ಭಾರತ ಪ್ರವಾಸದಲ್ಲಿ ಪುಟಿನ್! ಮೋದಿ ಭೇಟಿ, ಚರ್ಚೆ

masthmagaa.com:
ವಿಶ್ವದ ಟಾಪ್ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಬರೋ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇವತ್ತು ಕೆಲವೇ ಗಂಟೆಗಳ ಅವಧಿಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ. ದೆಹಲಿಗೆ ಬಂದಿಳಿದ ಪುಟಿನ್​​ರನ್ನು ಪ್ರಧಾನಿ ಮೋದಿ ಸ್ವಾಗತಿಸಿ, ಹೈದ್ರಾಬಾದ್ ಹೌಸ್​​ಗೆ ಕರ್ಕೊಂಡೋಗಿ ಮಾತಾಡಿದ್ದಾರೆ. ನಂತರ ಭಾರತ ಮತ್ತು ರಷ್ಯಾ ನಡುವಿನ 21ನೇ ವಾರ್ಷಿಕ ಶೃಂಗಸಭೆ ನಡೆದಿದೆ. 2019ರ ಬ್ರಿಕ್ಸ್ ಶೃಂಗಸಭೆ ಸೈಡ್​​ಲೈನಲ್ಲಿ ಇಬ್ರು ಮಾತಾಡಿದ್ದು ಬಿಟ್ರೆ, ನಂತರ ಇದೇ ಮೊದಲ ಮುಖಾಮುಖಿ ಭೇಟಿಯಾಗಿದೆ. ಈ ವೇಳೆ ಉಭಯದೇಶಗಳ ನಾಯಕರು ರಕ್ಷಣೆ, ವ್ಯಾಪಾರ, ಬಂಡವಾಳ ಹೂಡಿಕೆ, ಶಕ್ತಿ, ಬಾಹ್ಯಾಕಾಶ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಹಕಾರಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕ್ತಿದ್ದಾರೆ. ಎಸ್​​ 400 ಡೀಲ್ ಮತ್ತು ಡೆಲಿವರಿ ವಿಚಾರವಾಗಿಯೂ ಉಭಯನಾಯಕರ ನಡುವೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಇನ್ನೊಂದು ವಿಷ್ಯ ಅಂದ್ರೆ ಕೊರೋನಾ ಬಂದಾಗಿನಿಂದ ವ್ಲಾಡಿಮಿರ್ ಪುಟಿನ್ ರಷ್ಯಾ ಬಿಟ್ಟು ಹೊರಗೆ ಹೋಗಿದ್ದು ಒಂದೇ ಸಲ.. ಅದು ಕಳೆದ ಜೂನ್​​ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿಯಾಗೋಕೆ.. ಅದು ಬಿಟ್ರೆ ಈಗ ಭಾರತಕ್ಕೆ ಬರ್ತಿದ್ದಾರೆ.. ಅಂದ್ರೆ ಕಳೆದೆರಡು ವರ್ಷಗಳಲ್ಲಿ 2ನೇ ವಿದೇಶ ಪ್ರವಾಸ ಇದಾಗಿದೆ. ಅಮೆರಿಕ ಚೀನಾ ವಿರುದ್ಧವಾಗಿ ಭಾರತ, ಜಪಾನ್, ಆಸ್ಟ್ರೇಲಿಯಾ ಸೇರಿಸ್ಕೊಂಡು ಕ್ವಾಡ್ ರಚಿಸಿರೋದು ರಷ್ಯಾಗೂ ಚಿಂತೆಯ ವಿಚಾರವೇ ಆಗಿದೆ. ಕೋಲ್ಡ್​ ವಾರ್ ಸಮಯದಲ್ಲಿ ಸೋವಿಯೆಟ್ ಯೂನಿಯನ್​​ಗೆ ಭಾರತ ತುಂಬಾ ಕ್ಲೋಸ್ ಆಗಿತ್ತು. ಅಲ್ಲಿಂದಲೇ ರಷ್ಯಾ ಮತ್ತು ಭಾರತ ಸಂಬಂಧ ಉತ್ತಮವಾಗೇ ಇದೆ. ಈಗ ರಷ್ಯಾ ಸೋವಿಯತ್ ಕಾಲದಷ್ಟು ಅಂತಾರಾಷ್ಟ್ರೀಯ ರಾಜಕೀಯ ಶಕ್ತಿ ಹೊಂದಿಲ್ಲ. ಆದ್ರೆ ರಕ್ಷಣಾ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಯುದ್ಧೋಪಕರಣಗಳ ವಿಚಾರದಲ್ಲಿ ರಷ್ಯಾ ಈಗಲೂ ಸೂಪರ್ ಪವರ್ ಆಗೇ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಸೇನೆಯ ಎಲ್ಲಾ ವಿಭಾಗಗಳಲ್ಲೂ ಇರೋ ಬಹುತೇಕ ಎಲ್ಲಾ ಶಸ್ತ್ರಾಸ್ತ್ರಗಳು ರಷ್ಯಾ ಮೂಲದ್ದು ಅನ್ನೋದು ಗಮನಿಸಬೇಕಾದ ವಿಚಾರ..

ಪುಟಿನ್ ಭಾರತ ಪ್ರವಾಸದ ಕುರಿತು ಪ್ರತಿಕ್ರಿಯಿಸಿರೋ ರಷ್ಯಾ ವಿದೇಶಾಂಗ ಸಚಿವ ಸರ್ಜೀ ಲವ್​ರೋವ್​, ಭಾರತ ಮತ್ತು ರಷ್ಯಾ ಸಂಬಂಧ ಹಾಳು ಮಾಡೋಕೆ, ಭಾರತ ತನ್ನದೇ ಆದೇಶ ಪಾಲಿಸುವಂತೆ ಮಾಡಲು ಅಮೆರಿಕ ಪ್ರಯತ್ನಿಸಿತು ಅಂತ ಹೇಳಿದ್ರು. ಎಸ್​​​​-400 ಖರೀದಿ ಒಪ್ಪಂದ ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ತುಂಬಾ ಮಹತ್ವದ್ದಾಗಿದೆ ಅಂತ ಕೂಡ ಹೇಳಿದ್ದಾರೆ. ಅಂದಹಾಗೆ ಭಾರತ ರಷ್ಯಾ ಜೊತೆ 2018ರಲ್ಲಿ ಎಸ್​​​ 400 ಖರೀದಿ ಸಂಬಂಧ 500 ಕೋಟಿ ಡಾಲರ್ ಅಂದ್ರೆ 37 ಸಾವಿರ ಕೋಟಿ ರೂಪಾಯಿ ಮೌಲ್ಯದ ಈ ಒಪ್ಪಂದ ಮಾಡ್ಕೊಂಡಿತ್ತು. ಅದಕ್ಕೆ ಅಮೆರಿಕ ವಿರೋಧ ಕೂಡ ವ್ಯಕ್ತಪಡಿಸಿತ್ತು.
-masthmagaa.com

Contact Us for Advertisement

Leave a Reply