂಕವಿತ್ತು. ಅದೀಗ 32 ರೂಪಾಯಿ ಆಗಿದೆ. ಪ್ರತಿ ಲೀಟರ್​ ಡೀಸೆಲ್ ಮೇಲೆ 15 ರೂಪಾಯಿ ಇದ್ದ ಅಬಕಾರಿ ಸುಂಕ ಈಗ 31 ರೂಪಾಯಿ ಆಗಿದೆ.

ವ್ಯಾಟ್:
2020ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 15 ರೂಪಾಯಿ ವ್ಯಾಟ್​ ಇತ್ತು. ಅದೀಗ 20 ರೂಪಾಯಿ ದಾಟಿದೆ. ಅದೇ ರೀತಿ ಡೀಸೆಲ್​ ಮೇಲೆ 9 ರೂಪಾಯಿ ಇದ್ದ ವ್ಯಾಟ್​ ಈಗ 11 ರೂಪಾಯಿ ದಾಟಿದೆ.

ಇನ್ನು 2020ರ ಫೆಬ್ರವರಿಯಲ್ಲಿ ಗ್ರಾಹಕರಿಗೆ 70 ರೂಪಾಯಿಗೆ ಸಿಗ್ತಿದ್ದ ಪೆಟ್ರೋಲ್ ಈಗ 90 ರೂಪಾಯಿ ದಾಟಿದೆ. ಡೀಸೆಲ್ 60 ರೂಪಾಯಿ ಇದ್ದಿದ್ದು 80 ರೂಪಾಯಿ ದಾಟಿದೆ.

-masthmagaa.com

Contact Us for Advertisement

Leave a Reply