ಗಡಿಯಲ್ಲಿ ಹಳ್ಳಿ ನಿರ್ಮಿಸಿದ ಚೀನಾ! ಉಪಗ್ರಹ ಚಿತ್ರದ ಮೂಲಕ ಬಯಲು!

masthmagaa.com:

ಭಾರತ ಮತ್ತು ಚೀನಾದ ಮಿಲಿಟರಿ ಅಧಿಕಾರಿಗಳ ನಡುವೆ 16ನೇ ಸುತ್ತಿನ ಮಾತುಕತೆಯ ಬೆನ್ನಲ್ಲೇ ಗಡಿಯಲ್ಲಿ ಚೀನಾ ಕುತಂತ್ರಗಳು ಒಂದೊಂದಾಗಿ ಬಯಲಿಗೆ ಬರ್ತಿದೆ. ಈಗಾಗಲೇ ವಿವಾದಕ್ಕೀಡಾಗಿರೋ ಡೊಕ್ಲಾಮ್‌ ಪ್ರದೇಶಕ್ಕೆ ಹತ್ತಿರದಲ್ಲೇ ನರಿ ಬುದ್ದಿಯ ಚೀನಾ ಮತ್ತೊಂದು ಹಳ್ಳಿ ನಿರ್ಮಾಣ ಮಾಡಿದೆ. ಸ್ಯಾಟಲೈಟ್‌ ಚಿತ್ರಗಳಿಂದ ಈ ವಿಚಾರ ಬೆಳಕಿಗೆ ಬಂದಿದೆ. ಚೀನಾದ ಈ ಹಳ್ಳಿ ವಿವಾದಿತ ಭೂ ಪ್ರದೇಶ ಡೋಕ್ಲಾಂನಿಂದ ಕೇವಲ‌ 9 ಕಿಲೋಮೀಟರ್ ದೂರದಲ್ಲಿದೆ. ಅಂದ್ಹಾಗೆ ಈ ಹಿಂದೆ ಅಂದ್ರೆ 2017ರಲ್ಲಿ ಚೀನಾ ಭೂತಾನ್ ನ ಪ್ರದೇಶವೊಂದನ್ನ​ ತನಗೆ ಸೇರಿದ್ದು ಅಂತ ಹೇಳಿಕೊಂಡು ರಸ್ತೆ ಮಾಡೋಕೆ ಮುಂದಾಗಿತ್ತು. ಇದಾದ ಬಳಿಕ ಡೋಕ್ಲಾಮ್ ಪ್ರದೇಶದಲ್ಲಿ ಭಾರತ ಚೀನಾ ಮಧ್ಯೆ ಕಾದಾಟ ನಡೆದಿತ್ತು. ಇದೀಗ ಅದೇ ಆಯಕಟ್ಟಿನ ಜಾಗದಲ್ಲಿ ಈ ಕುತಂತ್ರಿ ರಾಷ್ಟ್ರ ಹಳ್ಳಿ ನಿರ್ಮಾಣ ಮಾಡಿದೆ. ಇನ್ನು ಈ ವಿಚಾರ ಬೆಳಕಿಗೆ ಬರ್ತಿದ್ದಂತೆ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದ್ದು ದೇಶದ ಸಾರ್ವಭೌಮತೆಯಲ್ಲಿ ರಾಜಿ ಮಾಡಿಕೊಳ್ಳಲಾಗ್ತಿದೆ. ಮೋದಿ ಸರ್ಕಾರ ಯಾಕೆ ಈ ಬಗ್ಗೆ ಮೌನವಾಗಿದೆ? ಅಂತ ಆಕ್ರೋಶ ಹೊರಹಾಕಿದೆ. ಇದು ಒಂದ್ಕಡೆಯಾದ್ರೆ, ಇತ್ತ ವಿವಾದಿತ ಪ್ಯಾಂಗೋಂಗ್ ಸರೋವರದಲ್ಲಿ ಚೀನಾದ ತಂಟೆಕೋರ ಸೇನೆ ಸಮರಾಭ್ಯಾಸ ಮಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋವೊಂದು ಅಲ್ಲಿನ ಮಾಧ್ಯಮಗಳಲ್ಲಿ ಹರಿದಾಡ್ತಿವೆ. ಭಾರತದೊಂದಿಗೆ ಸೇನಾ ಕಮಾಂಡರ್ ಮಟ್ಟದ ಮಾತುಕತೆ ನಡೆಸಿದ ಬೆನ್ನಲ್ಲೇ ಈ ವಿಡಿಯೋ ಬಿಡುಗಡೆಯಾಗಿದೆ ಅಂತ ಹೇಳಲಾಗ್ತಿದ್ದು ಈ ಅಭ್ಯಾಸ ತೀರ ಇತ್ತೀಚಿಗೆ ನಡೆದಿರಬಹುದು ಅಂತ ಅಂದಾಜಿಸಲಾಗಿದೆ.

-masthmagaa.com

Contact Us for Advertisement

Leave a Reply