ನಮ್ಮದೇ ಆದ ರೀತಿಯಲ್ಲಿ ಉತ್ತರ ಕೊಡ್ತೀವಿ: ಇರಾನ್​​ಗೆ ಇಸ್ರೇಲ್​ ಎಚ್ಚರಿಕೆ

masthmagaa.com:

ಮೊನ್ನೆಯಷ್ಟೇ ಅರಬ್ಬೀ ಸಮುದ್ರದಲ್ಲಿ ಒಮನ್ ತೀರದಲ್ಲಿ ಸಾಗುತ್ತಿದ್ದ ಇಸ್ರೇಲ್​​ನ ಟ್ಯಾಂಕರ್ ಮೇಲೆ ದಾಳಿ ನಡೆದಿತ್ತು.ಇದೀಗ ದಾಳಿಗೆ ಇರಾನೇ ಕಾರಣ.. ಇರಾನ್ ಡ್ರೋನ್ ಮೂಲಕ ಈ ದಾಳಿ ನಡೆಸಿತ್ತು. ಅದಕ್ಕೆ ನಮ್ಮ ಬಳಿ ಸಾಕ್ಷ್ಯ ಇದೆ ಅಂತ ಇಸ್ರೇಲ್ ಕೆಂಡ ಉಗುಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಇಸ್ರೇಲ್ ಪ್ರಧಾನಿ ನೆಫ್ತಾಲಿ ಬೆನ್ನೆಟ್​​, ಇರಾನ್​ ಕೃತ್ಯಕ್ಕೆ ಇಸ್ರೇಲ್ ತನ್ನದೇ ಆದ ರೀತಿಯಲ್ಲಿ ಉತ್ತರ ನೀಡಲಿದೆ ಅಂತ ಎಚ್ಚರಿಸಿದ್ದಾರೆ. ಇರಾನ್​​ನ ಈ ಆಕ್ರಮಣಕಾರಿ ಧೋರಣೆ ಇಸ್ರೇಲ್​​ಗೆ ಮಾತ್ರವಲ್ಲ. ಇಡೀ ಜಗತ್ತಿನ ಹಿತಾಸಕ್ತಿಗೇ ಅಪಾಯಕಾರಿಯಾಗಿದೆ ಅಂತ ಕೂಡ ಕಿಡಿಕಾರಿದ್ಧಾರೆ. ಇಸ್ರೇಲಿ ಬಿಲಿಯನೇರ್ ಎಯಲ್​ ಓಫರ್ ಮಾಲೀಕತ್ವದ ಎಂಸಿ ಮೆರ್ಸರ್ ಸ್ಟ್ರೀಟ್​​​​ ಟ್ಯಾಂಕರ್ ಇದಾಗಿದ್ದು, ಗುರುವಾರ ದಾಳಿ ನಡೆದಿತ್ತು. ಇದ್ರಲ್ಲಿ ಬ್ರಿಟನ್ ಮತ್ತು ರೊಮೇನಿಯಾ ಮೂಲದ ಒಬ್ಬೊಬ್ಬರು ಸಿಬ್ಬಂದಿ ಕೂಡ ಪ್ರಾಣ ಕಳ್ಕೊಂಡಿದ್ರು. ಶುಕ್ರವಾರವೇ ಇದ್ರ ಹಿಂದೆ ಇರಾನ್​ದೇ ಕೈವಾಡ ಇದೆ ಅಂತ ಇಸ್ರೇಲ್ ಆರೋಪಿಸಿತ್ತು. ಆದ್ರೆ ಈ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ್ದ ಇರಾನ್​​, ಇವೆಲ್ಲವೂ ಆಧಾರರಹಿತ.. ಇರಾನ್ ಮೇಲೆ ಈ ರೀತಿ ಸುಳ್ಳು ಆರೋಪಗಳನ್ನು ಹೊರಿಸೋದು ಇದೇನು ಹೊಸತಲ್ಲ ಅಂತ ಹೇಳಿತ್ತು. ಅದಕ್ಕೆ ನೆಫ್ತಾಲಿ ಬೆನ್ನೆಟ್ ಈಗ ಈ ರೀತಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಸ್ರೇಲ್​​ಗೆ ಸಂಬಂಧಿಸಿದ ಹಡಗುಗಳ ಮೇಲೆ ಫೆಬ್ರವರಿಯಿಂದ ಈವರೆಗೆ ಇಂತಹ ಸುಮಾರು 5 ದಾಳಿಗಳು ನಡೆದಿವೆ. ಇನ್ನು ಇಸ್ರೇಲ್ ಮಾತ್ರವಲ್ಲ. ಬ್ರಿಟನ್ ಮತ್ತು ಅಮೆರಿಕ ಕೂಡ ಈ ದಾಳಿ ಹಿಂದೆ ಇರಾನ್ ಕೈವಾಡವೇ ಇದೆ. ಇರಾನೇ ಡ್ರೋನ್ ದಾಳಿ ನಡೆಸಿರೋದು ಅಂತ ಆರೋಪಿಸಿವೆ. ಇದ್ರಿಂದ ಈಗಾಗಲೇ ಜಗತ್ತಿನ ಸೂಪರ್​ ಪವರ್ ದೇಶಗಳ ಜೊತೆ ಪರಮಾಣು ಒಪ್ಪಂದದ ವಿಚಾರವಾಗಿ ಸಂಘರ್ಷ ಎದುರಿಸುತ್ತಿರುವ ಇರಾನ್​​​​​​​ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗ್ತಿದೆ.

-masthmagaa.com

Contact Us for Advertisement

Leave a Reply